ಕಲಿಕಾ ಸಾಮಗ್ರಿ ಸದ್ಬಳಕೆ ಮಾಡಿಕೊಳ್ಳಿ

| Published : Jul 17 2024, 12:50 AM IST

ಸಾರಾಂಶ

ಸರ್ಕಾರಿ ಸೌಲಭ್ಯಗಳ ಜೊತೆಗೆ ದಾನಿಗಳು ನೀಡುವ ಕಲಿಕಾ ಸಾಮಗ್ರಿಗಳನ್ನು ಸದ್ಭಳಕೆ ಮಾಡಿಕೊಂಡು ವಿದ್ಯಾರ್ಥಿ ಜೀವನ ರೂಪಿಸಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ತಿಳಿಸಿದರು.

ಹನೂರು: ಸರ್ಕಾರಿ ಸೌಲಭ್ಯಗಳ ಜೊತೆಗೆ ದಾನಿಗಳು ನೀಡುವ ಕಲಿಕಾ ಸಾಮಗ್ರಿಗಳನ್ನು ಸದ್ಭಳಕೆ ಮಾಡಿಕೊಂಡು ವಿದ್ಯಾರ್ಥಿ ಜೀವನ ರೂಪಿಸಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ತಿಳಿಸಿದರು.

ಪಟ್ಟಣದ ಶ್ರೀ ಜಿ.ವಿ ಗೌಡ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನಗರ ಪ್ರದೇಶಗಳಲ್ಲಿರುವ ವಿದ್ಯಾರ್ಥಿಗಳಂತೆ ಸರ್ಕಾರಿ ಶಾಲೆಯ ಮಕ್ಕಳು ಚೆನ್ನಾಗಿ ವಿದ್ಯಾಭ್ಯಾಸ ಮಾಡಬೇಕು ಎಂದರು.

ಸರ್ಕಾರ ವಿದ್ಯಾರ್ಥಿಗಳಿಗೆ ಎರಡು ಜೊತೆ ಸಮವಸ್ತ್ರ, ಶೂ, ಮಧ್ಯಾಹ್ನದ ಬಿಸಿಯೂಟ, ರಾಗಿ ಗಂಜಿ, ಮೊಟ್ಟೆ, ಬಾಳೆಹಣ್ಣು ನೀಡುತ್ತಿದೆ. ದಾನಿಗಳು ಕಾಡಂಚಿನ ಶಾಲೆಯ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸುತ್ತಿದ್ದಾರೆ. ನಿವೃತ್ತ ಪೊಲೀಸ್ ಅಧಿಕಾರಿ ಪ್ರಕಾಶ್, ಅಭಿಯಂತರ ವಿನೋದ್ 14 ಶಾಲೆಯ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆ ಮಾಡಿರುವುದು ಶ್ಲಾಘನೀಯ ಎಂದರು.

ಶಿಕ್ಷಕ ಶಾಂತರಾಜು ಮಾತನಾಡಿ, ಪ್ರಕಾಶ್‌ ಅವರು ಮುಂದಿನ ದಿನಗಳಲ್ಲಿ ಮತ್ತಷ್ಟು ಶಾಲೆಯ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವಂತಾಗಲಿ ಎಂದರು. ಇಸಿಓಗಳಾದ ಕಿರಣ್, ಕಂದವೇಲು, ಮಹೇಶ್, ಚಿನ್ನಪಯ್ಯ ,ರಮೇಶ್ ಜಿ.ವಿ ಗೌಡ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಹಾದೇವ್, ಶಿವ ಸ್ವಾಮಿ ಶಾಂತರಾಜು ಹಾಗೂ ಶ್ರೀನಿವಾಸ್ ನಾಯ್ಡು ಹಾಜರಿದ್ದರು.