ವಾಣಿಜ್ಯ-ನಿರ್ವಹಣಾ ಶಿಕ್ಷಣ ಸ್ಪರ್ಧಾತ್ಮಕವಾಗಿರಲಿ: ಮಂಡ್ಯ ವಿವಿ ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ

| Published : Jan 29 2025, 01:31 AM IST

ವಾಣಿಜ್ಯ-ನಿರ್ವಹಣಾ ಶಿಕ್ಷಣ ಸ್ಪರ್ಧಾತ್ಮಕವಾಗಿರಲಿ: ಮಂಡ್ಯ ವಿವಿ ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ವಾಣಿಜ್ಯ ಮತ್ತು ನಿರ್ವಹಣಾ ಶಿಕ್ಷಣವು ಭಾರತದ ಆರ್ಥಿಕ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಜಾಗತಿಕ ಸ್ಪರ್ಧೆಯ ಯುಗದಲ್ಲಿ ವಾಣಿಜ್ಯ ಮತ್ತು ನಿರ್ವಹಣಾ ಶಿಕ್ಷಣವು ಸ್ಪರ್ಧಾತ್ಮಕವಾಗಿರಬೇಕು ಮತ್ತು ಬದಲಾಗುತ್ತಿರುವ ಅಗತ್ಯಗಳಿಗೆ ಪ್ರಸ್ತುತವಾಗಿರಬೇಕು. ಭಾರತದಲ್ಲಿ ಈ ಕ್ಷೇತ್ರಕ್ಕೆ ಭವಿಷ್ಯದ ಭರವಸೆ ಇದೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಇಂದಿನ ಜಾಗತೀಕರಣ ಯುಗದಲ್ಲಿ ವಾಣಿಜ್ಯ ಮತ್ತು ನಿರ್ವಹಣಾ ಶಿಕ್ಷಣವು ಬದಲಾಗುತ್ತಿರುವ ಪ್ರವೃತ್ತಿಗಳಿಗೆ ಹೊಂದಿಕೊಳ್ಳಬೇಕು ಮಂಡ್ಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ ಕಿವಿ ಮಾತು ಹೇಳಿದರು.

ಇಲ್ಲಿನ ಭಾರತೀ ವಿದ್ಯಾ ಸಂಸ್ಥೆಯ ಕುವೆಂಪು ಸಭಾಂಗಣದಲ್ಲಿ ಭಾರತೀ ಕಾಲೇಜಿನ ವಾಣಿಜ್ಯ ವಿಭಾಗ ವತಿಯಿಂದ ವಾಣಿಜ್ಯ ಮತ್ತು ನಿರ್ವಹಣೆಯಲ್ಲಿ ಉದಯೋನ್ಮುಖ ಪ್ರವೃತ್ತಿಗಳು ಮತ್ತು ಸವಾಲುಗಳು ಎಂಬ ವಿಷಯ ಕುರಿತು ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ವಾಣಿಜ್ಯ ಮತ್ತು ನಿರ್ವಹಣಾ ಶಿಕ್ಷಣವು ಭಾರತದ ಆರ್ಥಿಕ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಜಾಗತಿಕ ಸ್ಪರ್ಧೆಯ ಯುಗದಲ್ಲಿ ವಾಣಿಜ್ಯ ಮತ್ತು ನಿರ್ವಹಣಾ ಶಿಕ್ಷಣವು ಸ್ಪರ್ಧಾತ್ಮಕವಾಗಿರಬೇಕು ಮತ್ತು ಬದಲಾಗುತ್ತಿರುವ ಅಗತ್ಯಗಳಿಗೆ ಪ್ರಸ್ತುತವಾಗಿರಬೇಕು. ಭಾರತದಲ್ಲಿ ಈ ಕ್ಷೇತ್ರಕ್ಕೆ ಭವಿಷ್ಯದ ಭರವಸೆ ಇದೆ ಎಂದರು.

ವಾಣಿಜ್ಯ ಕ್ಷೇತ್ರದ ಕಾರ್ಯತಂತ್ರದಲ್ಲಿ ಹಲವು ಸುಧಾರಣೆಗಳು ಆಗಬೇಕಾಗಿದೆ. ಪಠ್ಯಕ್ರಮವನ್ನು ನವೀಕರಿಸುವುದು, ಮೂಲ ಸೌಕರ್ಯ ಹೆಚ್ಚಿಸುವುದು ಮತ್ತು ಪ್ರಾಯೋಗಿಕ ತರಬೇತಿ ಮತ್ತು ಉದ್ಯಮ ಸಹಯೋಗದ ಮೂಲಕ ಬೋಧನಾ ವಿಧಾನಗಳನ್ನು ಆಧುನೀಕರಿಸುವುದು ಅವಶ್ಯವಾಗಿದೆ ಎಂದು ವಿವರಿಸಿದರು.

ಬೆಂಗಳೂರಿನ ಆರ್.ವಿ.ವಿಶ್ವವಿದ್ಯಾಲಯದ ನಿರ್ದೇಶಕ ಡಾ.ವಿ.ರಾಜೇಶ್ ಕುಮಾರ್ ಮಾತನಾಡಿ, ಶಿಕ್ಷಣವು ಪದವಿ ಪ್ರಮಾಣ ಪತ್ರವನ್ನು ನೀಡುವುದಕ್ಕಿಂತ ಮನಸ್ಸನ್ನು ಜ್ಞಾನದಿಂದ ತುಂಬುವತ್ತ ಗಮನಹರಿಸಬೇಕು. ಜ್ಞಾನ, ಕೌಶಲ್ಯ ಮತ್ತು ಮನೋಭಾವ ಬೆಳೆಸಿಕೊಳ್ಳುವುದು, ಶಿಸ್ತುಬದ್ಧವಾಗಿರುವುದು ಮತ್ತು ಕಲಿಯುವ ಇಚ್ಛೆಯನ್ನು ಹೊಂದಿರುವುದು ರೂಡಿಸಿ ಕೊಳ್ಳಬೇಕು ಎಂದರು.

ವಾಣಿಜ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಡಿಜಿಟಲ್ ರೂಪಾಂತರ, ಹಣಕಾಸು ಸೇರ್ಪಡೆ, ಸುಸ್ಥಿರತೆ, ಮಾರ್ಕೆಟಿಂಗ್, ಮಾನವ ಸಂಪನ್ಮೂಲ ನಿರ್ವಹಣೆ ಮತ್ತು ಉದ್ಯಮಶೀಲತೆ ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳನ್ನು ಒಳಗೊಂಡಿದ್ದು ಇವುಗಳ ಬಗ್ಗೆ ಹೆಚ್ಚು ಆಸಕ್ತಿ ಬೆಳಸಿಕೊಳ್ಳಬೇಕು ಎಂದರು.

ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ಉಪನ್ಯಾಸಕರು ವಾಣಿಜ್ಯ ಶಾಸ್ತ್ರದ ವಿವಿಧ ವಿಷಯಗಳ ಬಗ್ಗೆ ಪ್ರಬಂಧ ಮಂಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್. ಮಹದೇವಸ್ವಾಮಿ ವಹಿಸಿದ್ದರು.

ಭಾರತೀ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ.ಎಸ್. ನಾಗರಾಜು, ವಾಣಿಜ್ಯ ಶಾಸ್ತ್ರದ ಮುಖ್ಯಸ್ಥ ಶಿವಸ್ವಾಮಿ, ಸಹಾಯಕ ಪ್ರಾಧ್ಯಪಾಕ ಡಾ.ಕೆ.ಟಿ.ಗಣೇಶ್, ಎಚ್.ಎಲ್.ಅಂಜೇಶ್, ಶ್ರೀಕಾಂತ್, ನವೀನ್‌ಕುಮಾರ್, ಮಲ್ಲೇಶ್, ವೀನ, ವಿದ್ಯಾ, ಭವಾನಿ, ಸಹನಾ ಇತರರಿದ್ದರು.