ಹಾಲುಮತದ ಅಭಿವೃದ್ಧಿಗಾಗಿ ಬಿಜೆಪಿ ಹಗಲಿರುಳು ಶ್ರಮಿಸಿದೆ. ಸಿದ್ದರಾಮಯ್ಯ ಸರ್ಕಾರ ಸಮಾಜದ ಹೆಸರು ಬಳಸಿಕೊಂಡು ಹಗರಣಗಳ ಜೊತೆಗೆ ಕಾಲಹರಣ ಮಾಡುವುದನ್ನು ಬಿಟ್ಟರೆ ಸಾಧನೆ ಶೂನ್ಯವಾಗಿದೆ. ಅಭಿವೃದ್ಧಿ ಭರವಸೆಗಾಗಿ ಬಿಜೆಪಿ ಬೆಂಬಲಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಹಾಲುಮತದ ಅಭಿವೃದ್ಧಿಗಾಗಿ ಬಿಜೆಪಿ ಹಗಲಿರುಳು ಶ್ರಮಿಸಿದೆ. ಸಿದ್ದರಾಮಯ್ಯ ಸರ್ಕಾರ ಸಮಾಜದ ಹೆಸರು ಬಳಸಿಕೊಂಡು ಹಗರಣಗಳ ಜೊತೆಗೆ ಕಾಲಹರಣ ಮಾಡುವುದನ್ನು ಬಿಟ್ಟರೆ ಸಾಧನೆ ಶೂನ್ಯವಾಗಿದೆ. ಅಭಿವೃದ್ಧಿ ಭರವಸೆಗಾಗಿ ಬಿಜೆಪಿ ಬೆಂಬಲಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದ ಉಪಚುನಾವಣೆ ಹಿನ್ನೆಲೆ ನಾಯನೇಗಲಿಯಲ್ಲಿ ಹಮ್ಮಿಕೊಂಡ ಮತಪ್ರಚಾರ ಸಭೆಯನ್ನು ಹೆಗಲ ಮೇಲೆ ಕಂಬಳಿ ಹೊದ್ದುಕೊಂಡು ಡೊಳ್ಳು ಭಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ಈ ಭಾಗಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಲವು ಬಾರಿ ಬಂದು ಹೋಗಿದ್ದು ಹಲವಾರು ಅಭಿವೃದ್ಧಿ ಯೋಜನೆಗಳನ್ನು ಕೊಟ್ಟಿದ್ದಾರೆ. ಕಾಂಗ್ರೆಸ್ ಚುನಾವಣೆಯ ಸಂದರ್ಭದಲ್ಲಿ ಬಂದು ಮತ ಪಡೆದು ಕೆಲಸ ಮಾಡದೇ ಹಗರಣದ ಜೊತೆ ಕಾಲಹರಣ ಮಾಡುತ್ತಿದೆ. ಕಾಂಗ್ರೆಸ್ ಅಧಿಕಾರದಿಂದ ರಾಜ್ಯ ಅಭಿವೃದ್ಧಿಯಾಗಲು ಸಾಧ್ಯವಿಲ್ಲ ಎಂದು ಆರೋಪಿಸಿದರು.ಮಾಜಿ ಸಚಿವ ರಾಜು ಗೌಡರ ಮಾತನಾಡಿ, ಮತಪ್ರಚಾರದಲ್ಲಿಯೇ ವಿಜಯೋತ್ಸವದ ಉತ್ಸಾಹ ಕಾರ್ಯಕರ್ತರಲ್ಲಿ ಕಾಣುತ್ತಿದೆ. ವೀರಣ್ಣ ಚರಂತಿಮಠರಿಗೆ ಹಾಕಿದ ಮತ ಮೌಲ್ಯ ಕಳೆದುಕೊಳ್ಳುವುದಿಲ್ಲ. ಮತಗಳು ಹೆಚ್ಚಾದಂತೆ ಅಭಿವೃದ್ಧಿ ಹೆಚ್ಚುತ್ತದೆ. ಕಾಂಗ್ರೆಸ್‌ನ ರಾತ್ರಿಪ್ರಚಾರ ಈ ಬಾರಿ ನಡೆಯಲ್ಲ ಎಂದರು.

ವಿಪ ಸದಸ್ಯ ಪಿ.ಎಚ್ ಪೂಜಾರ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಈ ಭಾಗದ ಹಳ್ಳಿಗಳಿಗೆ ಏನು ಕೊಡುಗೆ ಕೊಟ್ಟಿದ್ದೀರಿ ಎಂದು ಕೇಳಬೇಕು. ಪ್ರವಾಹ, ಬೆಳೆಹಾನಿ, ನಿರುದ್ಯೋಗ, ಮೂಲಸೌಕರ್ಯ ನೀಡಲು ಬರದೇ ಪ್ರಚಾರಕ್ಕೆ ಬಂದರೆ ಮತ ಹೇಗೆ ನೀಡುತ್ತಾರೆ? ಹುಟ್ಟುವ ಮಗುವಿನ ಮೇಲೂ ಸಾಲ ಹೊರಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ಆರೋಪಿಸಿದರು.ಮಾಜಿ ಸಚಿವ ಮುರಗೇಶ ನಿರಾಣಿ ಮಾತನಾಡಿ, ಚುನಾವಣೆಯ ದಿನ ಎಲ್ಲರೂ ಬಿಜೆಪಿ ಬೆಂಬಲಿಸಿ. ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಪಕ್ಷದ ಆಡಳಿತವನ್ನು ನೋಡಿದ್ದೀರಿ. ಜಾಗತಿಕ ಮಟ್ಟದಲ್ಲಿ ಕೆಳಗಿನ ಸ್ಥಾನದಲ್ಲಿದ್ದ ದೇಶವನ್ನು ಅಗ್ರಸ್ಥಾನಕ್ಕೆ ತರುವ ಕೆಲಸವನ್ನು ಮೋದಿ ಮಾಡಿದ್ದು. ಸ್ವಾವಲಂಬನೆ, ಆತ್ಮ ನಿರ್ಭರ ಭಾರತ ನಿರ್ಮಾಣಕ್ಕೆ ಬಿಜೆಪಿ ಬೇಕೇ ಬೇಕು. ಬಾಲಕೋಟೆಯ ಬಿವಿವಿ ಸಂಘ ಪ್ರಾಮಾಣಿಕ ಪ್ರಯತ್ನದಿಂದ 54 ಸಾವಿರ ಜನಕ್ಕೆ ಶಿಕ್ಷಣ ನೀಡುತ್ತಿದ್ದು ಅದಕ್ಕೆ ಮೂಲ ರೂವಾರಿ ಚರಂತಿಮಠರಾಗಿದ್ದಾರೆ. ನಿರುದ್ಯೋಗದಂತಹ ಸಮಸ್ಯೆ ನಿವಾರಿಸಿ ಯುವಸಮೂಹವನ್ನು ಅಭಿವೃದ್ಧಿ ಮಾಡಲು ಕಮಲಕ್ಕೆ ಮತ ನೀಡಿ ನೀವು ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ಕೆಲಸವನ್ನು ಬಿಜೆಪಿ ಮಾಡುತ್ತದೆ ಎಂದರು.ಸಂಸದ ಗೋವಿಂದ ಕಾರಜೋಳ ಮಾತನಾಡಿ, ಈ ಭಾಗದಲ್ಲಿ ಪ್ರವಾಸಕ್ಕೆ ಬಂದ ಸಿದ್ದರಾಮಯ್ಯ ಅವರನ್ನು ರೈತಪರವಾದ ಎಷ್ಟು ಯೋಜನೆಗಳನ್ನು ಜಾರಿಮಾಡಿದ್ದೀರಿ ಎಂಬ ಪ್ರಶ್ನೆ ಕೇಳಬೇಕಿತ್ತು. ಸುಳ್ಳು ಹೇಳಿ ಮೋಸ ಮಾಡುವ ಏಕೈಕ ಪಕ್ಷ ಕಾಂಗ್ರೆಸ್ ಪಕ್ಷ. ಗ್ಯಾರಂಟಿ ಹೆಸರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆ ಯೋಜನೆ ಏನಾಯಿತು? ಗೆಜೆಟ್ ನೋಟಿಪಿಕೆಶನ್ ಬಗ್ಗೆ ಮಾತನಾಡುವವರು ರಾಜ್ಯ ಮತ್ತು ಕೇಂದ್ರದಲ್ಲಿ ತಮ್ಮದೇ ಅಧಿಕಾರ ಇದ್ದಾಗ ಏಕೆ ನೋಟಿಫಿಕೇಶನ್ ಮಾಡಲಿಲ್ಲ ಎನ್ನುವುದನ್ನು ಹೇಳಲಿ ಎಂದರು.ರಾಜ್ಯ ಬಿಜೆಪಿ ಕಾರ್ಯದರ್ಶಿ ಶರಣು ತಳ್ಳಿಕೇರಿ ಮಾತನಾಡಿದರು. ವೀರಣ್ಣ ಚರಂತಿಮಠ, ರೈತ ಮೋರ್ಚಾ ಅಧ್ಯಕ್ಷ ಎ.ಎಸ್ ಪಾಟೀಲ್ ನಡಹಳ್ಳಿ ಮಾತನಾಡಿದರು. ವೈದ್ಯರಾದ ದೇವರಾಜ ಪಾಟೀಲ ಇದ್ದರು.ಮತದಾನಕ್ಕೆ ದಿನಗಣನೆ ಶುರುವಾದಂತೆಲ್ಲ ಬಾಗಲಕೋಟೆ ಮತಕ್ಷೇತ್ರದ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕಮಲದ ಖದರ್ ಹೆಚ್ಚುತ್ತಲೇ ಇದೆ. ನಾಯನೇಗಲಿಯಲ್ಲಿ ನಡೆದ ಬೃಹತ್ ಶೋಭಾಯಾತ್ರೆಯಲ್ಲಿ ಯುವ ಜನತೆ ದಂಡು ದಂಡಾಗಿ ಪಾಲ್ಗೊಂಡು ಬಿಜೆಪಿಯ ಬಲ ಪ್ರದರ್ಶನ ಮಾಡಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನೇತೃತ್ವದಲ್ಲಿ ವೀರಣ್ಣ ಚರಂತಿಮಠ ಅವರ ಮತಪ್ರಚಾರ ಶೋಭಾಯಾತ್ರೆಯು ಹೊಸೂರ್ ಕ್ರಾಸ್‌ನಿಂದ ಪ್ರಾರಂಭವಾಗಿ ನಾಯನೇಗಲಿಯವರೆಗೂ ಸುಮಾರು 3 ಕಿಮೀವರೆಗೂ ಅದ್ದೂರಿಯಾಗಿ ಜರುಗಿತು.