ಸುಪ್ರೀಂಕೋರ್ಟ್ ಆದೇಶದಂತೆ ನಗರಪಾಲಿಕೆ ಅಧಿಕಾರಿಗಳು ನಗರದೆಲ್ಲೆಡೆ ಫುಟ್‌ಪಾತ್ ಅಂಗಡಿಗಳನ್ನು ತೆರವು ಮಾಡಿಸಿರುವುದನ್ನು ವಿರೋಧಿಸಿ ವ್ಯಾಪಾರಿಗಳಿಗೆ ಪರ್ಯಾಯ ಜಾಗದ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿ ಸಮೃದ್ಧಿ ಬೀದಿಬದಿ ವ್ಯಾಪಾರಿಗಳ ಸಂಘದ ನೇತೃತ್ವದಲ್ಲಿ ವ್ಯಾಪಾರಿಗಳು ಸೋಮವಾರ ತಮಟೆ ಚಳವಳಿ ನಡೆಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಸುಪ್ರೀಂಕೋರ್ಟ್ ಆದೇಶದಂತೆ ನಗರಪಾಲಿಕೆ ಅಧಿಕಾರಿಗಳು ನಗರದೆಲ್ಲೆಡೆ ಫುಟ್‌ಪಾತ್ ಅಂಗಡಿಗಳನ್ನು ತೆರವು ಮಾಡಿಸಿರುವುದನ್ನು ವಿರೋಧಿಸಿ ವ್ಯಾಪಾರಿಗಳಿಗೆ ಪರ್ಯಾಯ ಜಾಗದ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿ ಸಮೃದ್ಧಿ ಬೀದಿಬದಿ ವ್ಯಾಪಾರಿಗಳ ಸಂಘದ ನೇತೃತ್ವದಲ್ಲಿ ವ್ಯಾಪಾರಿಗಳು ಸೋಮವಾರ ತಮಟೆ ಚಳವಳಿ ನಡೆಸಿದರು.

ವಿವಿಧ ಕನ್ನಡಪರ ಸಂಘಟನೆಗಳು, ಜಿಲ್ಲಾ ಜೆಡಿಎಸ್, ದಲಿತ ಸಂಘರ್ಷ ಸಮಿತಿ ಮತ್ತಿತರ ಸಂಘಟನೆಗಳ ಮುಖಂಡರು ಚಳವಳಿಯನ್ನು ಬೆಂಬಲಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಗುಬ್ಬಿ ತಾಲೂಕು ಗೊಲ್ಲಹಳ್ಳಿ ಮಠದ ವಿಭವ ವಿದ್ಯಾಶಂಕರ ಸ್ವಾಮೀಜಿ ಅಂಬೇಡ್ಕರ್ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಪ್ರತಿಭಟನೆಗೆ ಚಾಲನೆ ನೀಡಿದರು.

ಸುಪ್ರೀಂಕೋರ್ಟ್ ಆದೇಶದಂತೆ ಅಧಿಕಾರಿಗಳು ಬೀದಿಬದಿಯ ಅಂಗಡಿಗಳನ್ನು ತೆರವು ಮಾಡಿದ್ದು, ಇದರಿಂದ ಬೀದಿಬದಿ ವ್ಯಾಪಾರ ಮಾಡಿಕೊಂಡು ಜೀವನ ನಿರ್ವಹಣೆ ಮಾಡಿಕೊಂಡಿದ್ದ ಬಡಕುಟುಂಬಗಳು ಬೀದಿಪಾಲಾಗಿವೆ. ಈ ಕುಟುಂಬಗಳಿಗೆ ಸರ್ಕಾರ, ಜಿಲ್ಲಾಡಳಿತ ಪುನರ್ ವ್ಯವಸ್ಥೆ ಕಲ್ಪಿಸಿ ಅವರ ಬದುಕಿಗೆ ನೆರವಾಗಬೇಕು ಎಂದು ಸ್ವಾಮೀಜಿ ಹೇಳಿದರು.

ಕನ್ನಡ ಸೇನೆ ಜಿಲ್ಲಾಧ್ಯಕ್ಷ ಡಾ.ಧನಿಯಾಕುಮಾರ್ ಮಾತನಾಡಿ, ಫುಟ್‌ಪಾತ್ ಅಂಗಡಿಗಳ ತೆರವಿನಿಂದಾಗಿ ನಗರದ ಸಾವಿರಾರು ಬೀದಿಬದಿ ವ್ಯಾಪಾರಿಗಳ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಕಾನೂನು ಕೇವಲ ಬಡವರಿಗೆ ಮಾತ್ರ ಅನ್ವಯವಾಗುತ್ತದೆಯೆ? ರಾಜಕಾಲುವೆ ಮೇಲೆ ಕಟ್ಟಡಕಟ್ಟಿದ ಶ್ರೀಮಂತರು, ಪಾರ್ಕ ಒತ್ತುವರಿ ಮಾಡಿಕೊಂಡವರಿಗೆ ಕಾನೂನು ಕ್ರಮ ಇಲ್ಲವೆ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ನಗರಪಾಲಿಕೆ ಜೆಸಿಬಿಗಳು ಬಡವರ ಫುಟ್‌ಪಾತ್‌ ಅಂಗಡಿ ಮೇಲೆ ದಾಳಿ ಮಾಡುತ್ತವೆ, ಶ್ರೀಮಂತರು ಒತ್ತುವರಿ ಮಾಡಿಕೊಂಡಜಾಗದ ಮೇಲೆ ದಾಳಿ ಮಾಡುವುದಿಲ್ಲವೇಕೆ? ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಡಾ. ಧನಿಯಾಕುಮಾರ್, ತೆರವು ಮಾಡಿರುವ ಫುಟ್‌ಪಾತ್ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ನಗರಪಾಲಿಕೆ ಕಚೇರಿ ಎದುರು ತಮಟೆ ಬಾರಿಸಿ ಚಳವಳಿ ನಡೆಸಿದರು. ನಂತರ ಜಿಲ್ಲಾಧಿಕಾರಿಗಳ ಕಚೇರಿವರೆಗೂ ಪಾದಯಾತ್ರೆ ಸಾಗಿ ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿದರು.

ಸಮೃದ್ಧಿ ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಟಿ.ಕೆ. ಮಂಜುನಾಥ್, ಉಪಾಧ್ಯಕ್ಷ ಗಂಗಸಂದ್ರ ರಾಜು, ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್, ರಾಮಯ್ಯ, ಮುಖಂಡರಾದ ಮೀಸೆ ಸತೀಶ್, ಮಂಜು ಭಾರ್ಗವ್, ಜೆಡಿಎಸ್ ನಗರ ಘಟಕ ಅಧ್ಯಕ್ಷ ಟಿ.ಎಚ್. ಜಯರಾಮ್, ಕಾರ್ಯಾಧ್ಯಕ್ಷ ಮೋಹನ್‌ಕುಮಾರ್, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ರೇಖಾ ರಾಜ್‌ಗೌಡ, ಎಸ್.ಸಿ. ಘಟಕ ಜಿಲ್ಲಾಧ್ಯಕ್ಷ ಬೆಳಗುಂಬ ವೆಂಕಟೇಶ್, ಪ್ರಚಾರ ಸಮಿತಿ ಅಧ್ಯಕ್ಷ ಕೆಂಪರಾಜು, ನಗರಪಾಲಿಕೆ ಮಾಜಿ ಸದಸ್ಯ ಎ. ಶ್ರೀನಿವಾಸ್, ಮುಖಂಡರಾದ ಮೀಸೆ ಸತೀಶ್, ಜಹಂಗೀರ್‌ ರವೀಶ್, ನೇತಾಜಿ ಶ್ರೀಧರ್, ಮಂಡಿ ಟಿ.ಎನ್. ಚಂದ್ರಶೇಖರ್, ಕನ್ನಡ ಸೇನೆ ನಗರ ಅಧ್ಯಕ್ಷ ವಿಠಲ್ ಸೇರಿದಂತೆಎಲ್ಲಾ ಬಡಾವಣೆಗಳ ಬೀದಿಬದಿ ವ್ಯಾಪಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.