ಹಿಂದುಳಿದ ಇಂಡಿಯನ್ನೇ ಜಿಲ್ಲೆಯಾಗಿ ಮಾಡಿ: ಮಹಿಬೂಬ ಅರಬ

| Published : Jan 10 2024, 01:46 AM IST

ಹಿಂದುಳಿದ ಇಂಡಿಯನ್ನೇ ಜಿಲ್ಲೆಯಾಗಿ ಮಾಡಿ: ಮಹಿಬೂಬ ಅರಬ
Share this Article
  • FB
  • TW
  • Linkdin
  • Email

ಸಾರಾಂಶ

ಕೂಡಲೇ ಇಂಡಿ ಜಿಲ್ಲೆಯಾದರೆ ಯಾವುದೇ ಒಂದು ವಿಧದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಹೀಗಾಗಿ ಇಂಡಿಯನ್ನು ಜಿಲ್ಲಾ ಕೇಂದ್ರವನ್ನಾಗಿ ರಚಿಸಬೇಕು ಎಂದು ಕಾಂಗ್ರೆಸ್ ಮುಖಂಡ ಮಹಿಬೂಬ ಅರಬ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಇಂಡಿ

ನಂಜುಂಡಪ್ಪ ವರದಿಯಂತೆ ವಿಜಯಪುರ ಜಿಲ್ಲೆಯಲ್ಲಿ ಇಂಡಿ ಅತ್ಯಂತ ಹಿಂದುಳಿದ ಭಾಗ. ಭೀಮಾನದಿ ಈ ಭಾಗದಲ್ಲಿದ್ದರೂ ಬ್ರಿಟೀಷರ ಕಾಲದಿಂದಲೂ ಸದಾ ಭೀಕರ ಬರಗಾಲಕ್ಕೆ ತುತ್ತಾಗಿರುವ ಈ ಭಾಗದ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಇಂಡಿ ಜಿಲ್ಲೆಯಾದರೆ ಯಾವುದೇ ಒಂದು ವಿಧದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಹೀಗಾಗಿ ಇಂಡಿಯನ್ನು ಜಿಲ್ಲಾ ಕೇಂದ್ರವನ್ನಾಗಿ ರಚಿಸಬೇಕು ಎಂದು ಕಾಂಗ್ರೆಸ್ ಮುಖಂಡ ಮಹಿಬೂಬ ಅರಬ ಸರ್ಕಾರವನ್ನು ಆಗ್ರಹಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಯಶವಂತರಾಯಗೌಡ ಪಾಟೀಲ ದೂರದೃಷ್ಟಿಯ ನಾಯಕರಾಗಿದ್ದು ಮುಂದೊಂದು ದಿನ ಸರ್ಕಾರದ ಮಟ್ಟದಲ್ಲಿ ಜಿಲ್ಲೆಯಾಗುವ ಸಮಯ ಬಂದರೆ ಇಂಡಿಯೇ ಪ್ರಥಮ ಆದ್ಯತೆ ಎಂಬ ರೀತಿಯಲ್ಲಿ ಸರ್ವವಿಧದಲ್ಲಿ ಸುಧಾರಣೆ ಮಾಡಿದ್ದಾರೆ. ಭೀಕರ ಬರಕ್ಕೆ ತುತ್ತಾಗಿ ತೊಂದರೆ ಅನುಭವಿಸುತ್ತಿರುವ ಇಂಡಿ, ಸಿಂದಗಿ, ಚಡಚಣ, ದೇವರ ಹಿಪ್ಪರಗಿ, ಆಲಮೇಲ ಭಾಗವನ್ನು ಸಂಪೂರ್ಣ ನೀರಾವರಿ ಮಾಡುವ ಮೂಲಕ ಸರ್ವವಿಧದಲ್ಲಿ ಅಭಿವೃದ್ಧಿ ಮಾಡಬೇಕು ಎಂದು ಪ್ರತಿ ಅಧಿವೇಶನದಲ್ಲಿ ಶಾಸಕರು ಒತ್ತಾಯಿಸುತ್ತಲೇ ಬಂದಿದ್ದಾರೆ. ಇಂಡಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು ಎಂದು ಜಿಲ್ಲೆಯಲ್ಲಿಯೇ ಪ್ರಥಮವಾಗಿ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದು ಯಶವಂತರಾಯಗೌಡರೇ. ಇಂದು ಕೆಲ ಶಾಸಕರು ನಮ್ಮ ತಾಲೂಕು ಜಿಲ್ಲೆ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಅಧಿವೇಶನದಲ್ಲಿ ಪ್ರಸ್ತಾವ ಮಾಡುವ ಗೋಜಿಗೆ ಏಕೆ ಹೋಗಿಲ್ಲ ಎಂದು ಅವರು ಪ್ರಶ್ನಿಸಿದರು.

ವಿಧಾನಸಭೆ ಅಧಿವೇಶನದಲ್ಲಿ ಇಂಡಿ ಜಿಲ್ಲೆಯಾಗಿಸಬೇಕು ಎಂದು ಸುಮ್ಮನೆ ಧ್ವನಿಮೊಳಗಿಸಿಲ್ಲ. ಇಂಡಿ ಉಪ ವಿಭಾಗೀಯ ಕೇಂದ್ರವಾಗಿದ್ದು, ಇಲ್ಲಿ ಮೂಲಸೌಲಭ್ಯಗಳು ಇರುವುದರಿಂದ ಜಿಲ್ಲಾ ಕೇಂದ್ರ ಆಗುವ ಅರ್ಹತೆ ಇದೆ ಎಂದು ಜಿಲ್ಲಾ ಕೇಂದ್ರಕ್ಕಾಗಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ಬೇರೆಯವರು ಜಿಲ್ಲೆ ಕೇಳುವುದರಲ್ಲಿ ತಪ್ಪೇನಿಲ್ಲ. ಆದರೆ ಪ್ರಪ್ರಥಮವಾಗಿ ಜಿಲ್ಲೆಯ ಕುರಿತು ಕೂಗು ಮೊಳಗಿಸಿದವರು ಇಂಡಿ ಶಾಸಕರು. ಮೊಸರಿನಲ್ಲಿ ಕಲ್ಲು ಹುಡುಕುವುದು ಬೇಡ, ಬ್ರಿಟೀಷರ ಕಾಲದಿಂದಲೂ ಇಂಡಿ ಕಂದಾಯ ಉಪ ವಿಭಾಗ, ಪೊಲೀಸ್‌ ಉಪ ವಿಭಾಗ, ರಾಷ್ಟ್ರೀಯ ಹೆದ್ದಾರಿ, ರೈಲುನಿಲ್ದಾಣ ಹೀಗೆ ಸಾಕಷ್ಟು ಸೌಲಭ್ಯಗಳು ಇರುವುದರಿಂದ ಜಿಲ್ಲೆಯಾಗಿಸಲು ಯಾವುದೇ ಕೊರತೆ ಇರುವುದಿಲ್ಲ. ಇಂಡಿ ಜಿಲ್ಲೆ ಮಾಡದಿದ್ದರೆ ಮುಂಬರುವ ದಿನಗಳಲ್ಲಿ ರಾಜ್ಯ ವ್ಯಾಪಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.