ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಸ್ಫರ್ಧಾತ್ಮಕ ಯುಗದಲ್ಲಿ ಸಿಗುವ ಅವಕಾಶಗಳನ್ನು ಸಂಪೂರ್ಣವಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ತಿಳಿಸಿದರು.ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಜಿಲ್ಲಾಡಳಿತ, ಕೊಡಗು ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಕೌಶಲ್ಯ ಮಿಷನ್ ಮತ್ತು ಜಿಲ್ಲಾ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಐಟಿಐ ಕಾಲೇಜಿನಲ್ಲಿ ನಡೆದ ಉದ್ಯೋಗಮೇಳ-2025 ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಥಮವಾಗಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯ ತಿಳಿಸಿ ಮಾತನಾಡಿದ ಶಾಸಕರು ಪ್ರತಿಯೊಬ್ಬರಲ್ಲಿಯೂ ಒಂದು ಬಗೆಯ ಕೌಶಲ್ಯವಿರುತ್ತದೆ. ಅವುಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು. ಸಿಗುವ ಉದ್ಯೋಗದ ಬಗ್ಗೆ ಗೌರವ ಮತ್ತು ಪ್ರೀತಿಯನ್ನು ಹೊಂದಿರಬೇಕು ಎಂದು ತಿಳಿಸಿದರು.ಈ ದಿನದ ಉದ್ಯೋಗಮೇಳದಲ್ಲಿ 24 ಕಂಪನಿಗಳು ರಾಜ್ಯದ ವಿವಿಧ ಭಾಗದಿಂದ ಆಗಮಿಸಿದೆ. ಅರ್ಜಿ ಸಲ್ಲಿಸುವ ಎಲ್ಲರಿಗೂ ಉದ್ಯೋಗ ಸಿಗದಿದ್ದರೂ, ಉದ್ಯೋಗಾಕಾಂಕ್ಷಿಗಳು ಸಲ್ಲಿಸುವ ಮಾಹಿತಿಯನ್ನು ಇತರ ಕಂಪನೆಗಳಿಗೂ ರೆಫರ್ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಪ್ರವಾಸೋದ್ಯಮ ಮತ್ತು ಹೋಟೆಲ್ ಸಂಬಂಧಿದ ಕ್ಷೇತ್ರಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳಿದ್ದು, ಸ್ಥಳೀಯ ಯುವಕ-ಯುವತಿಯರಿಗೆ ಈ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗ ದೊರೆಯುವಂತಾಗಬೇಕು ಎಂದರು.ಪ್ರತಿಯೊಬ್ಬರೂ ಸರ್ಕಾರಿ ಕೆಲಸವನ್ನೇ ಅವಲಂಬಿಸಬಾರದು. ಯಾವ ಕೆಲಸ ದೊರೆಯುತ್ತದೆಯೋ ಆ ಕೆಲಸವನ್ನು ಮನಃಪೂರ್ವಕವಾಗಿ ಮಾಡಬೇಕು ಇದರಿಂದ ಖಂಡಿತ ಯಶಸ್ಸು ಲಭಿಸುತ್ತದೆ ಎಂದು ಉದ್ಯೋಗಾಕಾಂಕ್ಷಿಗಳಿಗೆ ಕಿವಿಮಾತು ಹೇಳಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾತನಾಡಿ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಉದ್ಯೋಗಮೇಳ ಹಮ್ಮಿಕೊಂಡಿರುವುದು ಅರ್ಥಪೂರ್ಣವಾಗಿದೆ. ‘‘ಸ್ಪರ್ಧಾತ್ಮಕ ಯುಗದಲ್ಲಿ ಭಯ ಇರಬಾರದು. ಸೂಕ್ತ ರೀತಿಯಲ್ಲಿ ಪರಿಶ್ರಮ ಹಾಕಿದರೆ ಖಂಡಿತ ಯಶಸ್ಸು ದೊರೆಯುತ್ತದೆ” ಎಂದು ಅವರು ತಿಳಿಸಿದರು.ಉದ್ಯೋಗ ಯಾವ ಊರಿನಲ್ಲಿ ದೊರೆಯುತ್ತದೆಯೋ ಅಲ್ಲಿ ಕೆಲಸ ನಿರ್ವಹಿಸಲು ಸಿದ್ಧರಿರಬೇಕು. ನಾನು ಸಹ ದೇಶ ಸೇವೆಗಾಗಿ ಊರಿನಿಂದ 2000 ಕಿ.ಮೀ ದೂರದ ಊರಿಗೆ ಬಂದು ಕರ್ತವ್ಯ ಸಲ್ಲಿಸುತ್ತಿದ್ದೇನೆ ಎಂದು ಉದ್ಯೋಗಾಕಾಂಕ್ಷಿಗಳಿಗೆ ಆತ್ಮವಿಶ್ವಾಸ ತುಂಬಿದರು.
ಯಾವುದೇ ಉದ್ಯೋಗ ಮೇಲೂ ಅಲ್ಲ ಕೀಳೂ ಅಲ್ಲ. ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು. ಉದ್ಯೋಗ ದೊರೆತ ನಂತರ ಅದರಲ್ಲಿ ನೈಪುಣ್ಯತೆ ಹೊಂದಿ ಯಶಸ್ಸಿನೆಡೆಗೆ ಸಾಗಬೇಕು. ಸರ್ಕಾರ ಯುವನಿಧಿ ಯೋಜನೆಯನ್ನು ಜಾರಿಗೆ ತಂದಿದ್ದು, ನಿಮ್ಮ ವಿದ್ಯಾರ್ಹತೆಗೆ ಅನುಸಾರ ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.ಯುವನಿಧಿಗೆ ಈಗಾಗಲೇ ಹೆಸರು ನೋಂದಾಯಿಸಿ ಕೊಂಡಿರುವವರನ್ನೂ ಸಹ ಈ ಉದ್ಯೋಗಮೇಳಕ್ಕೆ ಹಾಜರಾಗುವಂತೆ ಸಂಪರ್ಕಿಸಲಾಗಿದೆ ಎಂದು ಅವರು ತಿಳಿಸಿದರು.
"ಉದ್ಯೋಗ ಮೇಳದಲ್ಲಿ ಒಟ್ಟು 24 ವಿವಿಧ ಕಂಪನಿಗಳು ಭಾಗವಹಿಸಿದ್ದವು, 750 ಕ್ಕೂ ಹೆಚ್ಚು ಮಂದಿ ಉದ್ಯೋಗಾಕಾಂಕ್ಷಿಗಳು ಹೆಸರು ನೋಂದಾಯಿಸಿಕೊಂಡಿದ್ದು ವಿಶೇಷವಾಗಿತ್ತು.ಕೊಡಗು ಜಿಲ್ಲಾ ಪಂಚಾಯಿತಿಯ ಸಂಪನ್ಮೂಲ ಕೇಂದ್ರದ ಆಡಳಿತ ಸಹಾಯಕರಾದ ಗಾಯತ್ರಿ ದೇವಿ ಪ್ರಾರ್ಥಿಸಿದರು, ಮಡಿಕೇರಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಶೇಖರ್ ಸ್ವಾಗತಿಸಿದರು, ಎನ್.ಆರ್.ಎಲ್.ಎಂ ವಿಭಾಗದ ಗಾಯತ್ರಿ ನಿರೂಪಿಸಿದರು.
ಕೊಡಗು ಜಿಲ್ಲಾ ಪಂಚಾಯಿತಿ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ, ಜಿ.ಪಂ.ಉಪ ಕಾರ್ಯದರ್ಶಿ ಅಬ್ದುಲ್ ನಬಿ, ಯೋಜನಾ ನಿರ್ದೇಶಕರಾದ ಜೀವನ್ ಕುಮಾರ್, ಸೋಮವಾರಪೇಟೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಪರಮೇಶ್, ಜಿಲ್ಲಾ ಉದ್ಯೋಗಾಧಿಕಾರಿ ಮಂಜುನಾಥ್, ಐಟಿಐ ಕಾಲೇಜಿನ ಪ್ರಾಂಶುಪಾಲರಾದ ಶ್ರೀಧರ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ರೇಖಾ ಗಣಪತಿ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ಕುಮಾರ್, ಎನ್.ಆರ್.ಎಲ್.ಎಂ. ಸಂಜೀವಿನಿ ಯೋಜನೆಯ ಜಿಲ್ಲಾ ಮತ್ತು ತಾಲೂಕು ಸಿಬ್ಬಂದಿ ಇತರರು ಇದ್ದರು.