ಹನುಮ ಮಾಲಾಧಾರಿಗಳಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಿ: ಜಿಲ್ಲಾಧಿಕಾರಿ

| Published : Nov 27 2024, 01:01 AM IST

ಸಾರಾಂಶ

ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದ ಅಂಜನಾದ್ರಿ ಪರ್ವತದಲ್ಲಿ ಹನುಮಮಾಲಾ ವಿಸರ್ಜನೆಗಾಗಿ ಸುಮಾರು 2 ಲಕ್ಷಕ್ಕೂ ಹೆಚ್ಚು ಜನ ಸೇರುವ ಸಂಭವವಿದೆ.

ಡಿ. 12 ಮತ್ತು 13ರಂದು ಅಂಜನಾದ್ರಿಯಲ್ಲಿ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಕೊಪ್ಪಳ

ಹನುಮನ ಜನ್ಮಸ್ಥಳವಾದ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದಲ್ಲಿ ಡಿ. 12 ಮತ್ತು 13ರಂದು ನಡೆಯುವ ಹನುಮಮಾಲಾ ವಿಸರ್ಜನೆಯಲ್ಲಿ ಪಾಲ್ಗೊಳ್ಳುವ ಹನುಮ ಮಾಲಾಧಾರಿಗಳಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಬೇಕೆಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದ್ದಾರೆ.

ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಕರೆದ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದ ಅಂಜನಾದ್ರಿ ಪರ್ವತದಲ್ಲಿ ಹನುಮಮಾಲಾ ವಿಸರ್ಜನೆಗಾಗಿ ಸುಮಾರು 2 ಲಕ್ಷಕ್ಕೂ ಹೆಚ್ಚು ಜನ ಸೇರುವ ಸಂಭವವಿದೆ. ಈ ಹಿನ್ನೆಲೆ ಇಲ್ಲಿಗೆ ಬರುವ ಭಕ್ತರಿಗೆ ಸೂಕ್ತ ಭದ್ರತಾ ವ್ಯವಸ್ಥೆ, ಆಹಾರ, ಕುಡಿಯುವ ನೀರು, ವಸತಿ ಸೇರಿದಂತೆ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯ ಒದಗಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವುದರಿಂದ ದೇವಾಲಯದ ಆವರಣದಲ್ಲಿ ಶುಚಿತ್ವ ಕಾಯ್ದುಕೊಳ್ಳಲು ಹೆಚ್ಚಿನ ಒತ್ತು ಕೊಡಬೇಕು. ಆಹಾರದ ಗುಣಮಟ್ಟ ಪರಿಶೀಲನೆ ನಂತರವೇ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಪ್ರಸಾದ ವಿತರಣೆಗೆ ಅಗತ್ಯ ಕೌಂಟರ್‌ಗಳನ್ನು ತೆರೆದು ಸಾರ್ವಜನಿಕರಿಗೂ ಸುಲಭವಾಗಿ ಪ್ರಸಾದ ಸಿಗುವಂತೆ ಮಾಡಬೇಕು ಎಂದರು.

ಕಾರ್ಯಕ್ರಮ ಸುವ್ಯವಸ್ಥಿತವಾಗಿ ನಡೆಯಲು ರಚಿಸಲಾದ ವಿವಿಧ ಸಮಿತಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಯಾವುದೇ ಗೊಂದಲ, ತೊಂದರೆಗೆ ಆಸ್ಪದ ಕೊಡದ ರೀತಿಯಲ್ಲಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಮಾತನಾಡಿ, ಹನುಮಮಾಲಾ ವಿಸರ್ಜನೆಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥಿತ ರೀತಿಯಲ್ಲಿ ಸಮಿತಿಗಳು ಕಳೆದ ವರ್ಷದಂತೆ ಕಾರ್ಯನಿರ್ವಹಿಸಲಿದ್ದು, ಮೂಲಭೂತ ಸೌಕರ್ಯ ಸಮಿತಿ, ಆಹಾರ, ರಸ್ತೆ ನಿರ್ವಹಣಾ, ಆರೋಗ್ಯ, ಸ್ವಚ್ಛತಾ, ಪ್ರಸಾದ ವಿತರಣಾ, ಸಾರಿಗೆ, ವಿದ್ಯುತ್, ಭದ್ರತಾ, ಪ್ರಚಾರ, ಶಿಷ್ಠಾಚಾರ, ಅಬಕಾರಿ ಸಮಿತಿ, ಅರಣ್ಯ, ಸಹಾಯವಾಣಿ ಕೇಂದ್ರ ಸಮಿತಿ ಸೇರಿದಂತೆ ಒಟ್ಟು 14 ಸಮಿತಿಗಳನ್ನು ರಚಿಸಿ, ಆಯಾ ಇಲಾಖೆಗಳ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಪ್ರಾದೇಶಿಕ ಸಾರಿಗೆ ಅಧಿಕಾರಿ ಎಲ್.ಬಿ. ನಾಲವಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ, ಆಹಾರ ಇಲಾಖೆ, ಪೊಲೀಸ್, ನಗರಸಭೆ, ಅರಣ್ಯ ಇಲಾಖೆ ಸೇರಿದಂತೆ ಇತರೆ ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.