ಸವಲತ್ತು ಬಳಸಿಕೊಂಡು ಶೈಕ್ಷಣಿಕ ಪ್ರಗತಿ ಸಾಧಿಸಿ

| Published : Jul 23 2024, 12:32 AM IST

ಸಾರಾಂಶ

ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣವನ್ನು ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಶಿಸ್ತು ಸಂಸ್ಕಾರವನ್ನು ರೂಡಿಸಿಕೊಂಡರೆ ಮುಂದಿನ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ಅಧಿಕಾರಿಗಳಾಗಿ ಸೇವೆ ಸಲ್ಲಿಸಬಹುದು

ಕನ್ನಡಪ್ರಭ ವಾರ್ತೆ ಮಾಲೂರು

ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಸರ್ಕಾರ ನೀಡುವ ಸವಲತ್ತುಗಳು ಹಾಗೂ ದಾನಿಗಳು ನೀಡುವ ಶೈಕ್ಷಣಿಕ ಸವಲತ್ತುಗಳನ್ನು ಬಳಸಿಕೊಂಡು ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ಅಕ್ರಂ ಪಾಷ ಹೇಳಿದರು. ಪಟ್ಟಣದ ಕುಂಬಾರಪೇಟೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಅದ್ವಿಕ್ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಶಾಲಾ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ವಿತರಣಾ ಕಾರ್ಯಕ್ರಮದಲ್ಲಿ ನೋಟ್ ಪುಸ್ತಕಗಳನ್ನು ವಿತರಿಸಿ ಮಾತನಾಡಿದದರು.

ಸರ್ಕಾರಿ ಶಾಲೆಯಲ್ಲಿ ಗುಣಾತ್ಮಕ ಶಿಕ್ಷಣ

ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣವನ್ನು ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಶಿಸ್ತು ಸಂಸ್ಕಾರವನ್ನು ರೂಡಿಸಿಕೊಂಡರೆ ಮುಂದಿನ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ಅಧಿಕಾರಿಗಳಾಗಿ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಬಹುದು, ರಾಜ್ಯ ಸರ್ಕಾರ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯಗೊಳಿಸಿದೆ. ೧ ರಿಂದ ೭ನೇ ತರಗತಿಯವರೆಗೆ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡುತ್ತಿದೆ. ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸಲು ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಮಧ್ಯಾಹ್ನದ ಬಿಸಿಯೂಟ, ಇನ್ನಿತರೆ ಸವಲತ್ತುಗಳನ್ನು ಒದಗಿಸಲಾಗುತ್ತಿದೆ ಎಂದರು. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ವ್ಯಾಸಂಗ ಮಾಡಿದರೆ ಸಮಾಜದಲ್ಲಿ ಉನ್ನತ ಮಟ್ಟದ ಅಧಿಕಾರಿಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಬಹುದಾಗಿದೆ, ಉತ್ತಮವಾದ ಗುಣಾತ್ಮಕವಾದ ಶಿಕ್ಷಣವನ್ನು ಪಡೆದಾಗ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ. ಆಗ ಮಾನವೀಯ ಮೌಲ್ಯಗಳನ್ನು ಪಡೆದು ಉತ್ತಮ ನಾಗರಿಕರಾಗಬಹುದು ಆಗ ಸಮಾಜದಲ್ಲಿ ನೆಮ್ಮದಿಯ ಜೀವನ ಸಾಗಿಸಬಹುದು ಎಂದರು.

ಸರ್ಕಾರಿ ಶಾಲೆಯಲ್ಲಿ ಶಿಕ್ಷಣ

ತಾವೂ ಸಹ ಮಧುಗಿರಿ ತಾಲೂಕಿನ ಗಡಿಭಾಗದ ಗ್ರಾಮೀಣ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಶಿಕ್ಷಣವನ್ನು ಪಡೆದಿರುವೆ. ನಾನು ಓದಿದ ಶಾಲೆಗಳನ್ನು ಎಂದಿಗೂ ಮರೆಯುವುದಿಲ್ಲ. ಕಳೆದ ೧೫ ವರ್ಷಗಳ ಹಿಂದೆಯೇ ನಾನು ಓದಿದ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ೫೦ ಲಕ್ಷ ರೂಗಳ ವೆಚ್ಚದಲ್ಲಿ ಶಾಲಾ ಕಟ್ಟಡಗಳನ್ನು ನಿರ್ಮಿಸಿ ಕೊಡಲಾಗಿದೆ. ಅಲ್ಲದೇ ಸ್ಮಾರ್ಟ್ ಕ್ಲಾಸ್ ಮಕ್ಕಳಿಗೆ ಸಮವಸ್ತ್ರ ಅಗತ್ಯವಿರುವ ಶೈಕ್ಷಣಿಕ ಸವಲತ್ತುಗಳನ್ನು ಸಹ ಒದಗಿಸಲಾಗುತ್ತಿದೆ ಎಂದರು.

ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ತಾವು ಓದಿದ ಶಾಲೆಯನ್ನು ಎಂದಿಗೂ ಮರೆಯಬಾರದು ಅಂತಹ ಶಾಲೆಗಳ ಅಭಿವೃದ್ಧಿಗೆ ಸರ್ಕಾರದ ಜೊತೆಗೆ ಕೈಜೋಡಿಸಬೇಕು. ಶಿಕ್ಷಣ, ಸಂಸ್ಕಾರ, ಶಿಸ್ತು ಪಾಲನೆ ಮಾಡುವ ಮೂಲಕ ತಂದೆ ತಾಯಿ ಮತ್ತು ಹಿರಿಯರನ್ನು ಮಕ್ಕಳು ಗೌರವಿಸಬೇಕು ಎಂದರು.ಮಕ್ಕಳಿಗೆ ನೋಟ್‌ಬುಕ್‌ ವಿತರಣೆ

ಇಲ್ಲಿನ ಅದ್ವಿಕ್ ಫೌಂಡೇಶನ್ ಸಂಸ್ಥೆಯವರು ತಾಲ್ಲೂಕಿನಲ್ಲಿರುವ ಸರ್ಕಾರಿ ಶಾಲೆಯ ಮಕ್ಕಳಿಗೆ ನೋಟ್ ಪುಸ್ತಕ ಲೇಖನಿ ಸಾಮಗ್ರಿಗಳನ್ನು ವಿತರಣೆ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ, ಮುಂಬರುವ ದಿನಗಳಲ್ಲಿಯೂ ಸಹ ತಾಲೂಕಿನಾದ್ಯಂತ ಮಕ್ಕಳಿಗೆ ಅಗತ್ಯವಿರುವ ಶೈಕ್ಷಣಿಕ ಸಲಕರಣೆಗಳನ್ನು ವಿತರಣೆ ಮಾಡುವಂತೆ ಹೇಳಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಕೆ.ರಮೇಶ್, ಬಿಇಒ ಚಂದ್ರಕಲಾ, ಗ್ರೇಡ್-2 ತಹಸೀಲ್ದಾರ್ ಹರಿಪ್ರಸಾದ್, ಪುರಸಭಾ ಸದಸ್ಯ ಶ್ರೀನಿವಾಸ್, ಮುಖ್ಯಾಧಿಕಾರಿ ಎಬಿ ಪ್ರದೀಪ್, ಅದ್ವಿಕ್ ಫೌಂಡೇಶನ್ ಸಂಸ್ಥೆಯ ಅಧ್ಯಕ್ಷ ಮಂಜುನಾಥ್, ಸದಸ್ಯರಾದ ಶಿವಕುಮಾರ್, ಲೋಕೇಶ್, ಕಾರ್ತಿಕ್,ಶ್ರೀಕಾಂತ್, ರಾಹುಲ್, ವಿನೋಧ್, ಮುಖ್ಯ ಶಿಕ್ಷಕಿ ಆಶಾ, ಇನ್ನಿತರರು ಹಾಜರಿದ್ದರು.