ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ: ಚನ್ನವೀರ ಸ್ವಾಮೀಜಿ

| Published : Mar 21 2025, 12:37 AM IST

ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ: ಚನ್ನವೀರ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ದೇವಸ್ಥಾನಗಳು ಮನುಷ್ಯನನ್ನು ಮಹದೇವನಲ್ಲಿಗೆ ತೆಗೆದುಕೊಂಡು ಹೋಗುವ ಸಾಧನಗಳಾದರೆ ಜಾತ್ರೆ, ಹಬ್ಬ ಹರಿ ದಿನಗಳು ಮನಸ್ಸಿಗೆ ಶಾಂತಿಯನ್ನು ತಂದು ಕೊಡುತ್ತವೆ.

ಸವಣೂರು: ಮನುಷ್ಯನ ಜೀವನ ಭಕ್ತಿಯೊಂದಿಗೆ ಮುಕ್ತಿ ಹೊಂದಲು ಹೊನ್ನಮ್ಮದೇವಿ ಸೇವೆಗೈಯುವುದು ಅವಶ್ಯವಾಗಿದೆ ಎಂದು ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಸ್ವಾಮೀಜಿ ತಿಳಿಸಿದರು.ತಾಲೂಕಿನ ನಂದಿಹಳ್ಳಿ ಗ್ರಾಮದ ಆದಿಶಕ್ತಿ ಹೊನ್ನಮ್ಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಏರ್ಪಡಿಸಿದ್ದ ಸಾಂಸ್ಕೃತಿಕ ಉತ್ಸವ ಹಾಗೂ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶಿರ್ವಚನ ನೀಡಿದರು.ದೇವಸ್ಥಾನಗಳು ಮನುಷ್ಯನನ್ನು ಮಹದೇವನಲ್ಲಿಗೆ ತೆಗೆದುಕೊಂಡು ಹೋಗುವ ಸಾಧನಗಳಾದರೆ ಜಾತ್ರೆ, ಹಬ್ಬ ಹರಿ ದಿನಗಳು ಮನಸ್ಸಿಗೆ ಶಾಂತಿಯನ್ನು ತಂದು ಕೊಡುತ್ತವೆ. ಮನುಷ್ಯನ ಜೀವನ ಸಾಧನೆ ಮಾಡಿ ಸಂಸ್ಕಾರವನ್ನು ಹೊಂದಿ ಸದ್ಗತಿ ಕಾಣುವಂತಹ ಪ್ರಯತ್ನವನ್ನು ಮಾಡಬೇಕು ಎಂದರು.

ನಾವು ಪಾಶ್ಚಿಮಾತ್ಯ ದೇಶಗಳ ಸಂಸ್ಕೃತಿಗೆ ಮಾರುಹೋಗಿ ನಮ್ಮ ಸಂಸ್ಕಾರ, ಸಂಸ್ಕೃತಿಯನ್ನು ಮರಿಯುತ್ತಿದ್ದೇವೆ. ನೂರು ಜನ ಶಿಕ್ಷಕರಿಗೆ ಒಂದು ತಾಯಿ ಸಮ. ಆದ್ದರಿಂದ ತಾಯಂದಿರು ತಮ್ಮ ಮಕ್ಕಳಿಗೆ ಉತ್ತಮವಾದ ಸಂಸ್ಕಾರವನ್ನು ನೀಡುವ ಮೂಲಕ ಮಕ್ಕಳನ್ನು ಆಸ್ತಿಯನ್ನಾಗಿ ಮಾಡಬೇಕು. ನಂದಿಹಳ್ಳಿ ಗ್ರಾಮದ ಯುವಕರು ದುಶ್ಚಟಗಳಿಂದ ದೂರ ಉಳಿದು ಪ್ರಥಮ ಬಾರಿಗೆ ರಕ್ತದಾನಕ್ಕೆ ಮುಂದಾಗಿ ಜೀವದಾನಿಗಳಾಗಿ 33 ಜನ ರಕ್ತದಾನ ಮಾಡುವ ಮೂಲಕ ಮತ್ತೊಂದು ಜೀವವನ್ನು ಉಳಿಸುವಂತ ಕೆಲಸವನ್ನು ಮಾಡಿರುವುದು ಹೆಮ್ಮೆಯ ವಿಷಯ. ಜಾತ್ರೆಗಳಲ್ಲಿ ಸಮಾಜಮುಖಿ ಕಾರ್ಯಗಳು ನಡೆದಾಗ ಮಾತ್ರ ಧಾರ್ಮಿಕ ಕಾರ್ಯಕ್ರಮಕ್ಕೆ ಮೆರುಗು ಬರುತ್ತದೆ. ಅಂತಹ ಕಾರ್ಯವನ್ನು ಯುವಕರು ಕೈಗೊಂಡಿರುವುದು ಸಂತಸ ತಂದಿದೆ ಎಂದರು. ಜಾತ್ರಾ ಮಹೋತ್ಸವ ಅಂಗವಾಗಿ ಜಿಲ್ಲಾ ರಕ್ತ ಭಂಡಾರದ ಸಹಕಾರದೊಂದಿಗೆ ಶ್ರೀ ಗಜಾನನ ಯುವಕ ಸಂಘದ ವತಿಯಿಂದ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ 33 ಜನ ಯುವಕರು ರಕ್ತದಾನ ಮಾಡಿದರು. ಸಂಜೆ ಕಬನೂರು ಗ್ರಾಮದ ಅಲ್ಲಿಕೇರಿ ಬಸವೇಶ್ವರ ಸಾಂಸ್ಕೃತಿಕ ಕಲಾ ತಂಡದ ವತಿಯಿಂದ ಜಾನಪದ ಉತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು. ನಂತರ, ಭಕ್ತರಿಗೆ ಅನ್ನಸಂತರ್ಪಣೆ ಕೈಗೊಳ್ಳಲಾಯಿತು. ಗ್ರಾಮದ ಯುವಕರು, ಹಿರಿಯರು, ಮಹಿಳೆಯರು, ತಾಯಂದಿರು, ಮಕ್ಕಳು ಹಾಗೂ ಇತರರು ಪಾಲ್ಗೊಂಡಿದ್ದರು.

ಬೀರೇಶ್ವರ ಕ್ರೆಡಿಟ್ ಕೋ ಆಪ್ ಸೊಸೈಟಿ ಸಲಹಾ ಸಮಿತಿಗೆ ನೇಮಕ

ಗುತ್ತಲ: ಪಟ್ಟಣದ ಶ್ರೀ ಬೀರೇಶ್ವರ ಕ್ರೆಡಿಟ್ ಕೋ ಆಪ್ ಸೊಸೈಟಿ ಗುತ್ತಲ ಶಾಖೆಯ ನೂತನ ಸಲಹಾ ಸಮಿತಿ ಸದಸ್ಯರ ನೇಮಕದ ಆದೇಶ ಪ್ರತಿಯನ್ನು ಸೋಮವಾರ ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು.ಪ್ರತಿಷ್ಠಿತ ಜೊಲ್ಲೆ ಗ್ರೂಪ್‌ನ ಅಂಗ ಸಂಸ್ಥೆಯಾದ ಶ್ರೀ ಬೀರೇಶ್ವರ ಕ್ರೆಡಿಟ್ ಕೋ ಆಪ್ ಸೊಸೈಟಿ ಯಕ್ಸಂಬಾ ಇದರ ಗುತ್ತಲ ಶಾಖೆಯ ಸಂಸ್ಥಾಪಕ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಸಹ ಸಂಸ್ಥಾಪಕರಾದ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಅವರ ದಿಗ್ದರ್ಶಕ ಮಂಡಳಿ ಸಭೆಯಲ್ಲಿ ನೇಮಕವಾಗಿದ್ದು, ಸಹಕಾರಿ ರಂಗದಲ್ಲಿ ಉತ್ತಮ ಸಂಪರ್ಕ ಇರುವುದರಿಂದ ಶಾಖೆಗೆ ಸೂಕ್ತ ಸಲಹೆ ಸೂಚನೆ ನೀಡಿ ಶಾಖೆಯ ಅಭಿವೃದ್ಧಿಯಲ್ಲಿ ಸದಾ ಕೈಜೋಡಿಸಬೇಕು ಎಂದು ಗುತ್ತಲ ಶಾಖೆಯ ಮ್ಯಾನೇಜರ್ ಪಾಂಡುರಂಗ ಕೋಳಿ ತಿಳಿಸಿದರು.ನೂತನ ಸಲಹಾ ಸಮಿತಿ ಸಧಸ್ಯರಾದ ಸಂತೋಷ ಚಿಕ್ಕಮಠ, ನಾಗನಗೌಡ ನಾಗನಗೌಡ್ರ, ವಿಶ್ವನಾಥ ಮನ್ನಂಗಿ, ಚಂದ್ರಶೇಖರ ಬನ್ನಿಮಟ್ಟಿ, ಶೇಖಪ್ಪ ಸಪ್ಪಿನ, ಪ್ರಶಾಂತ ಕಡಾರಿ, ಮಂಜುನಾಥ ಯರವಿನತಲಿ ಅವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಬೀರೇಶ್ವರ ಸೊಸೈಟಿ ಗುತ್ತಲ ಶಾಖೆಯಲ್ಲಿ ಸಾಲಗಾರ ಮಹಿಳೆ ಫಾತೀಮಾ ಮಹ್ಮದಶಪಿ ಬಾಸೂರ ಹೃದಯಾಘಾತದಿಂದ ಮೃತಪಟ್ಟ ಹಿನ್ನೆಲೆ ಅವರ ಕುಟುಂಬದ ಮಹ್ಮದಶಪೀ ಬಾಸೂರ ಅವರಿಗೆ ₹30 ಸಾವಿರ ಮರಣೋತ್ತರ ನಿಧಿಯ ಚೆಕ್‌ನ್ನು ಸಲಹಾ ಸಮಿತಿ ಸದಸ್ಯರಿಂದ ನೀಡಲಾಯಿತು.

ಕಾರ್ಯಕ್ರಮದಲ್ಲಿ ಪ್ರಕಾಶ ಸೊಪ್ಪಿನ, ಎ.ಜಿ., ಮಾನಸ, ಬೀರೇಶ್ವರ ಸೊಸೈಟಿಯ ಸಿಬ್ಬಂದಿಗಳಾದ ರಾಮಕೃಷ್ಣ ವಾಳಕೆ, ವಿವೇಕ ಟಿ.ಎಚ್‌., ರೇಣುಕಸ್ವಾಮಿ ಗಣಾಚಾರಿ ಸೇರಿದಂತೆ ಅನೇಕರಿದ್ದರು.