ಮತದಾನಕ್ಕೆ ಎಲ್ಲಾ ರೀತಿ ಸಿದ್ಧತೆ ಮಾಡಿಕೊಳ್ಳಿ: ಶ್ರೀಕೃಷ್ಣ

| Published : Mar 23 2024, 01:00 AM IST

ಮತದಾನಕ್ಕೆ ಎಲ್ಲಾ ರೀತಿ ಸಿದ್ಧತೆ ಮಾಡಿಕೊಳ್ಳಿ: ಶ್ರೀಕೃಷ್ಣ
Share this Article
  • FB
  • TW
  • Linkdin
  • Email

ಸಾರಾಂಶ

ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಶಹಾಪುರ ತಾಲೂಕಿನ ಹತ್ತಿಗೂಡೂರು ಗ್ರಾಮದ ಮತಗಟ್ಟೆ ಕೇಂದ್ರಕ್ಕೆ ಪ್ರಾದೇಶಿಕ ಆಯುಕ್ತ ಶ್ರೀಕೃಷ್ಣ ವಾಜಪೇಯಿ ಭೇಟಿ ನೀಡಿ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಶಹಾಪುರ

ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಮೇ.7ರಂದು ಮತದಾನ ನಡೆಯಲಿದ್ದು, ಎಲ್ಲಾ ರೀತಿ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಪ್ರಾದೇಶಿಕ ಆಯುಕ್ತ ಶ್ರೀಕೃಷ್ಣ ಬಾಜಪೇಯಿ ಚುನಾವಣಾ ಕರ್ತವ್ಯ ನಿರತ ಅಧಿಕಾರಿಗಳಿಗೆ ಸೂಚಿಸಿದರು.

ರಾಯಚೂರು ಮತಕ್ಷೇತ್ರದ ವ್ಯಾಪ್ತಿಗೆ ಒಳಪಡುವ ತಾಲೂಕಿನ ಹತ್ತಿಗೂಡೂರು ಗ್ರಾಮದ ಮತಗಟ್ಟೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಗ್ರಾಮದಲ್ಲಿ 85 ವರ್ಷ ವಯೋಮಾನದ ಮತದಾರರು ಹಾಗೂ ವಿಕಲಚೇತನ ಮತದಾರರ ಬಗ್ಗೆ ಮಾಹಿತಿ ಪಡೆದು ಮಾತನಾಡಿದರು.

ಮನೆಮನೆಯಲ್ಲಿ ಮತದಾನ ಮಾಡಲು ಇಚ್ಛಿಸುವ ಮತದಾರರು ಚುನಾವಣೆ ಅಧಿಕೃತ ಅಧಿಸೂಚನೆ ದಿನಾಂಕದ ಐದು ದಿನಗಳ ಒಳಗಾಗಿ ಆಯಾ ಬೂತ್ ಮಟ್ಟದ ಅಧಿಕಾರಿ ಮೂಲಕ ಚುನಾವಣಾಧಿಕಾರಿಗೆ ಅರ್ಜಿ ಸಲ್ಲಿಸಬಹುದು. ಚುನಾವಣಾ ಆಯೋಗವು 85 ವರ್ಷ ಮೇಲ್ಪಟ್ಟ ನಾಗರಿಕರು ಮತ್ತು ಅಂಗವಿಕಲರಿಗೆ ಮನೆಯಿಂದಲೇ ಮತದಾನ ಸೌಲಭ್ಯ ಘೋಷಿಸಿದ್ದು, ಲೋಕಸಭೆ ಚುನಾವಣೆಗೆ ಮೇ 7 ರಂದು ಮತದಾನ ನಡೆಯಲಿದ್ದು, ಮತದಾನಕ್ಕೆ ಯಾವುದೇ ರೀತಿಯ ಲೋಪವಾಗದಂತೆ ಎಚ್ಚರ ವಹಿಸಬೇಕೆಂದರು.

ಮತಗಟ್ಟೆ ವ್ಯಾಪ್ತಿ ಸುತ್ತಲೂ 100 ಮೀಟರ್‌ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಮತದಾರರನ್ನು ಹೊರತುಪಡಿಸಿ ಇತರೆ ಯಾರಿಗೂ ಈ ವ್ಯಾಪ್ತಿಯಲ್ಲಿ ಇರಲು ಅವಕಾಶ ಕೊಡಬಾರದು. 200 ಮೀಟರ್‌ ವ್ಯಾಪ್ತಿಯಲ್ಲಿ 144 ಸೆಕ್ಷನ್‌ ಜಾರಿಯಲ್ಲಿದ್ದು ಈ ವ್ಯಾಪ್ತಿಯಲ್ಲಿ ಯಾವುದೇ ರಾಜಕೀಯ ಚಟುವಟಿಕೆಗಳು ಸಹ ನಡೆಯದಂತೆ ನೋಡಿಕೊಳ್ಳಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.

85 ವರ್ಷ ಮೇಲ್ಪಟ್ಟ ಮತದಾರರು ಮತ್ತು ಶೇ.40ರಷ್ಟು ಅಂಗವೈಕಲ್ಯ ಹೊಂದಿರುವ ಅಂಗವಿಕಲರು ಮನೆಯಿಂದಲೇ ಮತ ಚಲಾಯಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮತದಾನ ಕೇಂದ್ರಗಳಲ್ಲಿ ಸ್ವಯಂಸೇವಕರು ಮತ್ತು ಗಾಲಿಕುರ್ಚಿ ನಿಯೋಜಿಸಲಾಗುವುದು. ವಿಕಲಚೇತನರಿಗೆ ಮತಗಟ್ಟೆ ಕೇಂದ್ರಗಳಲ್ಲಿ ವೀಲ್ ಚೇರ್ ವ್ಯವಸ್ಥೆ ಕಲ್ಪಿಸಲಾಗುವುದು. ಮತಗಟ್ಟೆ ಕೇಂದ್ರಗಳಲ್ಲಿ ಖಚಿತವಾದ ಕನಿಷ್ಠ ಸೌಲಭ್ಯಗಳಿಗೆ ಒತ್ತು ನೀಡಲಾಗಿದೆ ಎಂದು ಸಹಾಯಕ ಆಯುಕ್ತ ಪ್ರಕಾಶ್ ಕುದರಿಯವರು ಪ್ರಾದೇಶಿಕ ಆಯುಕ್ತರಿಗೆ ಮಾಹಿತಿ ನೀಡಿದರು.

ಈ ವೇಳೆ ತಹಸೀಲ್ದಾರ್ ಉಮಾಕಾಂತ್ ಹಳ್ಳೆ, ತಾಲೂಕು ಪಂಚಾಯ್ತಿ ಕಾರ್ಯನಿರ್ವಾಣಾಧಿಕಾರಿ ಪ್ರವೀಣ್ ಕುಮಾರ್, ಬಿಎಲ್ಒ ಗಳು ಇದ್ದರು.