ಗ್ರಾಮೀಣ ಪ್ರದೇಶದ ಆಸ್ತಿ ಮಾಲೀಕರಿಗೆ ಆಸ್ತಿಗಳ ನಿಖರ ಹಾಗೂ ಕ್ರಮಬದ್ಧ ದಾಖಲೆಗಳನ್ನು ಒದಗಿಸುವ ಉದ್ದೇಶದಿಂದ ಸರ್ಕಾರದ ಭೂ- ಗ್ಯಾರಂಟಿ ಯೋಜನೆಯಡಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ನರಗುಂದ: ಸರ್ಕಾರ ಇ- ಸ್ವತ್ತು ಅಭಿಯಾನ ಮೂಲಕ ಗ್ರಾಮೀಣ ಪ್ರದೇಶ ಜನರಿಗೆ ಆಸ್ತಿ ದಾಖಲೆಗಳ ಕ್ರಮಬದ್ಧತೆಗೆ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಾಪಂ ಅಧಿಕಾರಿ ಶ್ರೀಧರ್ ಚಿನಗುಂಡಿ ಹೇಳಿದರು.
ಶುಕ್ರವಾರ ತಾಲೂಕಿನ ಭೈರನಹಟ್ಟಿ ಗ್ರಾಮದಲ್ಲಿ ಗ್ರಾಪಂ ವ್ಯಾಪ್ತಿಯ ಆಸ್ತಿ ಮಾಲೀಕರಿಗೆ ಇ-ಸ್ವತ್ತು ನಮೂನೆ 11ಎ ಮತ್ತು 11ಬಿ ದಾಖಲೆಗಳನ್ನು ವಿತರಿಸುವ ಹಾಗೂ ಅರ್ಹ 11ಬಿ ಆಸ್ತಿಗಳನ್ನು 11ಎಗೆ ಪರಿವರ್ತಿಸುವ ವಿಶೇಷ ಅಭಿಯಾನದಡಿ ಮನೆಮನೆಗೆ ಭೇಟಿ ನೀಡಿ ಸಾರ್ವಜನಿಕರಿಗೆ ಅರ್ಜಿ ವಿತರಿಸಿ ಮಾತನಾಡಿ, ಗ್ರಾಮದ ನವಗ್ರಾಮ ಪ್ಲಾಟ್, ಹಳೆ ಜನತಾ ಪ್ಲಾಟ್ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಗ್ರಾಪಂ ಸಿಬ್ಬಂದಿಯೊಂದಿಗೆ ಮನೆಗಳಿಗೆ ಭೇಟಿ ನೀಡಿ, ಇ-ಸ್ವತ್ತು ಅಭಿಯಾನದ ಸದುಪಯೋಗ ಪಡೆದುಕೊಂಡು ತಮ್ಮ ಆಸ್ತಿಗಳ ದಾಖಲೆಗಳನ್ನು ಕ್ರಮಬದ್ಧಗೊಳಿಸಿಕೊಳ್ಳುವಂತೆ ಗ್ರಾಮಸ್ಥರಿಗೆ ಮನವಿ ಮಾಡಿದರು.ಗ್ರಾಮೀಣ ಪ್ರದೇಶದ ಆಸ್ತಿ ಮಾಲೀಕರಿಗೆ ಆಸ್ತಿಗಳ ನಿಖರ ಹಾಗೂ ಕ್ರಮಬದ್ಧ ದಾಖಲೆಗಳನ್ನು ಒದಗಿಸುವ ಉದ್ದೇಶದಿಂದ ಸರ್ಕಾರದ ಭೂ-ಗ್ಯಾರಂಟಿ ಯೋಜನೆಯಡಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿ ತೆರಿಗೆ ವ್ಯಾಪ್ತಿಗೆ ಒಳಪಡುವ ಅರ್ಹ ಆಸ್ತಿಗಳಿಗೆ ನಿಯಮಾನುಸಾರ 11ಎ ಅಥವಾ 11ಬಿ ನಮೂನೆಗಳನ್ನು ವಿತರಿಸಲಾಗುವುದು ಎಂದು ಹೇಳಿದರು.
ಸಾರ್ವಜನಿಕರು ಇ-ಸ್ವತ್ತು ದಾಖಲೆಗಳಿಗಾಗಿ ಮಧ್ಯವರ್ತಿಗಳ ಮೊರೆ ಹೋಗದೆ ನೇರವಾಗಿ ಗ್ರಾಪಂ ಕಚೇರಿಯನ್ನು ಸಂಪರ್ಕಿಸಬೇಕು. ಅಭಿಯಾನದ ಕುರಿತು ಮಾಹಿತಿ ಅಥವಾ ದಾಖಲೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಪಂಚಾಯಿತಿ ಕಚೇರಿಗೆ ಭೇಟಿ ನೀಡಬೇಕು. ಅಲ್ಲಿನ ಸಿಬ್ಬಂದಿ ಸಮಸ್ಯೆಗಳಿಗೆ ಉತ್ತರಿಸಿ ಪರಿಹಾರ ಒದಗಿಸಲಿದ್ದಾರೆ. ಸಿಬ್ಬಂದಿ ಸರಿಯಾಗಿ ಸ್ಪಂದಿಸದಿದ್ದಲ್ಲಿ ತಾಪಂ ಕಚೇರಿಗೆ ದೂರು ಸಲ್ಲಿಸಬೇಕೆಂದು ಹೇಳಿದರು.ಇದೇ ಸಂದರ್ಭದಲ್ಲಿ ಸಿಟಿಜನ್ ಲಾಗಿನ್ ನಲ್ಲಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮಾಹಿತಿ ಕೊರತೆಯಾಗದಂತೆ ನಿಗಾವಹಿಸಲು ಗ್ರಾಮ ಒನ್ ಸಿಬ್ಬಂದಿಗಳ ಜೊತೆ ಇಓ ಸಭೆ ನಡೆಸಿ ಅಗತ್ಯ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಪಿಡಿಒ ಸಾವಿತ್ರಿ ಗಾಯಕವಾಡ, ಕಾರ್ಯದರ್ಶಿ ಬಿ.ಎಸ್. ಮೆಣಸಗಿ, ಬಿಲ್ ಕಲೆಕ್ಟರ್ ರುದ್ರಪ್ಪ ಐನಾಪೂರ, ಗಣಕಯಂತ್ರ ನಿರ್ವಾಹಕ ಸುಭಾಷ್ ಕಾಳೆ ಸೇರಿದಂತೆ ಗ್ರಾಪಂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.