ಸಾರಾಂಶ
ಹೊಸಚಿಗುರು ಬಿಡುಗಡೆ
ತೀರ್ಥಹಳ್ಳಿ: ವಿದ್ಯಾರ್ಥಿಗಳನ್ನು ಕೇವಲ ಪಾಠಪ್ರವಚನಗಳಿಗೆ ಸೀಮಿತಗೊಳಿಸದೇ ಅವರಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿಯ ಕುರಿತು ಸೃಜನಶೀಲತೆ ಮೂಡಿಸಬೇಕು. ಆ ನಿಟ್ಟಿನಲ್ಲಿ ಹೊಸ ಚಿಗುರು ಕೈ ಬರಹದ ಹೊತ್ತಿಗೆ ಪರಿಕಲ್ಪನೆ ಮಾದರಿಯಾಗಿದೆ ಎಂದು ಕವಿಯಿತ್ರಿ ಹಾಗೂ ಶಿಕ್ಷಕಿ ನಾಗರತ್ನ ನಿಲ್ಸ್‌ಕಲ್ ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದ ಸೇವಾ ಭಾರತಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಸಾಹಿತ್ಯ ವೇದಿಕೆಯಿಂದ ವಿದ್ಯಾರ್ಥಿಗಳೇ ಹೊರ ತಂದ ಹೊಸಚಿಗುರು ಕೈ ಬರಹದ ಹೊತ್ತಿಗೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.ವಿದ್ಯಾರ್ಥಿಗಳಲ್ಲಿ ವಿಧೇಯತೆಯೊಂದಿಗೆ ಶಿಸ್ತು ಆತ್ಮಸ್ಥೈರ್ಯವನ್ನೂ ಮೂಡಿಸುವಲ್ಲಿ ಸೇವಾ ಭಾರತಿ ಶಾಲೆಯ ಕಾರ್ಯ ಪ್ರಶಂಸನೀಯವಾಗಿದೆ. ಮಕ್ಕಳ ಆಂತರ್ಯದಲ್ಲಿ ಅಡಗಿರುವ ಭಾಷೆ ಭಾವನೆ ಮತ್ತು ಕಲ್ಪನೆಗಳಿಗೆ ರೂಪ ನೀಡಿದಾಗ ಮಾತ್ರ ಅವರಲ್ಲಿರುವ ಪ್ರತಿಭೆ ಅರಳುವುದಕ್ಕೆ ಸಾಧ್ಯ ಎಂದು ಆಶಯ ವ್ಯಕ್ತಪಡಿಸಿದರು.
ಹೊಸ ಚಿಗುರು ಕೇವಲ ಒಂದು ವಿಷಯಕ್ಕೆ ಸೀಮಿತವಾಗದೆ ಕಥೆ, ಕವನ, ಚಿತ್ರ, ಲಲಿತ ಪ್ರಬಂಧಗಳು ಹಾಗೂ ವಿಜ್ಞಾನ ವಿಷಯವನ್ನು ಒಳಗೊಂಡಿರುವುದು ಗಮನಾರ್ಹ ಸಂಗತಿಯಾಗಿದೆ. ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ಇಂತಹ ಸೃಜನಶೀಲ ಚಟುವಟಿಕೆಗಳು ಪ್ರಶಂಸನೀಯ ಎಂದರು.ಹೊಸ ಚಿಗುರು ಸಂಪಾದಕಿ ನವನೀತ ಮಾತಾಜಿ ಮಾತನಾಡಿ, ಹೊಸಚಿಗುರು 28ನೇ ಸಂಪುಟವನ್ನು ಇಂದು ಬಿಡುಗಡೆಗೊಳಿಸಲಾಗಿದೆ. ವಿದ್ಯಾರ್ಥಿ ಜೀವನದ ಹೊಣೆಗಾರಿಕೆಯ ವಿಚಾರಗಳನ್ನೂ ಒಳಗೊಂಡಿರುವ ಕೈ ಬರಹದ ಈ ಕೃತಿಯಲ್ಲಿ ಕವಿ ಕುವೆಂಪುರವರ ಆಶಯದಂತೆ ಕಥೆ ಕವನ ಚಿತ್ರ ಲಲಿತ ಪ್ರಬಂಧಗಳ ವಿಷಯಗಳನ್ನು ಸಂಗ್ರಹಿಸಲು ಮಕ್ಕಳನ್ನು ಪ್ರೇರೇಪಿಸಲಾಗಿದೆ ಎಂದರು.
ಸೇವಾಭಾರತಿ ವಿದ್ಯಾಕೇಂದ್ರದ ಅಧ್ಯಕ್ಷ ಎಂಜಿ.ವೆಂಕಟರಮಣ, ದೈಹಿಕ ಪರಿವೀಕ್ಷಕ ಚಂದ್ರಪ್ಪ, ಕಮ್ಮರಡಿ ಸರ್ಕಾರಿ ಪ್ರೌಢಶಾಲೆಯ ಶ್ರೀಧರ್ ಇದ್ದರು.