ಅಲ್ಲಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ 2023-24ನೇ ಸಾಲಿನ ನರೇಗಾ ಅನುದಾನ ಹಾಗೂ 15ನೇ ಹಣಕಾಸು ಆಯೋಗದ ಆರ್ಥಿಕ ಅನುದಾನದಲ್ಲಿ ನಿರ್ಮಿಸಿರುವ ಶಾಲಾ ಕಾಂಪೌಂಡ್. ಭೋಜನಾಲಯ ನಿರ್ಮಾಣ, ಸಿಸಿ ಟಿವಿ ಅನ್ನು ಜಿಲ್ಲಾಧಿಕಾರಿ ಉದ್ಘಾಟಿಸಿದರು.

ಕುಂದಗೋಳ: ಗ್ರಾಪಂ ವ್ಯವಸ್ಥೆ ಬಲಿಷ್ಠವಾಗಿದ್ದು, ಸರ್ಕಾರದ ವಿವಿಧ ಯೋಜನೆಗಳಡಿ ಸಿಗುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಮೀಣ ಮೂಲ ಸೌಕರ್ಯಗಳನ್ನು ಉತ್ತಮ ಪಡಿಸಬೇಕು. ಪುಟ್ಟ ಗ್ರಾಮ ಅಲ್ಲಾಪುರ ಅಭಿವೃದ್ಧಿಯಲ್ಲಿ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.

ತಾಲೂಕಿನ ಅಲ್ಲಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ 2023-24ನೇ ಸಾಲಿನ ನರೇಗಾ ಅನುದಾನ ಹಾಗೂ 15ನೇ ಹಣಕಾಸು ಆಯೋಗದ ಆರ್ಥಿಕ ಅನುದಾನದಲ್ಲಿ ನಿರ್ಮಿಸಿರುವ ಶಾಲಾ ಕಾಂಪೌಂಡ್ ಭೋಜನಾಲಯ ನಿರ್ಮಾಣ, ಸಿಸಿ ಟಿವಿ ಉದ್ಘಾಟಿಸಿ ಮಾತನಾಡಿದರು.

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಹಾಗೂ ಶಾಲಾ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಆದ್ಯತೆ ನೀಡಲಾಗಿದೆ. ಬರುವ 2025-26 ನೇ ಸಾಲಿನಲ್ಲಿ ಪ್ರೌಢಶಾಲೆ ಜತೆಗೆ ಪ್ರಾಥಮಿಕ ಶಾಲಾ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಕ್ರಮ ವಹಿಸಲಾಗುತ್ತದೆ. ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದರು.

ಅಲ್ಲಾಪುರ ಗ್ರಾಮ ತಂಬಾಕು ಮುಕ್ತ, ಸರಾಯಿ ಮುಕ್ತವಾಗಿ ಇತರ ಗ್ರಾಮಗಳಿಗೆ ಮಾದರಿ ಆಗಿದೆ. ಜಿಲ್ಲೆಯ ಎಲ್ಲ ಗ್ರಾಮಗಳು ಈ ರೀತಿ ತಂಬಾಕು ಮುಕ್ತ, ಸರಾಯಿ ಮುಕ್ತವಾದರೆ, ಜಿಲ್ಲೆಯ ಅಭಿವೃದ್ದಿಗೆ ಸಹಕಾರಿಯಾಗಲಿದೆ ಎಂದರು.

ಜಿಪಂ ಸಿಇಒ ಭುವನೇಶ ಪಾಟೀಲ ಮಾತನಾಡಿ, ಜಿಲ್ಲೆಯ ಪ್ರತಿ ಗ್ರಾಮದಲ್ಲಿ ನರೇಗಾ ಯೋಜನೆ ಉತ್ತಮ ರೀತಿಯಲ್ಲಿ ಅನುಷ್ಠಾನಗೊಳಿಸಲು ಕ್ರಮ ವಹಿಸಲಾಗಿದೆ. ಪ್ರತಿ ತಾಲೂಕಿನ 5 ಗ್ರಾಮಗಳ ಶಾಲೆಗಳನ್ನು ಮಾದರಿ ಶಾಲೆಗಳಾಗಿ ರೂಪಿಸಲು ಯೋಜನೆ ರೂಪಿಸಲಾಗಿದೆ. ಅರಣ್ಯ ಇಲಾಖೆಯಿಂದ ಪ್ರತಿ ಶಾಲಾ ಆವರಣದಲ್ಲಿ ಸಸಿಗಳನ್ನು ನೆಡಲು ಮತ್ತು ಶಾಲೆಯ ಸುತ್ತ ಹಸಿರು ತಡೆಗೋಡೆ ನಿರ್ಮಾಣ ಮಾಡಲಾಗುತ್ತದೆ ಎಂದರು.ಕುಂದಗೋಳ ಕಲ್ಯಾಣಪುರ ಮಠದ ಅಭಿನವ ಬಸವಣ್ಣಜ್ಜವರು ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಸದಸ್ಯರಾದ ಮಲ್ಲಿಕಾರ್ಜುನ ರಡ್ಡೇರ ಮಾತನಾಡಿದರು.

ತಹಸೀಲ್ದಾರ್‌ ರಾಜು ಮಾವರಕರ, ತಾಪಂ ಇಒ ಜಗದೀಶ ಕಮ್ಮಾರ, ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವಿ ಮಾಡಲಗೇರಿ, ಗುಡೇನಕಟ್ಟಿ ಗ್ರಾಪಂ ಅಧ್ಯಕ್ಷೆ ಮಮತಾ ಬೆಟದೂರ, ಎಸ್‌ಡಿಎಂಸಿ ಅಧ್ಯಕ್ಷ ಖಾದರಸಾಬ ಹಳ್ಳಿಕೇರಿ, ಗ್ರಾಪಂ ಸದಸ್ಯ ಚಿದಾನಂದ ಪೂಜಾರ, ಪಿಡಿಒ ಧರ್ಮಪ್ರಸಾದ ಕಾಲವಾಡ, ಮುಖಂಡ ಚನ್ನಯ್ಯ ಹಿರೇಮಠ, ಶಾಲೆಗೆ ಭೂದಾನ ಮಾಡಿದ ಶಿವಬಸಪ್ಪ ಮಸನಾಳ, ಸ್ವಾಮಿರಾವ್ ಕುಲಕರ್ಣಿ ಸೇರಿದಂತೆ ಹಲವರಿದ್ದರು. ಶಾಲೆಯ ಪ್ರಧಾನ ಗುರುಮಾತೆ ಜೆ.ಎ. ಉಪಾಧ್ಯಯ ಸ್ವಾಗತಿಸಿದರು. ಶಿಕ್ಷಕಿ ರಜನಿ ಪಾಟೀಲ ನಿರೂಪಿಸಿದರು.