ಗ್ರಾಮೀಣ ಜನರು ಉದ್ಯೋಗ ಅರಸಿ ವಲಸೆ ಹೋಗುವ ಬದಲು ಸ್ವಗ್ರಾಮದಲ್ಲೇ ಕೆಲಸ ಮಾಡಿ ಆರ್ಥಿಕವಾಗಿ ಸಬಲರಾಗಬೇಕು. ನರೇಗಾ ಯೋಜನೆಯಡಿ ದೊರೆಯುವ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಾಲೂಕು ಸಂಪನ್ಮೂಲ ವ್ಯಕ್ತಿ ಸೂರ್ಯಕಾಂತ ಎಕಲಾರ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಕಮಲನಗರ

ಗ್ರಾಮೀಣ ಜನರು ಉದ್ಯೋಗ ಅರಸಿ ವಲಸೆ ಹೋಗುವ ಬದಲು ಸ್ವಗ್ರಾಮದಲ್ಲೇ ಕೆಲಸ ಮಾಡಿ ಆರ್ಥಿಕವಾಗಿ ಸಬಲರಾಗಬೇಕು. ನರೇಗಾ ಯೋಜನೆಯಡಿ ದೊರೆಯುವ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಾಲೂಕು ಸಂಪನ್ಮೂಲ ವ್ಯಕ್ತಿ ಸೂರ್ಯಕಾಂತ ಎಕಲಾರ ಕರೆ ನೀಡಿದರು.

ತಾಲೂಕಿನ ಮದನೂರ ಗ್ರಾಮ ಪಂಚಾಯಿತಿಯಲ್ಲಿ 2026-27ನೇ ಸಾಲಿನ ನರೇಗಾ ಯೋಜನೆ ಹಾಗೂ 15ನೇ ಹಣಕಾಸು ಆಯೋಗದ ಅನುದಾನದ ಸಾಮಾಜಿಕ ಲೆಕ್ಕ ಪರಿಶೋಧನೆ ಕುರಿತು ನಡೆದ ಗ್ರಾಮ ಸಭೆಯಲ್ಲಿ ಮಾತನಾಡಿ, ತೆರೆದ ಬಾವಿ, ಕುರಿ, ಕೋಳಿ ಮತ್ತು ಹಂದಿ ಸಾಕಾಣಿಕೆ ಶೆಡ್‌ಗಳು, ದನದ ಕೊಟ್ಟಿಗೆ ಸೇರಿದಂತೆ ವಿವಿಧ ವೈಯಕ್ತಿಕ ಕಾಮಗಾರಿಗಳ ಸೌಲಭ್ಯ ಪಡೆಯಲು ಅವಕಾಶವಿದೆ. ಗ್ರಾಮಸ್ಥರು ಅಗತ್ಯ ದಾಖಲೆಗಳನ್ನು ಗ್ರಾಮ ಪಂಚಾಯಿತಿಗೆ ಸಲ್ಲಿಸಿ ಉದ್ಯೋಗ ಚೀಟಿ ಪಡೆದುಕೊಳ್ಳಬೇಕು. ಸಮುದಾಯ ಕಾಮಗಾರಿಗಳಲ್ಲಿಯೂ ಭಾಗವಹಿಸಿ ಸ್ಥಳೀಯವಾಗಿ ಉದ್ಯೋಗ ಪಡೆಯಬೇಕು ಎಂದು ತಿಳಿಸಿದರು.

ವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಆಜೀವಿಕಾ ಮಿಷನ್-ಗ್ರಾಮೀಣ (ವಿಬಿ-ಜಿ ರಾಮ್ ಜಿ) ಯೋಜನೆಯಡಿ ಪ್ರತಿ ಕುಟುಂಬಕ್ಕೆ ವರ್ಷದಲ್ಲಿ 125 ದಿನಗಳ ಕೂಲಿ ಕೆಲಸ ಹಾಗೂ ಮಹಿಳೆಯರು ಮತ್ತು ಪುರುಷರಿಗೆ ದಿನಕ್ಕೆ 382 ರು. ಸಮಾನ ಕೂಲಿ ದೊರೆಯುವ ಕುರಿತು ಮಾಹಿತಿ ನೀಡಿದರು. ಗ್ರಾಮದಲ್ಲಿ ಕೈಗೊಂಡ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ವರದಿಯನ್ನು ಮಂಡಿಸಿದರು.

ಪಶುಸಂಗೋಪನಾ ಇಲಾಖೆಯ ಅಧಿಕಾರಿ ಡಾ. ಸುರೇಶ್ ದಿನಕರ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಗ್ರಾಮಸ್ಥರು ಸಾಮಾಜಿಕ ಲೆಕ್ಕ ಪರಿಶೋಧನೆಯ ವರದಿ ಕುರಿತು ಚರ್ಚಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನಿತಾ ರಾಠೋಡ್ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಮಾಜಿ ಸದಸ್ಯರು, ದತ್ತಾಂಶ ನಮೂದು ನಿರ್ವಾಹಕ ಮಹೇಶ, ಬಿಲ್ ಕಲೆಕ್ಟರ್ ರಾಹುಲ್, ಪಂಚಾಯಿತಿ ಸಿಬ್ಬಂದಿ, ಕೂಲಿಕಾರರು, ಗ್ರಾಮಸ್ಥರು ಹಾಗೂ ಸಾಮಾಜಿಕ ಪರಿಶೋಧನಾ ತಂಡದ ಸದಸ್ಯರು ಉಪಸ್ಥಿತರಿದ್ದರು.