ಸಾರಾಂಶ
ಕನ್ನಡಪ್ರಭ ವಾರ್ತೆ ಲಿಂಗಸುಗೂರು
ಸತ್ಯ ಅಳೆದು ತೂಗಿ ನ್ಯಾಯಾಲಯದ ತೀರ್ಪು ಪ್ರಕಟಗೊಳ್ಳುತ್ತವೆ. ನ್ಯಾಯದಾನದಲ್ಲಿ ಸತ್ಯವೇ ಪ್ರಮುಖ ಅಂಶವಾಗಿದೆ. ಅನಗತ್ಯ ವಿಚಾರಗಳಿಂದ ಜನರ ಮಧ್ಯೆ ಪರಸ್ಪರ ವೈಮನಸ್ಸು ಬೆಳೆದು ಸಮಾಜ ಹಾಳಾಗುತ್ತದೆ. ಇದನ್ನು ಮನಗೊಂಡು ನ್ಯಾಯಾಲಯಗಳು ಲೋಕ ಅದಾಲತ್ ನಡೆಸುತ್ತವೆ. ಲೋಕ ಅದಾಲತ್ತಿನಲ್ಲಿ ವ್ಯಾಜ್ಯಗಳು ಇತ್ಯರ್ಥಪಡಿಸಿಕೊಂಡರೆ ಇರ್ವರಿಗೂ ನ್ಯಾಯ ಸಿಗುತ್ತದೆ. ಇದೇ 13ರಂದು ಲೋಕ ಅದಾಲತ್ ಇದ್ದು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ದಿವಾಣಿ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶೆ ಕುಮಾರಿ ಉಂಡಿ ಮಂಜುಳಾ ಶಿವಪ್ಪ ಕರೆ ನೀಡಿದರು.ತಮ್ಮ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕ ಅದಾಲತ್ತಿನಲ್ಲಿ ಪ್ರಕರಣಗಳ ಇತ್ಯರ್ಥಪಡಿಸಿಕೊಂಡರೆ, ಆ ಪ್ರಕರಣದ ಕುರಿತು ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ. ವಿಳಂಬದ ನ್ಯಾಯದಾನದಿಂದ ಜನರಿಗೆ ನ್ಯಾಯಾಲಯಗಳ ಮೇಲೆ ವಿಶ್ವಾಸ ಕಳೆದು ಹೋಗುತ್ತದೆ. ವಿಳಂಬದ ನ್ಯಾಯದಾನದಿಂದ ಸೋತವನ್ನು ಗೆದ್ದ, ಗೆದ್ದವನು ಸತ್ತ ಎಂಬಂತಾಗುತ್ತದೆ. ಇದನ್ನು ಮನಗೊಂಡು ಲೋಕ ಅದಾಲತ್ ಮೂಲಕ ವ್ಯಾಜ್ಯ ಇತ್ಯರ್ಥಕ್ಕೆ ಅವಕಾಶವಿದೆ. ಲೋಕ ಅದಾಲತ್ ಕುರಿತು ಜನರಲ್ಲಿ ಅರಿವು ಮೂಡಿಸಲು ಮಾಧ್ಯಮಗಳು ಸಹಕಾರ ಪ್ರಮುಖವಾಗಿದೆ. ಜನರು ಅನಗತ್ಯವಾಗಿ ನ್ಯಾಯಾಲಗಳಿಗೆ ಅಲೆದಾಡುವುದನ್ನು ತಪ್ಪಿಸಲು ಲೋಕ ಅದಾಲತ್ ಯಶಸ್ವಿಗೆ ಸಹಕರಿಸಲು ಹೇಳಿದರು.
ಸ್ವಾಮಿತ್ವ ವರ್ಗಾವಣೆ ಕಾಯ್ದೆಯಡಿ ದಾಖಲಾದ ಪ್ರಕರಣಗಳನ್ನು ಲೋಕ ಅದಾಲತ್ತಿನಲ್ಲಿ ಇತ್ಯರ್ಥಪಡಿಸಿಕೊಳ್ಳುವುದು ಅಗತ್ಯವಾಗಿದೆ. ಅಲ್ಲದೇ ಬ್ಯಾಂಕುಗಳ ಸಾಲಗಾರರಿಗೆ ನೀಡಿದ ಸಾಲದ ಪ್ರಕರಣಗಳನ್ನು ಲೋಕ ಅದಾಲತ್ತಿನಲ್ಲಿ ಇತ್ಯರ್ಥಪಡಿಸಿಕೊಳ್ಳಬೇಕು. ಇದರಿಂದ ಸಮಯವು ಉಳಿಯುವ ಜೊತೆಗೆ ಕೇವಲ ಅಸಲು ಪಾವತಿಸಿದರೆ ಸಾಕು ಬ್ಯಾಂಕುಗಳು ಸಂಪೂರ್ಣ ಬಡ್ಡಿ ವಿನಾಯತಿ ನೀಡಬೇಕೆಂಬ ಕಾನೂನು ಇದೆ. ಬ್ಯಾಂಕುಗಳ ಸಾಲಗಾರರು ಲೋಕ ಅದಾಲತ್‌ಗೆ ಹಾಜರಿಯಾಗಬೇಕೆಂದು ತಿಳಿಸಿದರು.ಮೋಟಾರು ವಾಹನಗಳ ಚಾಲನೆ, ಸಂಚಾರಿ ನಿಯಮಗಳ ಪಾಲನೆಗೆ ಹೆಚ್ಚಿನ ಒತ್ತು ನೀಡಬೇಕು. ನಿಯಮ ಪಾಲನೆ ಮಾಡದೇ ಇದ್ದರೆ ಪೊಲೀಸರು ಹೆಚ್ಚಿನ ಪ್ರಮಾಣದಲ್ಲಿ ದಂಡ ವಿಧಿಸಲು ಅವಕಾಶವಿದೆ. ಅಪ್ರಾಪ್ತ ಮಕ್ಕಳು ವಾಹನಗಳ ಚಾಲನೆ ಮಾಡಿದರೆ ಪಾಲಕರಿಗೆ ದಂಡ ವಿಧಿಸುವ ಜೊತೆಗೆ ಅವರ ವಾಹನದ ನೋಂದಣಿ ರದ್ದಾಗುತ್ತದೆ. ಅಪ್ರಾಪ್ತರು ವಾಹನ ಚಾಲನೆ ಮಾಡಿದರೆ ಯಾವುದೇ ಕಾರಣಕ್ಕೂ ವಿನಾಯಿತಿ ನೀಡದೇ ಪ್ರಭಾವಕ್ಕೆ ಒಳಗಾಗದೇ ದಂಡ ವಿಧಿಸಬೇಕೆಂದು ಪೊಲೀಸರಿಗೆ ತಾಕೀತು ಮಾಡಿದರು.
ಲಿಂಗಸುಗೂರು ನ್ಯಾಯಾಲಯದಲ್ಲಿ ಇದೇ 13ರಂದು ನಡೆಯುವ ಲೋಕ ಅದಾಲತ್ತಿನಲ್ಲಿ ವ್ಯಾಜ್ಯಗಳ ಇತ್ಯರ್ಥಕ್ಕೆ ಕಕ್ಷಿದಾರರು ಆಗಮಿಸಿ ತಮ್ಮ ಪ್ರಕರಣ ಇತ್ಯರ್ಥಪಡಿಸಿಕೊಂಡು ಶಾಂತಿ, ಸಹಬಾಳ್ವೆ ಸಮಾಜದ ನಿರ್ಮಾಣಕ್ಕೆ ಸಹಕರಿಸಬೇಕು ಎಂದರು.ಈ ವೇಳೆ ದಿವಾಣಿ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಅಂಬಣ್ಣ, ಕೆ.ವಕೀಲರ ಸಂಘದ ಅಧ್ಯಕ್ಷ ಭೂಪನಗೌಡ ಕರಡಕಲ್, ನ್ಯಾಯಲಯದ ಸಿಬ್ಬಂದಿ ವೆಂಕೋಬ ಗುಡದನಾಳ, ಅಶೋಕ ಪಟ್ಟಣಶೆಟ್ಟಿ, ಹುಲ್ಲಪ್ಪ ಗೌಂಡಿ, ಮಹಾಂತಯ್ಯ, ಪೊಲೀಸ್ ಸಿಬ್ಬಂದಿ ತಿಮ್ಮಣ್ಣ, ಶಿವಾನಂದ ಒಡೆಯರ್ ಇತರರು ಇದ್ದರು.