ಏ.1ರಿಂದ ವ್ಯಾಪಾರ ಪರವಾನಗಿ ಕಡ್ಡಾಯ ಮಾಡಿಸಿ

| Published : Mar 14 2025, 01:33 AM IST

ಸಾರಾಂಶ

ನಗರಸಭೆ ವ್ಯಾಪ್ತಿಯ ವ್ಯಾಪಾರಸ್ಥರು ಹಾಗೂ ಉದ್ದಿಮೆ ಮಾಲೀಕರು ಏಪ್ರಿಲ್ 1ರೊಳಗೆ ವ್ಯಾಪಾರ ಪರವಾನಗಿ (ಟ್ರೇಡ್ ಲೈಸೆನ್ಸ್)ಅನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ವ್ಯಾಪಾರ ವಹಿವಾಟಿಗೆ ಅವಕಾಶ ನೀಡುವುದಿಲ್ಲ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಎಚ್ಚರಿಕೆ ನೀಡಿದರು.

ರಾಮನಗರ: ನಗರಸಭೆ ವ್ಯಾಪ್ತಿಯ ವ್ಯಾಪಾರಸ್ಥರು ಹಾಗೂ ಉದ್ದಿಮೆ ಮಾಲೀಕರು ಏಪ್ರಿಲ್ 1ರೊಳಗೆ ವ್ಯಾಪಾರ ಪರವಾನಗಿ (ಟ್ರೇಡ್ ಲೈಸೆನ್ಸ್)ಅನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ವ್ಯಾಪಾರ ವಹಿವಾಟಿಗೆ ಅವಕಾಶ ನೀಡುವುದಿಲ್ಲ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವ್ಯಾಪಾರ, ಉದ್ದಿಮೆ ನಡೆಸುತ್ತಿರುವ ಎಲ್ಲ ಮಾಲೀಕರು ನಗಸಭೆಯಿಂದ ಕಡ್ಡಾಯವಾಗಿ ವ್ಯಾಪಾರ ಪರವಾನಗಿ ಪಡೆಯಲೇಬೇಕು. ಈ ವಿಚಾರದಲ್ಲಿ ರಾಜಿ ಇಲ್ಲ ಎಂದರು.

ನಗರದಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಲು ಸಂಪನ್ಮೂಲದ ಕ್ರೂಢೀಕರಣದ ಅವಶ್ಯಕತೆ ಇದೆ. ಉದ್ದಿಮೆ ಪರವಾನಗಿಯಿಂದಲೇ ನಗರಸಭೆಗೆ 1.50 ಕೋಟಿ ರು. ಆರ್ಥಿಕ ಸಂಪನ್ಮೂಲ ಕ್ರೂಢೀಕರಿಸುವ ನಿರೀಕ್ಷೆ ಇದೆ ಎಂದು ಹೇಳಿದರು.

ನಗರಸಭಾ ವ್ಯಾಪ್ತಿಯಲ್ಲಿ ಸುಮಾರು 2500 ವ್ಯಾಪಾರದ ಮಳಿಗೆಗಳಿವೆ. ನಗರಸಭೆಗೆ ಸಂಪನ್ಮೂಲ ಕ್ರೂಢೀಕರಣವಾಗದಿದ್ದರೆ ಅಭಿವೃದ್ಧಿ, ಮೂಲ ಸೌಕರ್ಯಗಳನ್ನು ಕಲ್ಪಿಸುವುದು ಸಾಧ್ಯವಿಲ್ಲ. ಹೀಗಾಗಿ ವ್ಯಾಪಾರಸ್ಥರು, ಉದ್ದಿಮೆದಾರರು ಪರವಾನಗಿಯನ್ನು ಕಡ್ಡಾಯವಾಗಿ ಪಡೆಯಬೇಕು ಎಂದರು.

ತಾವು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಇ-ಖಾತೆ ವಿತರಣೆಗೆ ವೇಗ ಸಿಕ್ಕಿದೆ. 6ನೇ ಹಂತದಲ್ಲಿ ಸುಮಾರು 100 ಜನರಿಗೆ ವಿದ್ಯುನ್ಮಾನ ಖಾತೆಗಳನ್ನು ವಿತರಿಸಲಾಗುತ್ತಿದೆ. ಇಲ್ಲಿಯವರೆಗೆ ಸುಮಾರು 800 ಇ-ಖಾತೆಗಳನ್ನು ವಿತರಿಸಲಾಗಿದೆ ಎಂದು ನಗರಸಭೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಶ್ರಮವನ್ನು ಶ್ಲಾಘಿಸಿದರು.

ಸರ್ಕಾರದ ಆದೇಶದಂತೆ ನಮೂನೆ 3/ಎ ಇ - ಖಾತೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಇಲ್ಲಿಯವರೆಗೆ ಸುಮಾರು 2000 ಮಂದಿ ಆಸ್ತಿ ಮಾಲೀಕರು ಅರ್ಜಿಗಳನ್ನು ಪಡೆದುಕೊಂಡು ಹೋಗಿದ್ದಾರೆ. ಸುಮಾರು 400 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ನಗರಸಭೆಯ ಯಾವುದೇ ಸೇವೆಗಳನ್ನು ಪಡೆಯಲು ನಾಗರಿಕರು ಮಧ್ಯವರ್ತಿಗಳು, ದಲ್ಲಾಳಿಗಳ ಮೊರೆ ಹೋಗದಂತೆ ನಾಗರಿಕರಲ್ಲಿ ಮನವಿ ಮಾಡಿದರು.

ಸ್ವಚ್ಛ ಮತ್ತು ಸುಂದರ ನಗರವನ್ನಾಗಿ ರಾಮನಗರವನ್ನು ರೂಪಿಸಲು ಸಂಕಲ್ಪ ಮಾಡಲಾಗಿದೆ. ನಗರವನ್ನು ಕಸ ಮುಕ್ತ, ಪರಿಸರ ಸ್ನೇಹಿಯನ್ನಾಗಿಸುವ ಮತ್ತು ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಆದ್ಯತೆ ಕೊಡಲಾಗುತ್ತದೆ. ಆಯವ್ಯಯದ ನಂತರ ಈ ವಿಚಾರದಲ್ಲಿ ನಾಗರಿಕರಿಗೆ ಮಾಹಿತಿ ನೀಡುವುದಾಗಿ ತಿಳಿಸಿದರು.

ಇದೇ ವೇಳೆ ಕೆ.ಶೇಷಾದ್ರಿ 6ನೇ ಹಂತದಲ್ಲಿ ಇ-ಖಾತೆಗಳನ್ನು ವಿತರಿಸಿದರು. ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷ, ಮಾಜಿ ಅಧ್ಯಕ್ಷೆ ಪಾರ್ವತಮ್ಮ, ಆಯುಕ್ತ ಡಾ.ಜಯಣ್ಣ, ಸದಸ್ಯರಾದ ನಿಜಾಮುದ್ದೀನ್, ಮುತ್ತುರಾಜ್, ಅಜ್ಮತ್, ಬೈರೇಗೌಡ, ಸಮತ್, ಸೋಮಶೇಖರ್, ಪವಿತ್ರ, ವಿಜಯ ಕುಮಾರಿ ಇತರರಿದ್ದರು.

13ಕೆಆರ್ ಎಂಎನ್ 7.ಜೆಪಿಜಿ

ರಾಮನಗರದಲ್ಲಿ ನಗರಸಭಾಧ್ಯಕ್ಷ ಕೆ.ಶೇಷಾದ್ರಿ ಸ್ವತ್ತಿನ ಮಾಲೀಕರಿಗೆ ಇ-ಖಾತೆಗಳನ್ನು ವಿತರಿಸಿದರು.