ಮಕ್ಕಳನ್ನು ಸಂಸ್ಕಾರವಂತರನ್ನಾಗಿಸಿ: ಸಾಹಿತಿ ತಮ್ಮಣ್ಣ ಬೀಗಾರ

| Published : Feb 24 2025, 12:35 AM IST

ಮಕ್ಕಳನ್ನು ಸಂಸ್ಕಾರವಂತರನ್ನಾಗಿಸಿ: ಸಾಹಿತಿ ತಮ್ಮಣ್ಣ ಬೀಗಾರ
Share this Article
  • FB
  • TW
  • Linkdin
  • Email

ಸಾರಾಂಶ

ವೇಗವಾಗಿ ಬೆಳೆಯುತ್ತಿರುವ ಜಗತ್ತಿನಲ್ಲಿ ನಾವು ಕೇವಲ ನಮ್ಮ ಮಕ್ಕಳನ್ನು ಪ್ರೀತಿಸುತ್ತೇವೆಯೇ ಹೊರತು ಅವರನ್ನು ಸಂಸ್ಕಾರವಂತರನ್ನಾಗಿಸುವ ನಿಟ್ಟಿನಲ್ಲಿ ಯೋಚಿಸುತ್ತಿಲ್ಲ.

ಯಲ್ಲಾಪುರ: ವೇಗವಾಗಿ ಬೆಳೆಯುತ್ತಿರುವ ಜಗತ್ತಿನಲ್ಲಿ ನಾವು ಕೇವಲ ನಮ್ಮ ಮಕ್ಕಳನ್ನು ಪ್ರೀತಿಸುತ್ತೇವೆಯೇ ಹೊರತು ಅವರನ್ನು ಸಂಸ್ಕಾರವಂತರನ್ನಾಗಿಸುವ ನಿಟ್ಟಿನಲ್ಲಿ ಯೋಚಿಸುತ್ತಿಲ್ಲ. ಮಕ್ಕಳಿಗೆ ಸಂಸ್ಕಾರ ಹೇಳಿ ಕೊಡಿ ಎಂದು ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ ಹೇಳಿದರು.

ಅವರು ಪಟ್ಟಣದ ಅಡಿಕೆಭವನದಲ್ಲಿ ಕೇಂದ್ರ ಸಾಹಿತ್ಯ ವೇದಿಕೆ ಬೆಂಗಳೂರು ನೆರವಿನೊಂದಿಗೆ ಯಲ್ಲಾಪುರ ತಾಲೂಕು ಘಟಕ, ಜಿಲ್ಲಾ ಘಟಕಗಳಿಂದ ದಿನಕರ ದೇಸಾಯಿ ಮಹಾವೇದಿಕೆಯಲ್ಲಿ ಭಾನುವಾರ ಸಂಯೋಜಿಸಿದ ಅಖಿಲ ಕರ್ನಾಟಕ ಪ್ರಥಮ ಶಿಶು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮಕ್ಕಳು ಹೆಚ್ಚಾಗಿ ಪ್ರೀತಿಸುವ ಪರಿಸರದ ಒಡನಾಟ ಕಲ್ಪಿಸಬೇಕು. ಬರಹಗಾರರು ಮಕ್ಕಳ ಸಾಹಿತ್ಯವನ್ನು ಸೃಜನಾತ್ಮಕ ಕಲೆಯನ್ನಾಗಿಸಿ ಅನಾವರಣಗೊಳಿಸಬೇಕು. ನಾಡಿನ ವಿವಿಧ ಸಾಹಿತ್ಯ ಪ್ರಕಾರಗಳಿಗೆ ಸಾಕಷ್ಟು ಮಹತ್ವ, ಆದ್ಯತೆ ನೀಡಲಾಗುತ್ತಿದ್ದರೂ ಕೆಲವು ಕಾಲ ಮಕ್ಕಳ ಸಾಹಿತ್ಯ ತುಸುಮಟ್ಟಿಗೆ ಅವಗಣನೆಗೊಳಗಾಗುವಂತಾಗಿದೆ. ಈ ನಡುವೆಯೇ ವಿಭಿನ್ನ ಪರಿಕಲ್ಪನೆಯ ಬರಹಗಳು ಮಕ್ಕಳ ಸಾಹಿತ್ಯದಲ್ಲಿ ಮೂಡಿಬರುತ್ತಿರುವುದು ಸಮಾಧಾನಕರ ಸಂಗತಿ ಎಂದರು.

೪ ಕೃತಿಗಳನ್ನು ಲೋಕಾರ್ಪಣೆಗೊಳಿಸಿದ ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಪಾಲಕರಲ್ಲಿ ಮಕ್ಕಳನ್ನು ಬೆಳೆಸುವ ಸಮರ್ಪಕತೆಯ ಅರಿವಿನ ಕೊರತೆ ಕಂಡುಬರುತ್ತಿದೆ. ಮಕ್ಕಳು ಗೂಡಿನಿಂದ ಹೊರಬರಲಾಗದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇಂದಿನ ಪಠ್ಯಗಳಲ್ಲಿಯೂ ಹಿರಿಯ ಕವಿಗಳ ರಚನೆಗಳನ್ನು ಅಳವಡಿಸದಿರುವುದು ವಿಷಾದದ ಸಂಗತಿಯಾಗಿದೆ. ಓದುಗರಿಗೆ ಅಭಿರುಚಿ, ಸಾಹಿತ್ಯದ ಪರಿಕಲ್ಪನೆ ಹಿಂದಿನಂತೆಯೇ ಮುಂದುವರಿದಿದೆ. ಮಕ್ಕಳನ್ನು ವೈಚಾರಿಕತೆ ಬೆಳೆಸದೇ ಡ್ರೆಸ್ ಕೋಡ್ ವ್ಯಾಮೋಹದೆಡೆ ಕರೆದೊಯ್ಯುತ್ತಿರುವುದು ಪಾಲಕರು ಮಾಡುತ್ತಿರುವ ತಪ್ಪಾಗಿದೆ ಎಂದರು.

ಸಮ್ಮೇಳನದಲ್ಲಿ ೨೦೨೫ ನೇ ಸಾಲಿನ ಶರಣ ಸಂಕುಲ ರತ್ನ ರಾಷ್ಟ್ರೀಯ ಪ್ರಶಸ್ತಿಯನ್ನು ಅನುಸೂಯಾ ಜಹಗೀರದಾರ (ಸಾಹಿತ್ಯ), ಪ್ರಮೋದ ಹೆಗಡೆ (ಸಾಂಸ್ಕೃತಿಕ), ರಾಜೇಶ ಶೆಟ್ಟಿ (ಮಾಧ್ಯಮ), ಡಾ.ಸುನಿತಾ ಬಿ.ವಿ. (ಸಂಶೋಧನೆ) ಹಾಗೂ ಎಚ್.ರಾಮಣ್ಣ (ರಂಗಭೂಮಿ) ಅವರಿಗೆ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿದ ಪ್ರಮೋದ ಹೆಗಡೆ ಮಾತನಾಡಿ, ಬದುಕು ಕಳೆಯುವುದಕ್ಕಲ್ಲ; ಅದು ಕೂಡಿಸುತ್ತ ಹೋಗುವ ಪ್ರಕ್ರಿಯೆ. ಮಗುವಾಗಿ ಬೆಳೆದ ವ್ಯಕ್ತಿ ಮತ್ತೆ ವಯಸ್ಸಿಗನುಗುಣವಾಗಿ ಮಗುವಾಗಿ ಪರಿವರ್ತನೆ ಹೊಂದುವುದು ಸೋಜಿಗ. ಜಗತ್ತಿನಲ್ಲಿ ಯಾವುದೇ ಜೀವಿಗಳಿಗಿಂತ ಶಿಶುಗಳೇ ನಿಜವಾದ ದೇವರು. ಅವರು ಕಲ್ಮಷವಿಲ್ಲದ ಮನಸ್ಸು ಹೊಂದಿದವರು. ಇಂತಹ ಮಕ್ಕಳ ಕುರಿತಾದ ಸಾಹಿತ್ಯ ಉಳಿದ ಸಾಹಿತ್ಯ ಪ್ರಕಾರಗಳಿಗಿಂತ ಗಣ್ಯವಾದುದು ಎಂದರು.

ಪ್ರಶಸ್ತಿ ಪುರಸ್ಕೃತ ರಾಜೇಶ ಶೆಟ್ಟಿ, ಸುನಿತಾ ಬಿ.ವಿ. ಪ್ರಶಸ್ತಿ ಪುರಸ್ಕಾರ ಪ್ರದಾನ ಮಾಡಿದ ಸಾಹಿತಿ ರಂಜಾನ ದರ್ಗಾ, ಧಾರವಾಡದ ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷ ಶಂಕರ ಹಲಗತ್ತಿ, ಹಿರಿಯ ಸಾಹಿತಿ ಭಾಗೀರಥಿ ಹೆಗಡೆ ಸಾಂದರ್ಭಿಕ ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಸಾಮಾಜಿಕ ಹೋರಾಟಗಾರ್ತಿ ಯಮುನಾ ಗಾಂವ್ಕರ ಮಾತನಾಡಿ, ನಮ್ಮ ಮಕ್ಕಳೆಂದರೆ ಕೇವಲ ಮಕ್ಕಳಾಗಿರದೇ ಜೀವನವನ್ನು ಪ್ರೇಮಿಸುವ ಪುತ್ರ-ಪುತ್ರಿಯರು. ಈ ಕಾರಣಕ್ಕಾಗಿ ಅವರ ಜೀವನ ಹಿಮ್ಮುಖವಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮಕ್ಕಳ ಸಾಹಿತ್ಯ ಕೆಲಕಾಲ ಅವಜ್ಞಗೊಳಗಾಗಿತ್ತು. ಇತ್ತೀಚಿಗೆ ಅದು ಕಡಿಮೆಯಾಗಿದ್ದರೂ ಮಕ್ಕಳ ಭಾವನೆಗಳನ್ನು ಆಲಿಸುವ, ಸ್ಪಂದಿಸುವ ಮನೋಭಾವದ ಪ್ರತೀಕವಾಗಬೇಕು. ಪಾಲಕರು ತಮ್ಮ ವಿಚಾರಗಳನ್ನು ಮಕ್ಕಳ ಮೇಲೆ ಹೇರದೇ ಹಿತಾಸಕ್ತಿ ತುಂಬದೇ ಅವರಲ್ಲಿ ಕನಸನ್ನು ಬಿತ್ತುವ ಪ್ರೇರಣೆ ನೀಡಬೇಕು. ನಾವೆಲ್ಲರೂ ಮಕ್ಕಳಲ್ಲಿ ಅನುಕರಣೆ ಬೆಳೆಸಿ, ಜೀವನ ಪ್ರೀತಿ ಬೆಳೆಸುವ ಮಾರ್ಗದರ್ಶನ ನೀಡೋಣ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷೆ ಶಿವಲೀಲಾ ಹುಣಸಗಿ ಶುಭ ಕೋರಿದರು. ಸಾಹಿತ್ಯ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಶಾಲಿನಿ ರುದ್ರಮುನಿ, ಶೈಲಜಾ ಹಿರೇಮಠ, ತಾಲೂಕಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಆರ್. ಭಟ್ಟ, ಗೌರವಾಧ್ಯಕ್ಷ ಸುರೇಶ ಕಡೆಮನಿ, ಶಿವಾಜಿ, ಎನ್.ಚೊಮ್ಮನ್ನವರ, ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಉಪಸ್ಥಿತರಿದ್ದರು.

ಸಮ್ಮೇಳನಾಧ್ಯಕ್ಷರನ್ನು ರಾಜ್ಯ ಜಂಟಿ ಕಾರ್ಯದರ್ಶಿ ನಾಗರಾಜ ದೊಡ್ಮನಿ ಪರಿಚಯಿಸಿದರು. ಸಮ್ಮೇಳನಾಧ್ಯಕ್ಷರಿಗೆ ಗಂಗಾವತಿಯ ಸಾಹಿತಿ ಡಾ.ಜಾಜಿ ದೇವೇಂದ್ರಪ್ಪ ಗೌರವ ಪ್ರದಾನ ಮಾಡಿದರು. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಉಪ್ಪಾರ ಪ್ರಾಸ್ತಾವಿಕ ಮಾತನಾಡಿದರು. ಸುಮಂಗಲಾ ದೇಸಾಯಿ ಸಂಗಡಿಗರ ಪ್ರಾರ್ಥನೆ, ಎಂ.ಎ. ಬಾಗೇವಾಡಿ ಸಂಗಡಿಗರ ನಾಡಗೀತೆ, ರೈತಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಸಾಹಿತ್ಯ ವೇದಿಕೆಯ ಸಹಕಾರ್ಯದರ್ಶಿ ದೇಸು ಆಲೂರು ಸ್ವಾಗತಿಸಿದರು. ರಾಜ್ಯ ಕೋಶಾಧ್ಯಕ್ಷ ಎಚ್.ಎಸ್. ಬಸವರಾಜ, ಸೀತಾ ದಾನಗೇರಿ ನಿರ್ವಹಿಸಿದರು. ಜಿಲ್ಲಾ ಕಾರ್ಯದರ್ಶಿ ದೇವಿದಾಸ ನಾಯ್ಕ ವಂದಿಸಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಬಾಲಕಿ ಶ್ರೀರಕ್ಷಾ ವೆರ್ಣೇಕರ ಪ್ರಸ್ತುತಪಡಿಸಿದ ಯಕ್ಷನೃತ್ಯ ಮನಮೋಹಕವಾಗಿತ್ತು.