ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರನ್ನು ಗೆಲ್ಲಿಸಿಕೊಡಿ: ಸಚಿವ ಚಲುವರಾಯಸ್ವಾಮಿ ಮನವಿ

| Published : Mar 26 2024, 01:15 AM IST

ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರನ್ನು ಗೆಲ್ಲಿಸಿಕೊಡಿ: ಸಚಿವ ಚಲುವರಾಯಸ್ವಾಮಿ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಅಧಿಕಾರಕ್ಕೂ ಬರುವ ಮುನ್ನ ನೀಡಿದ ಐದು ಗ್ಯಾರಂಟಿ ಈಡೇರಿಸಿದ್ದು, ಮಂಡ್ಯ ಜಿಲ್ಲೆಯ ಎಲ್ಲ ನಾಲೆಗಳ ಆಧುನಿಕರಣ ಮಾಡಲಾಗುತ್ತಿದೆ. ಹೊಸದಾಗಿ ಮೈಷುಗರ್ ಕಾರ್ಖಾನೆ, ಕೆಆರ್‌ಎಸ್ ಬೃಂದಾವನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೆಗೆದುಕೊಂಡು ಹೋಗಲು ಹೊಸ ಯೋಜನೆ ಜೊತೆಗೆ ಜಿಲ್ಲೆಯಲ್ಲಿ ಕೃಷಿ ವಿಶ್ವವಿದ್ಯಾನಿಲಯ ಆರಂಭ ಮಾಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕಳೆದ ವಿಧಾನಸಭಾ ಚುನಾವಣಾ ವೇಳೆ ಕಾಂಗ್ರೆಸ್ ನೀಡಿದ್ದ ವಾಗ್ದಾನದಂತೆ 5 ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಜಾರಿ ಮಾಡಿದೆ. ಅದಕ್ಕೆ ಪ್ರತಿಯಾಗಿ ಜಿಲ್ಲೆಯ ಮತದಾರರು ಚುನಾವಣೆಯಲ್ಲಿ ನಮ್ಮ ಪಕ್ಷದ ಸಂಸದರನ್ನು ಆಯ್ಕೆ ಮಾಡಿಕೊಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮನವಿ ಮಾಡಿದರು.

ಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದಲ್ಲಿ ಮಂಡ್ಯ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಪರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಕಾಂಗ್ರೆಸ್ ಅಧಿಕಾರಕ್ಕೂ ಬರುವ ಮುನ್ನ ನೀಡಿದ ಐದು ಗ್ಯಾರಂಟಿ ಈಡೇರಿಸಿದ್ದು, ಜಿಲ್ಲೆಯ ಎಲ್ಲ ನಾಲೆಗಳ ಆಧುನಿಕರಣ ಮಾಡಲಾಗುತ್ತಿದೆ. ಹೊಸದಾಗಿ ಮೈಷುಗರ್ ಕಾರ್ಖಾನೆ, ಕೆಆರ್‌ಎಸ್ ಬೃಂದಾವನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೆಗೆದುಕೊಂಡು ಹೋಗಲು ಹೊಸ ಯೋಜನೆ ಜೊತೆಗೆ ಜಿಲ್ಲೆಯಲ್ಲಿ ಕೃಷಿ ವಿಶ್ವವಿದ್ಯಾನಿಲಯ ಆರಂಭ ಮಾಡಲಾಗುತ್ತಿದೆ ಎಂದರು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡರ (ಸ್ಟಾರ್ ಚಂದ್ರು) ಪರ ಪಕ್ಷದ ಕಾರ್ಯಕರ್ತರು ಪ್ರತಿ ಮನೆಗಳಿಗೂ ತೆರಳಿ ಮತಯಾಚಿಸಿ ಅವರನ್ನು ಗೆಲ್ಲಿಸಿಕೊಡುವ ಭರವಸೆ ನೀಡಬೇಕು ಎಂದು ಮನವಿ ಮಾಡಿ ಮತಯಾಚಿಸಿದರು.

ನಾಲೆಗೆ ನೀರು ಹರಿಸುವಂತೆ ಮುಖಂಡನ ಆಗ್ರಹ:

ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್. ಪ್ರಕಾಶ್, ಬೇಸಿಗೆ ಬಿಸಿಲಿನ ತಾಪಕ್ಕೆ ಕೈಗೆ ಬಂದ ಕಬ್ಬುಗಳು ಒಣಗುತ್ತಿವೆ. ನಾಲೆಗಳಿಗೆ ಕಟ್ಟು ನೀರನ್ನಾದರೂ ಹರಿಸಿ ಕಟಾವಿಗೆ ಬಂದ ಬೆಳೆ ಉಳಿಸಿಕೊಡಿ, ಜೊತೆಗೆ ಕೆಆರ್‌ಎಸ್ ಭಾಗದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಇದೆ. ಕೂಡಲೇ ಕುಡಿಯುವ ನೀರು ಕೊಡಿ ಎಂದು ಸಚಿವರು ಹಾಗೂ ಶಾಸಕ ರಮೇಶ್ ಬಂಡಿಸಿದ್ದೇಗೌಡರಿಗೂ ಮನವಿ ಮಾಡಿದರು.

ಅದಕ್ಕೆ ಸಚಿವರು ಪ್ರತಿಕ್ರಿಯಿಸಿ, ನೀತಿ ಸಂಹಿತೆ ಇರುವ ಕಾರಣ ನಾನು ಬಹಿರಂಗವಾಗಿ ಹೇಳಿಕೆ ನೀಡುವಂತಿಲ್ಲ, ಸ್ಥಳೀಯ ನಾಯಕರು ಸಹ ಇದೇ ವಿಷಯವಾಗಿ ಚರ್ಚಿಸಿದ್ದಾರೆ ಅಗತ್ಯ ಕ್ರಮ ವಹಿಸುತ್ತೇನೆ ಎಂದರು.

ಈ ವೇಳೆ ವಿಧಾನ ಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ, ವಿಧಾನ ಪರಿಷತ್ ಸದಸ್ಯ ಮಧು ಮಾದೇಗೌಡ ಮಾತನಾಡಿದರು. ಶಾಸಕ ರಮೇಶ ಬಂಡಿಸಿದ್ದೇಗೌಡ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್‌ಚಂದ್ರು), ಶಾಸಕ ರವಿಕುಮಾರ್, ಮಾಜಿ ಶಾಸಕರಾದ ವಿಜಯಲಕ್ಷ್ಮಮ್ಮ , ರಾಮಕೃಷ್ಣ, ಮೈಶುಗರ್ ಕಾರ್ಖಾನೆ ಅಧ್ಯಕ್ಷ ಸಿ.ಡಿ ಗಂಗಾಧರ್, ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಮಿತ್ರ, ಜಿಪಂ ಮಾಜಿ ಅಧ್ಯಕ್ಷರಾದ ತಗ್ಗಳ್ಳಿ ವೆಂಕಟೇಶ್, ಎಸ್.ಲಿಂಗಣ್ಣ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅಂಜನ ಶ್ರೀಕಾಂತ್, ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ವಿಜಯ್, ಜಿಲ್ಲಾ ಮಾಧ್ಯಮ ಸಂಚಾಲಕ ಎಂ. ಪುಟ್ಟೇಗೌಡ, ಮನ್ಮುಲ್ ಅಧ್ಯಕ್ಷ ಬೋರೇಗೌಡ ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.