ಸಾರಾಂಶ
ಕಾಲೇಜು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಮನೋಭಾವ ಸದ್ಯದ ದಿನಗಳಲ್ಲಿ ಬಹಳ ಮಹತ್ವದ್ದಾಗಿದೆ.
ಓಜನಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ
ಕನ್ನಡಪ್ರಭ ವಾರ್ತೆ ಕೊಪ್ಪಳಗ್ರಾಮೀಣ ಭಾಗದ ಜನಸಾಮಾನ್ಯರಿಗೆ ಸ್ವಚ್ಛತೆಯ ಕುರಿತು ಅರಿವು ಮೂಡಿಸುವಂತೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಸುರೇಶ ಡಿ. ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವತಿಯಿಂದ ತಾಲೂಕಿನ ಓಜನಹಳ್ಳಿ ಗ್ರಾಮದ ಮಾರುತೇಶ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಆರೋಗ್ಯವಿದ್ದರೆ ಎಲ್ಲವೂ ಸಾಧ್ಯ. ಆರೋಗ್ಯ ಎಂದರೆ ನಮ್ಮ ಮನೆ ಅಷ್ಟೆ ಅಲ್ಲ; ನಮ್ಮ ಸುತ್ತ ಮುತ್ತಲಿನ ವಾತಾವರಣವಾಗಿದೆ. ಅದರ ಸ್ವಚ್ಛತೆ ಕುರಿತು ಮಕ್ಕಳಾದಿಯಾಗಿ ಎಲ್ಲರೂ ಶ್ರಮವಹಿಸಬೇಕು. ಕಾಲೇಜು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಮನೋಭಾವ ಸದ್ಯದ ದಿನಗಳಲ್ಲಿ ಬಹಳ ಮಹತ್ವದ್ದಾಗಿದೆ. ಹಾಗಾಗಿ ಪ್ರತಿನಿತ್ಯ ಪತ್ರಿಕೆ, ನಿಯತಕಾಲಿಕೆ ಮತ್ತು ಪಠ್ಯ ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.ಹಿರಿಯ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಸಮಾಜಸೇವೆ ಅನ್ನುವುದು ಕಲಿಯುವುದಲ್ಲ; ಅದು ಸ್ವಯಂ ಕಲಿಕೆಯಿಂದ ಬರುವಂತಹದ್ದು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಕೆ. ಲಮಾಣಿ ಮಾತನಾಡಿ, ಮಕ್ಕಳಲ್ಲಿ ಪರಿಸರ ಕಾಳಜಿ ಮತ್ತು ಸಮಾಜ ಸ್ವಾಸ್ಥ್ಯದ ಅರಿವು ಮುಖ್ಯ ಎಂದು ಹೇಳಿದರು.ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಡಾ. ನರಸಿಂಹ ಗುಂಜಹಳ್ಳಿ, ನಿವೃತ್ತ ಪ್ರಾಚಾರ್ಯ ಬಿ.ಜಿ. ಕರಿಗಾರ, ಗ್ರಾಪಂ ಅಧ್ಯಕ್ಷ ಉಡಚಪ್ಪ ಭೋವಿ, ಪಿಡಿಒ ಶಿವಬಸಪ್ಪ ಹಂಚಿನಾಳ ಮಾತನಾಡಿದರು.
ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ವಿಠೋಬ ಎಸ್., ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪ್ರದೀಪಕುಮಾರ್ ಯು., ಭೂಗೋಳ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅಶೋಕ ಕುಮಾರ್, ಗ್ರಾಪಂ ಸದಸ್ಯರಾದ ದ್ಯಾಮನಗೌಡ ಮಾಲಿ ಪಾಟೀಲ, ಶಶಿಕಲಾ ಮಂಜಪ್ಪ ಈಶ್ವರಗೌಡ್ರ ಮತ್ತು ಗ್ರಾಮದ ಮುಖಂಡರು ಇದ್ದರು.ಸಹಾಯಕ ಶಿಬಿರಾಧಿಕಾರಿಗಳಾದ ಶಿವಪ್ಪ ಬಡಿಗೇರ, ಕಲ್ಲಯ್ಯ ವಿ. ಪೂಜಾರ್, ವಿರೂಪಾಕ್ಷಪ್ಪ ಮುತ್ತಾಳ, ಎಚ್.ಜಿ. ಬೊಮ್ಮನಾಳ, ಡಾ. ಆರತಿ ವಿ. ಸಜ್ಜನ್, ಲಕ್ಷ್ಮಿ ಹಾಗೂ ತಾರಾಮತಿ ಉಪಸ್ಥಿತರಿದ್ದರು. ಎನ್ಎಸ್ಎಸ್ ವಿದ್ಯಾರ್ಥಿನಿ ದಾಕ್ಷಾಯಿಣಿ ಸ್ವಾಗತಿಸಿದರು. ಮಂಜುಳಾ ಮುಕ್ಕುಂಪಿ ಕಾರ್ಯಕ್ರಮ ನಿರೂಪಿಸಿದರು. ಸ್ವಾತಿ ವಂದಿಸಿದರು.