ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಅತೀ ವೇಗ, ಅಜಾಗರೂಕತೆ ಚಾಲನೆ, ಮದ್ಯಪಾನ ಮಾಡಿ ವಾಹನ ಚಾಲನೆ, ಚಾಲಕರ ನಿರ್ಲಕ್ಷ್ಯ ಹೀಗೆ ಕಳೆದೊಂದು ವರ್ಷದಲ್ಲಿ ದೇಶದ ವಿವಿಧೆಡೆ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ 4.60 ಲಕ್ಷ ಮಂದಿ ಮೃತಪಟ್ಟಿದ್ದು, ಪ್ರತಿಯೊಬ್ಬರೂ ಸಂಚಾರ ನಿಯಮ ಪಾಲಿಸಿ ಸಾವು, ನೋವು ತಡೆಯಲು ಮುಂದಾಗಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಸಲಹೆ ನೀಡಿದರು.ನಗರದ ಅಭಿನವ ಶ್ರೀ ರೇಣುಕಾ ಮಂದಿರದಲ್ಲಿ ಶುಕ್ರವಾರ ಜಿಲ್ಲಾ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಪ್ತಾಹ-2024ರ ಸಮಾರೋಪದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಚಾರಿ ನಿಯಮಗಳ ಬಗ್ಗೆ ಕನಿಷ್ಠ ಅರಿವು ಇಲ್ಲದಿರುವುದೂ ಕಾರಣವಾಗುತ್ತಿದೆ. ಮದ್ಯಪಾನ ಮಾಡಿದಾಗ ಯಾವುದೇ ಕಾರಣಕ್ಕೂ ವಾಹನ ಚಾಲನೆ ಮಾಡಬಾರದು. ಅವಸರ, ಅತೀ ವೇಗ, ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಬಾರದು ಎಂದು ಹೇಳಿದರು.
ಮಕ್ಕಳಿಗೆ ವಾಹನ ಚಲಾಯಿಸಲೂ ಕೊಡಬೇಡಿ:ವಾಹನ ಚಾಲನೆ ಮಾಡುವವರಿಗೆ ಸಂಚಾರಿ ನಿಯಮಗಳ ಬಗ್ಗೆ ಅರಿತು ಅತ್ಯಗತ್ಯ. ಪಾಲಕರು ಅಪ್ರಾಪ್ತ ಮಕ್ಕಳಿಗೆ ಯಾವುದೇ ಕಾರಣಕ್ಕೂ ವಾಹನ ಚಲಾಯಿಸಲು ಬಿಡಬಾರದು. ಈಗ ಆಗುತ್ತಿರುವ ಅಪಘಾತ ಪ್ರಕರಣಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ವಿದ್ಯಾರ್ಥಿಗಳು, ಅಪ್ರಾಪ್ತ ಮಕ್ಕಳೇ ಹೆಚ್ಚಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಅಪ್ರಾಪ್ತರಿಗೆ ವಾಹನ ಚಲಾಯಿಸಲು ಕೊಡಬೇಡಿ. ಮಕ್ಕಳು ಪ್ರಾಪ್ತ ವಯಸ್ಕರಾಗುವವರೆಗೂ ವಾಹನ ಕೊಡಿಸುವುದರ ಜೊತೆಗೆ ಚಾಲನೆಗೆ ಬಿಡಬಾರದು ಎಂದು ಪಾಲಕರಿಗೆ ಸಲಹೆ ನೀಡಿದರು.
ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲಾ ಮಾತನಾಡಿ, ಮನುಷ್ಯನ ಜೀವ ಅತ್ಯಮೂಲ್ಯವಾದುದು. ಚಾಲಕರು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು. ಮಕ್ಕಳಿಗೆ ಶಿಕ್ಷಣದ ಜೊತೆ ಜೊತೆಗೆ ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ, ಪಾಲನೆಯ ಮಹತ್ವದ ಬಗ್ಗೆ ತಿಳಿಸುವ ಕೆಲಸ ಆಗಬೇಕು. ಅಪ್ರಾಪ್ತರಿಗೆ ವಾಹನ ಚಲಾಯಿಸಲು ಬಿಟ್ಟು, ಆಕಸ್ಮಾತ್ ಅಪಘಾತವಾಗಿ, ಸಾವು ಸಂಭವಿಸಿದರೆ ಯಾವುದೇ ವಿಮೆ ಬರುವುದಿಲ್ಲ. ಮಕ್ಕಳ ಜೀವವೂ ಹಾನಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಹೆತ್ತವರು, ಕುಟುಂಬಗಳ ಹಿರಿಯರು ಯಾವುದೇ ಕಾರಣಕ್ಕೂ ಅಪ್ರಾಪ್ತರ ಕೈಗೆ ವಾಹನ ನೀಡಬೇಡಿ ಎಂದು ಸಲಹೆ ನೀಡಿದರು.ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ.ಮಂಜುನಾಥ, ಡಿವೈಎಸ್ಪಿ ಮಲ್ಲೇಶ ದೊಡ್ಮನಿ, ಶಶಿಧರ, ಇನ್ಸಪೆಕ್ಟರ್ ಗಳಾದ ಪ್ರಭಾವತಿ ಶೇತಸನದಿ, ಮಲ್ಲಮ್ಮ ಚೌಬೆ, ಇಮ್ರಾನ್ ಬೇಗ್, ಶೈಲಜಾ, ಜಯಪ್ರಕಾಶ, ನಿರ್ಮಲ, ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಹಾಯಕ ಆಯುಕ್ತ ಕೊಟ್ರೇಶ, ಪೊಲೀಸ್ ಅಧಿಕಾರಿ, ಸಿಬ್ಬಂದಿ, ವಿವಿಧ ಶಾಲಾ ಶಿಕ್ಷಕ-ಶಿಕ್ಷಕಿಯರು, ಮಕ್ಕಳು ಇದ್ದರು. ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಶಾಲಾ ಮಕ್ಕಳಿಗೆ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆ ವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು.
ಆರ್‌ಟಿಒ, ಪೊಲೀಸ್ ಇಲಾಖೆಯಿಂದ ಜಾಗೃತಿಪ್ರಾದೇಶಿಕ ಸಾರಿಗೆ ಅಧಿಕಾರಿ ಸಿ.ಎಸ್.ಪ್ರಮುತೇಶ್ ಮಾತನಾಡಿ, ವಾಹನ ಸವಾರರು ರಸ್ತೆ ಸುರಕ್ಷತಾ ಕಾನೂನನ್ನು ಸರಿಯಾಗಿ ಪಾಲಿಸುತ್ತಿಲ್ಲವಾದ್ದರಿಂದ ಸಾಕಷ್ಟು ಅಪಘಾತ ಸಂಭವಿಸುತ್ತಿವೆ. ರಸ್ತೆ ಅಪಘಾತದ ಬಗ್ಗೆ ಜಾಗೃತಿ ಮೂಡಿಸಲು ಪ್ರಾದೇಶಿಕ ಸಾರಿಗೆ ಇಲಾಖೆ, ಜಿಲ್ಲಾ ಪೊಲೀಸ್ ಇಲಾಖೆಗಳು ಸಾಕಷ್ಟು ಜಾಗೃತಿ ಕಾರ್ಯಕ್ರಮ ಆಯೋಜಿಸುತ್ತಿವೆ. ಪ್ರತಿಯೊಬ್ಬರೂ ಸಂಚಾರಿ ನಿಯಮ ಪಾಲಿಸಿ, ವಾಹನ ಚಾಲನೆ ಮಾಡಬೇಕು. ನಿಮ್ಮ ಪ್ರಾಣದಷ್ಟೇ ಮುಖ್ಯ ಇತರೆ ಪ್ರಯಾಣಿಕರು, ಇತರೆ ಚಾಲಕರು, ಪ್ರಯಾಣಿಕರ ಪ್ರಾಣವೂ ಅತ್ಯಮೂಲ್ಯವಾದುದು ಎಂಬ ಅರಿವು ಸದಾ ಇರಲಿ ಎಂದರು.
ಪೊಲೀಸ್ ಇಲಾಖೆ ಜನಸ್ನೇಹಿ, ವಿದ್ಯಾರ್ಥಿಸ್ನೇಹಿ ವಿದ್ಯಾರ್ಥಿಗಳು ಪೊಲೀಸರ ಕಂಡು ಭಯಬೀಳುವ ಅವಶ್ಯಕತೆ ಇಲ್ಲ. ಜನಸ್ನೇಹಿಯಾಗಿ, ವಿದ್ಯಾರ್ಥಿ ಸ್ನೇಹಿಯಾಗಿ ನಿಮಗಾಗಿಯೇ ಪೊಲೀಸ್ ಇಲಾಖೆಯಲ್ಲಿ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ. ಅಪ್ರಾಪ್ತ ಮಕ್ಕಳು ಯಾವುದೇ ಕಾರಣಕ್ಕೂ ವಾಹನ ಚಾಲನೆ ಮಾಡಬೇಡಿ. ಮನೆಯಿಂದ ಶಾಲೆಗೆ ಹೋಗುವಾಗ, ಮರಳುವಾಗ ಸಂಚಾರಿ ನಿಯಮ ಉಲ್ಲಂಘಿಸಬಾರದು, ರಸ್ತೆ ದಾಟುವ ವೇಳೆ ರಸ್ತೆಯ ಎರಡು ಬದಿ ನೋಡಿ ರಸ್ತೆ ದಾಟಬೇಕು. ಸಂಚಾರಿ ನಿಯಮದ ಬಗ್ಗೆ ವಿದ್ಯಾರ್ಥಿಗಳು ಎಲ್ಲರಲ್ಲೂ ಜಾಗೃತಿ ಮೂಡಿಸಬೇಕು.ಉಮಾ ಪ್ರಶಾಂತ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ