ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಮಕ್ಕಳಿಗೆ ಸಂಸ್ಕಾರ ನೀಡುವಲ್ಲಿ ಪೋಷಕರ ಪಾತ್ರ ಅತ್ಯಂತ ಮಹತ್ತರವಾಗಿದೆ. ಮಕ್ಕಳು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬೆಳೆಯಲು ಪೋಷಕರ ಮಾರ್ಗದರ್ಶನ ಅತ್ಯಗತ್ಯವಾಗಿದೆ ಎಂದು ನಿವೃತ್ತ ಪ್ರಾಚಾರ್ಯರೂ, ಸರ್ವೋದಯ ಶಿಕ್ಷಣ ಟ್ರಸ್ಟ್ ಅಧ್ಯಕ್ಷರೂ ಆದ ಪ್ರೊ. ಎಚ್. ಸುಬ್ಬರಾಯ ಅವರು ಅಭಿಪ್ರಾಯಪಟ್ಟರು.ಅವರು ತುಮಕೂರು ಜಿಲ್ಲಾ ಉಲುಚುಕಮ್ಮೆ ಬ್ರಾಹ್ಮಣಸಭಾ ವತಿಯಿಂದ ನಗರದ ಎಸ್.ಐ.ಟಿ.ಬಡಾವಣೆಯಲ್ಲಿರುವ ಸಭಾದ ಕಚೇರಿಯಲ್ಲಿ ಏರ್ಪಟ್ಟಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.ಮನೆಯೇ ಮೊದಲ ಪಾಠಶಾಲೆ. ಪೋಷಕರು ತಮ್ಮ ಮಾತು, ನಡವಳಿಕೆ ಮತ್ತು ಕಾರ್ಯದಿಂದ ಮಕ್ಕಳಿಗೆ ಮಾದರಿಯಾಗಬೇಕು. ಶ್ರೀಮಂತವಾದ ಸನಾತನ ಸಂಸ್ಕೃತಿ ಹಾಗೂ ಪರಂಪರೆಯನ್ನು ಮಕ್ಕಳಿಗೆ ಚಿಕ್ಕಂದಿನಲ್ಲಿಯೇ ಪರಿಚಯಿಸಬೇಕು. ಇದರಿಂದ ಮಕ್ಕಳು ನಮ್ಮ ಮೂಲ ಬೇರುಗಳನ್ನು ಅರಿಯಲು ಸಹಾಯವಾಗುತ್ತದೆ. ಅದೇ ರೀತಿ ವಿದ್ಯಾವಂತರಾದ ಮಕ್ಕಳು ಉತ್ತಮ ಸಂಸ್ಕಾರ ಮೈಗೂಡಿಸಿಕೊಂಡು ತಮ್ಮ ಭವಿಷ್ಯಕ್ಕಾಗಿ ಸ್ವಂತ ಆಶೋತ್ತರಗಳನ್ನು ಬದಿಗೊತ್ತಿ ದುಡಿವ ತಂದೆ-ತಾಯಿಯನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ದೇಶದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಬೇಕೆಂದು ಕರೆನೀಡಿದರು. ಮಕ್ಕಳಿಗೆ ಪಠ್ಯ ಶಿಕ್ಷಣದ ಜೊತೆಗೆ ಧಾರ್ಮಿಕ ಶಿಕ್ಷಣವೂ ಅಗತ್ಯ. ಪಠ್ಯ ಶಿಕ್ಷಣ ಉದ್ಯೋಗಕ್ಕಷ್ಟೇ ಸೀಮಿತವಾದರೆ, ಧಾರ್ಮಿಕ ಶಿಕ್ಷಣ ಸಂಸ್ಕಾರಯುತ ಬದುಕಿಗೆ ಪೂರಕವಾಗಿ, ಜೀವನದಲ್ಲಿ ಕಷ್ಟಗಳನ್ನು ಎದುರಿಸಲು ಶಕ್ತಿ ನೀಡುತ್ತದೆ ಎಂದರು.ಜಿಲ್ಲಾ ಉಲುಚುಕಮ್ಮೆ ಬ್ರಾಹ್ಮಣ ಸಭಾ ಅಧ್ಯಕ್ಷ , ಪ್ರಾಧ್ಯಾಪಕ ಡಾ. ಆರ್.ವಾಸುದೇವಮೂರ್ತಿ ಮಾತನಾಡಿ, ಪ್ರತಿಭಾವಂತ ವಿಪ್ರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಆರ್ಥಿಕವಾಗಿ ದುರ್ಬಲರಾದ ಧನಸಹಾಯ, ಅಶಕ್ತ ವಿಪ್ರರಿಗೆ ಸಹಾಯ ಹೀಗೆ ಹಲವಾರು ಸಮಾಜಮುಖಿ ಕಾರ್ಯಗಳನ್ನು ಸಭಾವು ನಿಯಮಿತವಾಗಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ಎಚ್.ಎನ್.ಚಂದ್ರಶೇಖರ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಬ್ರಾಹ್ಮಣ ಸಮುದಾಯ ಒಗ್ಗಟ್ಟಾಗಿರುವುದು ಅವಶ್ಯವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಹಾಗೂ ಉನ್ನತ ಶಿಕ್ಷಣದಲ್ಲಿ ಹೆಚ್ಚು ಅಂಕಗಳಿಸಿದ ಉಲುಚುಕಮ್ಮೆ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಮಾಜಿ ಕಾರ್ಪೋರೇಟರ್ ಸಿ.ಎನ್.ರಮೇಶ್, ರಾಜ್ಯ ಬ್ರಾಹ್ಮಣಸಭಾದ ಜಿಲ್ಲಾ ಪ್ರತಿನಿಧಿ ಡಾ. ಹರೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದು, ಮಾತನಾಡಿದರು. ಸಂಘದ ಗೌರವಾಧ್ಯಕ್ಷೆ ಇಂದಿರಮ್ಮ ಸುಂದರರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪಾಧ್ಯಕ್ಷ ಕೆ.ನರಸಿಂಹಮೂರ್ತಿ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀನಿವಾಸ ಜೋಯಿಸ್ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದಲ್ಲಿ ಸಂಘದ ನಿರ್ದೇಶಕರುಗಳಾದ ಎಚ್.ಕೆ.ವೇಣುಗೋಪಾಲ್, ಗೋಪಾಲಕೃಷ್ಣ, ಎಚ್.ಕೆ.ರಮೇಶ್, ರವಿಶಂಕರ್, ಸೌಮ್ಯರವಿ, ಸರಳಾ, ಜಿ.ಕೆ.ಗುಂಡಣ್ಣ, ಶಾಲಿನಿ ರವಿಶಂಕರ್, ಸತೀಶ್‌ಚಂದ್ರ, ಚಂದ್ರಮೌಳಿ, ಉಷಾ ಅನಂತರಾಮಯ್ಯ ಸೇರಿದಂತೆ ನೂರಾರು ವಿಪ್ರ ಸಮುದಾಯದವರು ಪಾಲ್ಗೊಂಡಿದ್ದರು.