ಸಾರಾಂಶ
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಲಕ್ಷಾಂತರ ಭಕ್ತರು ಆಗಮಿಸಿ ವಿಜೃಂಭಣೆಯಿಂದ ನಡೆಸುವ ಜಿಲ್ಲೆಯ ಪ್ರಸಿದ್ಧ ಚಳ್ಳಕೆರೆ ತಾಲೂಕಿನ ತಳಕು ಹೋಬಳಿಯ ಗೌರಸಮುದ್ರ ಶ್ರೀಮಾರಮ್ಮನ ಜಾತ್ರೆ ಸೆ.2,3 ಮತ್ತು 4 (ಮೂರು ದಿನ)ಗಳ ಕಾಲ ನಡೆಯಲಿದ್ದು, ಜಾತ್ರೆಯನ್ನು ಯಶಸ್ವಿಗೊಳಿಸಲು ಆಗಮಿಸುವ ಭಕ್ತರಿಗೆ ಸೂಕ್ತ ಸೌಲಭ್ಯ ಕಲ್ಪಿಸಿ, ಅಧಿಕಾರಿಗಳು ಜಾಗ್ರತೆ ವಹಿಸಬೇಕು ಎಂದು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕ ಎನ್.ವೈ. ಗೋಪಾಲಕೃಷ್ಣ ಸೂಚಿಸಿದರು.ಅವರು, ತಾಲೂಕು ಕಚೇರಿ ಆವರಣದಲ್ಲಿ ಶನಿವಾರ ಜಾತ್ರಾ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿ ವರ್ಷವೂ ಜಾತ್ರೆಗೆ ಆಗಮಿಸುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಮೂಲಭೂತ ಸೌಕರ್ಯಗಳ ಕೊರತೆ ಉಂಟಾಗದಂತೆ ವ್ಯವಸ್ಥೆ ಮಾಡಬೇಕಿದೆ. ವಿಶೇಷವಾಗಿ ಕುಡಿಯುವ ನೀರು, ಶೌಚಾಲಯ, ಸ್ವಚ್ಚತೆ, ಸಾರಿಗೆ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ, ಆರೋಗ್ಯ, ರಸ್ತೆ ರಿಪೇರಿ ಮುಂತಾದ ಕಾರ್ಯಗಳನ್ನು ಸಮಾರೋಪಾದಿಯಲ್ಲಿ ಆರಂಭಿಸಬೇಕು.
ವಿಶೇಷವಾಗಿ ಗೌರಸಮುದ್ರ ಜಾತ್ರೆ ಹಿನ್ನೆಲೆಯಲ್ಲಿ ಆ ಭಾಗದ ಸಂಪರ್ಕ ರಸ್ತೆಗಳ ರಿಪೇರಿಗಾಗಿ ಸುಮಾರು ₹5 ಕೋಟಿ ಹಣವನ್ನು ನೀಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಇದರ ಜೊತೆಯಲ್ಲಿ ಇನ್ನೂ ಎರಡು ಪ್ರಮುಖ ರಸ್ತೆಗಳ ನಿರ್ಮಾಣ ಕಾರ್ಯದ ಭೂಮಿಪೂಜೆ ಶೀಘ್ರದಲ್ಲೇ ನೆರವೇರಿಸಲಾಗುವುದು ಎಂದರು.ತಹಸೀಲ್ದಾರ್ ರೇಹಾನ್ ಪಾಷ ಮಾತನಾಡಿ, ಈಗಾಗಲೇ ತಾಲೂಕು ಆಡಳಿತದ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಕಾಯೋನ್ಮುಖರಾಗಲು ನಿರ್ದೇಶನ ನೀಡಲಾಗಿದೆ ಎಂದರು. ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದ ಎನ್. ಕಾವ್ಯ ಮಾತನಾಡಿ, ಈಗಾಗಲೇ ರಸ್ತೆಗಳಲ್ಲಿರುವ ಜಾಲಿಗಿಡಗಳನ್ನು ತೆರವುಗೊಳಿಸಿದೆ. ನಮ್ಮ ವ್ಯಾಪ್ತಿಯ ರಸ್ತೆಗಳ ರಿಪೇರಿ ಕಾರ್ಯ ಪೂರೈಸಲಾಗುವುದು ಎಂದರು.
ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿ ಮಾಹಿತಿ ನೀಡಿ, ಈಗಾಗಲೇ ಮೂರಕ್ಕೂ ಹೆಚ್ಚು ಬೋರ್‌ಗಳಲ್ಲಿ ನೀರಿದೆ. ಅಗತ್ಯ ಇದ್ದರೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಹೆಚ್ಚುವರಿ ಬೋರ್ ಕೊರೆಸಲಾಗುವುದು ಎಂದರು. ತಾಲೂಕು ಆರೋಗ್ಯಾಧಿಕಾರಿ ಡಾ.ಎನ್. ಕಾಶಿ ಮಾಹಿತಿ ನೀಡಿ, ಗ್ರಾಮದಲ್ಲಿಯೇ ತಾತ್ಕಾಲಿಕ ಆಸ್ಪತ್ರೆಯೊಂದಿಗೆ ಮೂರು ಅಂಬ್ಯುಲೆನ್ಸ್ ಕಾರ್ಯನಿರ್ವಹಿಸಲಿದೆ. ಹೆಚ್ಚುವರಿ ವೈದ್ಯರ ನಿಯೋಜನೆ ಮಾಡಲಾಗುವುದು ಎಂದರು.ಡಿವೈಎಸ್ಪಿ ಟಿ.ಬಿ. ರಾಜಣ್ಣ ಮಾಹಿತಿ ನೀಡಿ, ಪೊಲೀಸ್ ಇಲಾಖೆ ಬ್ಯಾರಿಕೇಟ್ ನಿರ್ಮಿಸಿ, ಬಂದೋಬದ್ತ್ ನಿರ್ಮಿಸಲಾಗುವುದು. 10ಕಡೆ ಸಿಸಿ ಕ್ಯಾಮರ ಅಳವಡಿಸಲಾಗುವುದು ಎಂದರು. ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ಪ್ರಭು, ಕಳೆದ ಬಾರಿ 40 ಬಸ್‌ಗಳ ಸೇವೆ ಒದಗಿಸಿದ್ದು, ಈ ಬಾರಿ ಹೆಚ್ಚುವರಿ ಬಸ್ ಸೇವೆ ಕಲ್ಪಿಸಲಾಗುವುದು ಎಂದರು.
ತಾ. ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್. ಶಶಿಧರ, ಪಿಡಿಒ ಹನುಮಂತರಾಯ, ಪಶುವೈದ್ಯಾಧಿಕಾರಿ ರೇವಣ್ಣ, ಬೆಸ್ಕಾಂ ಅಧಿಕಾರಿ ಮಮತ, ಲೋಕೋಪಯೋಗಿ ಸಹಾಯಕ ಇಂಜಿನಿಯರ್ ವಿಜಯಭಾಸ್ಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್ ಇತರರು ಇದ್ದರು.