ಲೋಕ ಅದಾಲತ್ ಸದ್ಬಳಕೆ ಮಾಡಿಕೊಳ್ಳಿ: ನ್ಯಾಯಾಧೀಶ ಮಲಕಾರಿ ರಾಮಪ್ಪ ಒಡೆಯರ್‌

| Published : Jun 20 2024, 01:10 AM IST

ಲೋಕ ಅದಾಲತ್ ಸದ್ಬಳಕೆ ಮಾಡಿಕೊಳ್ಳಿ: ನ್ಯಾಯಾಧೀಶ ಮಲಕಾರಿ ರಾಮಪ್ಪ ಒಡೆಯರ್‌
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಈಗಾಗಲೇ ಇರುವ ಮತ್ತು ಹೊಸ ಪ್ರಕರಣಗಳು ಸೇರಿದಂತೆ ಪರಸ್ಪರ ರಾಜಿ ಮೂಲಕ ಇತ್ಯರ್ಥ ಮಾಡಿಕೊಳ್ಳಲು ಜು. 13ರಂದು ಲೋಕ ಅದಾಲತ್ ನಡೆಸಲಾಗುತ್ತಿದ್ದು, ಕಕ್ಷಿದಾರರು ಇದರ ಸದ್ಬಳಕೆ ಮಾಡಿಕೊಳ್ಳಬೇಕು

ಕನ್ನಡಪ್ರಭ ವಾರ್ತೆ ಕೊಪ್ಪಳ

ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಈಗಾಗಲೇ ಇರುವ ಮತ್ತು ಹೊಸ ಪ್ರಕರಣಗಳು ಸೇರಿದಂತೆ ಪರಸ್ಪರ ರಾಜಿ ಮೂಲಕ ಇತ್ಯರ್ಥ ಮಾಡಿಕೊಳ್ಳಲು ಜು. 13ರಂದು ಲೋಕ ಅದಾಲತ್ ನಡೆಸಲಾಗುತ್ತಿದ್ದು, ಕಕ್ಷಿದಾರರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಲಕಾರಿ ರಾಮಪ್ಪ ಒಡೆಯರ್‌ ತಿಳಿಸಿದರು.ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಇರುವ ಕಾನೂನು ಸೇವಾ ಪ್ರಾಧಿಕಾರದ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.

ಕಳದೆ ಬಾರಿ ನಡೆದ ಲೋಕ ಅದಾಲತ್ ನಲ್ಲಿ ಈಗಾಗಲೇ ನಿರೀಕ್ಷೆ ಮೀರಿ ಯಶಸ್ಸು ದೊರೆತಿದೆ. 4398 ಪ್ರಕರಣಗಳು ಇತ್ಯರ್ಥವಾಗಿದೆ. ಸುಮಾರು ₹687 ಕೋಟಿ ಪರಿಹಾರವನ್ನು ರಾಜಿ ಮೂಲಕ ಇತ್ಯರ್ಥಪಡಿಸಲಾಗಿದೆ.

ಇದರಿಂದ ವಿಶೇಷವಾಗಿ ಸಮಯ ಉಳಿತಾಯವಾಗುತ್ತದೆ ಮತ್ತು ವಕೀಲರಿಗೆ ಕೊಡಬಹುದಾದ ಶುಲ್ಕ ಉಳಿಯುತ್ತದೆ. ಲೋಕ ಅದಾಲತ್ ಮುಕ್ತವಾಗಿದ್ದು, ಯಾವುದೇ ಶುಲ್ಕ ಇಲ್ಲದೆ ನೋಂದಾಯಿಸಿಕೊಳ್ಳಬಹುದಾಗಿದೆ.

ಇದೆಲ್ಲಕ್ಕಿಂತ ಮಿಗಿಲಾಗಿ ಪರಸ್ಪರ ಅರಿವಿನಿಂದ ಪ್ರಕರಣ ಇತ್ಯರ್ಥವಾಗುತ್ತದೆ ಎನ್ನುವುದು ಗಮನಾರ್ಹ ಸಂಗತಿ. ಆದರೆ, ಲೋಕ ಅದಾಲತ್ ವ್ಯಾಪ್ತಿಗೆ ಬರುಬಹುದಾದ ಪ್ರಕರಣಗಳ ಕುರಿತು ಯಾರಾದರೂ ಒಬ್ಬ ಕಕ್ಷಿದಾರ ಅರ್ಜಿ ಸಲ್ಲಿಸಿದರು ಸಹ ಪ್ರತಿವಾದಿಯನ್ನು ಕರೆದು ಇತ್ಯರ್ಥ ಮಾಡಲು ಪ್ರಯತ್ನ ಮಾಡಲಾಗುವುದು.

ರಾಜಿ ಸಂಧಾನವೂ ಸಹ ನಿಯಮಾನುಸಾರವೇ ನಡೆಯುತ್ತದೆ ಮತ್ತು ನಿಯಮಾನುಸಾರ ದೊರೆಯಬಹುದಾದ ಪರಿಹಾರಕ್ಕೂ ಆದ್ಯತೆ ನೀಡಲಾಗುತ್ತದೆ. ಹೀಗಾಗಿ, ಇದರ ಸದುಪಯೋಗಪಡಿಸಿಕೊಳ್ಳುವ ಮೂಲಕ ವ್ಯಾಜ್ಯ ಇತ್ಯರ್ಥ ಮಾಡಿಕೊಳ್ಳಬಹುದಾಗಿದೆ. ಇದರ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

ಉಚಿತ ಕಾನೂನು ನೆರವು ಸಹ ದೊರೆಯುವುದರಿಂದ ಕಕ್ಷಿದಾರರು ಸದ್ಬಳಕೆ ಮಾಡಿಕೊಳ್ಳಬೇಕಾಗಿದೆ. ರಾಜಿ ಸಂಧಾನ ಎಂದಾಕ್ಷಣ ಕೇವಲ ಒಮ್ಮುಖವಾಗಿ ಮಾತ್ರ ಸಂಧಾನಕ್ಕೆ ಪ್ರಯತ್ನ ಮಾಡದೆ ಇಬ್ಬರ ಪರಸ್ಪರ ಅಭಿಪ್ರಾಯ ಪಡೆದು, ಕಾನೂನು ಅಡಿಯಲ್ಲಿ ಇತ್ಯರ್ಥ ಮಾಡಲಾಗುತ್ತದೆ ಎನ್ನುವುದು ಗಮನಾರ್ಹ ಸಂಗತಿ ಎಂದರು.