ಸಾರಾಂಶ
ಕನ್ನಡಪ್ರಭ ವಾರ್ತೆ ಹರಿಹರ
ತಾಲೂಕಿನ ಮಲೇಬೆನ್ನೂರು ಪಟ್ಟಣದಲ್ಲಿ ಪಾನಿಪುರಿ ಸೇವಿಸಿ ೧೯ ಮಕ್ಕಳು ಅಸ್ವಸ್ಥಗೊಂಡು ಅವರಲ್ಲಿ ಒಬ್ಬ ಬಾಲಕ ಮೃತಪಟ್ಟ ಘಟನೆ ನ್ಯಾಯಾಧೀಶರ ಗಮನ ಸೆಳೆದಿದ್ದು, ನಗರದ ನ್ಯಾಯಾಲಯ ಸಂಕೀರ್ಣದಲ್ಲಿ ಅಧಿಕಾರಿಗಳ ಸಭೆ ನಡೆಸಿ, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಜಾಗ್ರತೆ ವಹಿಸಲು ಸೂಚಿಸಿದರು.ರಂಜಾನ್ ಉಪವಾಸ ನಂತರ ಪಟ್ಟಣದ ಜಾಮೀಯ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ, ಮಸೀದಿ ಮುಂಬದಿಯ ತಳ್ಳು ಗಾಡಿಯಲ್ಲಿ ಪಾನಿಪೂರಿ ಸೇವಿಸಿದ ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಅಂಗಡಿ ಮಾಲೀಕ ಪರಾರಿಯಾಗಿದ್ದು, ಎಫ್‌ಐಆರ್ ದಾಖಲಾಗಿದೆ. ರಂಜಾನ್ ಅವಧಿಯಲ್ಲಿ ಪರಸ್ಥಳದವರೂ ಬಂದು ಅಂಗಡಿ ಹೂಡುವುದರಿಂದ ಆರೋಪಿ ಪತ್ತೆ ಕಾರ್ಯ ನಡೆದಿದೆ ಎಂದು ಪೊಲೀಸರು ಸಭೆಯಲ್ಲಿ ಮಾಹಿತಿ ನೀಡಿದರು.
ಆರೋಗ್ಯ ಇಲಾಖೆ ಅಧಿಕಾರಿಗಳು ಮಾತನಾಡಿ, ಹರಿಹರ ಮತ್ತು ಮಲೇಬೆನ್ನೂರಿನ ಎಲ್ಲಾ ಫುಟ್‌ಪಾತ್ ತಿಂಡಿ ಅಂಗಡಿ ಮಾಲೀಕರಿಗೆ ಸ್ವಚ್ಛತೆ ಕಾಪಾಡಲು ಸೂಚಿಸಲಾಗಿದೆ. ಪಾನಿಪುರಿ ಸೇವಿಸಿದ್ದ ಮಕ್ಕಳಲ್ಲಿ ಒಬ್ಬ ಮೃತಪಟ್ಟಿದ್ದರೆ, ಮತ್ತೊಬ್ಬ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಉಳಿದ ೧೭ ಮಕ್ಕಳ ಆರೋಗ್ಯ ಚೇತರಿಸಿದ್ದು, ಮನೆಗೆ ಮರಳಿದ್ದಾರೆ ಎಂದರು.ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರಾದ ಶಾರದಾದೇವಿ, ಇಂತಹ ಘಟನೆಗಳು ನಡೆದಾಗ ಮಾತ್ರ ಎಚ್ಚೆತ್ತುಕೊಳ್ಳಬಾರದು, ತಿಂಡಿ ಅಂಗಡಿಗಳಿಗೆ ಆಗಾಗ ಭೇಟಿ ನೀಡಿ, ಅಲ್ಲಿ ಸ್ವಚ್ಛತೆ ಕಾಪಾಡುವುದು, ಕುಡಿಯಲು ಶುದ್ಧ ನೀರು ನೀಡುತ್ತಿರುವ ಬಗ್ಗೆ ಪರಿಶೀಲಿಸಬೇಕು. ವಾರಕ್ಕೆ ಒಮ್ಮೆಯಾದರೂ ದಿಢೀರ್ ಭೇಟಿ ನೀಡುತ್ತಿದ್ದರೆ ತಿಂಡಿ ಅಂಗಡಿಯವರು ಎಚ್ಚರಿಕೆಯಿಂದ ಇರುತ್ತಾರೆ ಎಂದರು.
ಜಾಗೃತಿ ಕಾರ್ಯಕ್ರಮ:ತಿಂಡಿ ಅಂಗಡಿ ನಡೆಸುವವರಿಗೆ ಸ್ವಚ್ಛತೆ ಕಾಪಾಡುವ ಕುರಿತು ತಿಳಿಸಿಕೊಡಬೇಕು. ಸಾರ್ವಜನಿಕರಲ್ಲೂ ಶುದ್ಧ ಆಹಾರ, ನೀರು ಸೇವಿಸುವ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಈ ದಿಸೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿಯಿಂದ ಮಾ.೨೨ರಂದು ಮಲೇಬೆನ್ನೂರು ಮತ್ತು ಮಾ.೨೯ರಂದು ಹರಿಹರದಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷೆ ಶಾರದಾದೇವಿ ಸಿ.ಹಟ್ಟಿ, ಪ್ರಧಾನ ಸಿವಿಲ್ ನ್ಯಾಯಾಧೀಶ ಮಹಾದೇವ ಕಾನಟ್ಟಿ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಜ್ಯೋತಿ ಅಶೋಕ್ ಪತ್ತಾರ್, ವೀಣಾ ಕೋಳೇಕರ, ವಕೀಲರ ಸಂಘದ ಅಧ್ಯಕ್ಷ ಬಿ.ಆನಂದ ಕುಮಾರ್, ತಹಸೀಲ್ದಾರ್ ಕೆ.ಎಂ.ಗುರುಬಸವರಾಜ, ಉಪ ತಹಸೀಲ್ದಾರ್ ರವಿ, ಡಿವೈಎಸ್ಪಿ ಬಸವರಾಜ, ಪುರಸಭೆ ಮುಖ್ಯಾಧಿಕಾರಿ ಸುರೇಶ್, ಪಿಎಸ್‌ಐ ಪ್ರಭು ಕೆಳಗಿನಮನಿ, ಆರೋಗ್ಯ ಇಲಾಖೆಯ ಡಾ.ಹನುಮನಾಯ್ಕ, ಡಾ.ಖಾದರ್, ಆಹಾರ ನಿರೀಕ್ಷಕ ರವಿಪ್ರಕಾಶ್, ಕಂದಾಯ ನಿರೀಕ್ಷಕ ಆನಂದ್, ತಾಪಂ ಎ.ಒ ಲಿಂಗರಾಜ್ ಇತರರಿದ್ದರು.ಫುಡ್ ಕೋರ್ಟ್ ನಿರ್ಮಿಸಿ
ನಗರ, ಪಟ್ಟಣದ ಅಲ್ಲಲ್ಲಿ ಫುಡ್ ಕೋರ್ಟ್ ನಿರ್ಮಿಸಿ, ಮೂಲ ಸೌಕರ್ಯ ಕಲ್ಪಿಸಿ, ಬೀದಿ ಬದಿ ತಿಂಡಿ ಅಗಂಡಿಗಳ ಅಲ್ಲಿಗೆ ಸ್ಥಳಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಆರೋಗ್ಯ ಇಲಾಖಾಧಿಕಾರಿಗಳು ಹೋಟೆಲ್, ತಿಂಡಿ ಅಂಗಡಿಗಳಿಗೆ ನಿಯಮಿತವಾಗಿ ಭೇಟಿ ನೀಡಿ ಸ್ವಚ್ಛತೆ ಪರಿಶೀಲಿಸಬೇಕು.ಶಾರದಾದೇವಿ ಸಿ.ಹಟ್ಟಿ, ಹಿರಿಯ ಸಿವಿಲ್ ನ್ಯಾಯಾಧೀಶರು