ಸಾರಾಂಶ
ಹಲಸಿನ ಬಗ್ಗೆ ರೈತರಿಗೆ ಹೆಚ್ಚಿನ ಅರಿವು ಮೂಡಿಸಬೇಕು. ಮಾರುಕಟ್ಟೆಯ ವ್ಯವಸ್ಥೆ ಕಲ್ಪಿಸಿದರೆ ಹಲಸು ರೈತರ ಉತ್ತಮ ವಾಣಿಜ್ಯ ಬೆಳೆಯಾಗಲಿದೆ ಎಂದು ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ಹಲಸಿನ ಬಗ್ಗೆ ರೈತರಿಗೆ ಹೆಚ್ಚಿನ ಅರಿವು ಮೂಡಿಸಬೇಕು. ಮಾರುಕಟ್ಟೆಯ ವ್ಯವಸ್ಥೆ ಕಲ್ಪಿಸಿದರೆ ಹಲಸು ರೈತರ ಉತ್ತಮ ವಾಣಿಜ್ಯ ಬೆಳೆಯಾಗಲಿದೆ ಎಂದು ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ಹೇಳಿದರು.ನಗರದ ಶ್ರೀ ಸತ್ಯಗಣಪತಿ ಅಮೃತ ಮಹೋತ್ಸವ ಭವನದಲ್ಲಿ ಶ್ರೀ ಸತ್ಯಗಣಪತಿ ಸೇವಾ ಸಂಘ ಟ್ರಸ್ಟ್ ಹಾಗೂ ಸೊಗಡು ಜನಪದ ಹೆಜ್ಜೆ, ತೋಟಗಾರಿಕೆ ಇಲಾಖೆ ಇವರ ಸಹಯೋಗದಲ್ಲಿ ಹಲವು ಸಂಘ ಸಂಸ್ಥೆಗಳು, ಸಹಕಾರ ಸಂಘ ಸಹಯೋಗದೊಂದಿಗೆ ಆಯೋಜಿಸಿದ್ದ ಹಲಸಿನ ಹಬ್ಬದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಹಲಸು ಆರೋಗ್ಯಕ್ಕೆ ಬಹಳ ಒಳ್ಳೆಯದು. ಹಲಸು ಬೆಳೆಯಲು ಹೆಚ್ಚಿನ ನೀರಿನ ಅವಶ್ಯಕತೆ ಇರುವುದಿಲ್ಲ. ಇದು ಕೇವಲ ಮಳೆಯಾಧಾರಿತ ಬೆಳೆಯಾಗಿದೆ. ಹಲಸಿನಿಂದ ವಿವಿಧ ಬಗೆಯ ಆಹಾರ ಖಾದ್ಯಗಳನ್ನು ತಯಾರಿಸಿ ಮಾರಾಟ ಮಾಡಬಹುದು ಎಂದು ತಿಳಿಸಿದರು.ಶಾಸಕ ಕೆ. ಷಡಕ್ಷರಿ ಮಾತನಾಡಿ, ತಿಪಟೂರಿನಲ್ಲಿ ಎರಡನೇ ಬಾರಿ ಹಲಸು ಹಬ್ಬ ನಡೆಯುತ್ತಿದ್ದು, ರೈತರು ಪ್ರಮುಖ ಬೆಳೆಯಾಗಿ ಹಲಸನ್ನು ಬೆಳೆಯಬಹುದು. ಇತ್ತೀಚಿನ ದಿನಗಳಲ್ಲಿ ಹಲಸು ಬೆಳೆ ಕಡಿಮೆಯಾಗಿರುವ ಕಾರಣ ಈ ಹಣ್ಣು ದುಬಾರಿಯಾಗುತ್ತಿದೆ ಎಂದು ಹೇಳಿದರು.
ಕೆವಿಕೆ ವಿಜ್ಞಾನಿ ಕೀರ್ತಿ ಮಾತನಾಡಿ, ಹಲಸಿನ ಹಣ್ಣನ್ನು ಮನೆ ಬಳಕೆಗೆ ಮಾತ್ರ ಬಳಸುತ್ತಿದ್ದು, ಇದಕ್ಕೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದರೆ ರೈತರಿಗೆ ಅನುಕೂಲವಾಗಲಿದೆ ಎಂದು ಮಾಹಿತಿ ನೀಡಿದರು.ಹಲಸು ಅಡುಗೆ ರುಚಿ ಮತ್ತು ತೂಕದ ಹಣ್ಣು ಸ್ಪರ್ಧೆ, ಹಲಸಿನ ವಿವಿಧ ಖಾದ್ಯ ತಯಾರಿಕೆಯ ಪ್ರಾತ್ಯಕ್ಷಿಕೆ, ಮಾರಾಟ, ವಿವಿಧ ತಳಿಯ ಹಲಸಿನ ಸಸಿಗಳ ಪ್ರದರ್ಶನ ನಡೆಯಿತು.
ಪಾರಂಪರಿಕ ಹಲಸಿನ ಬೆಳೆ ಸಂರಕ್ಷಕ ತಿಗಳನಹಳ್ಳಿ ಮಲ್ಲಿಕಾರ್ಜುನಯ್ಯರನ್ನು ಸನ್ಮಾನಿಸಲಾಯಿತು. ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್, ಮಾಜಿ ಸಚಿವ ಬಿ.ಸಿ.ನಾಗೇಶ್, ಸೊಗಡು ಗೌರವಾಧ್ಯಕ್ಷ ಗುಂಗರಮಳೆ ಮುರುಳೀಧರ್, ಉಪಾಧ್ಯಕ್ಷ ನಿಜಗುಣ, ಕಾರ್ಯದರ್ಶಿ ಚಿದಾನಂದ್, ಸದಸ್ಯೆ ಮಂಜುಳ ತಿಮ್ಮೇಗೌಡ, ಶ್ರೀ ಸತ್ಯಗಣಪತಿ ಸೇವಾ ಸಂಘ ಟ್ರಸ್ಟ್ ಅಧ್ಯಕ್ಷ ಶ್ರೀಕಂಠ, ಚೌಡೇಶ್ವರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸೋಮಶೇಖರ್, ರೈತ ಉತ್ಪಾದಕರ ಕಂಪನಿಯ ಮಾದಿಹಳ್ಳಿ ದಯಾನಂದ್, ನಗರಸಭೆ ಮಾಜಿ ಸದಸ್ಯ ತರಕಾರಿ ಗಂಗಾಧರ್, ಕದಳಿ ಬಳಗದ ಪ್ರಭಾವಿಶ್ವನಾಥ್ ಸಾವಿತ್ರಿ ಹೊಸಮನಿ ಮತ್ತಿತರರಿದ್ದರು.