ವಸತಿ ಯೋಜನೆಯನ್ನು ಸದುಪಯೋಗ ಮಾಡಿಕೊಳ್ಳಿ: ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

| Published : May 19 2025, 02:01 AM IST

ವಸತಿ ಯೋಜನೆಯನ್ನು ಸದುಪಯೋಗ ಮಾಡಿಕೊಳ್ಳಿ: ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್
Share this Article
  • FB
  • TW
  • Linkdin
  • Email

ಸಾರಾಂಶ

ಇದು ಸಹಜವಾಗಿಯೇ ವಸತಿ ಯೋಜನೆಯ ಅನುಷ್ಠಾನಕ್ಕೆ ಹಿನ್ನೆಡೆಯಾಗಿದೆ. ಈ ಹಿನ್ನೆಲೆಯಲ್ಲಿ ಪರ್ಯಾಯ ಮಾರ್ಗಗಳ ಬಗ್ಗೆ ಚಿಂತಿಸಿ ಯೋಜನೆಯ ಹಣ ಸರ್ಕಾರಕ್ಕೆ ವಾಪಾಸಾಗದಂತೆ ಮುನ್ನೆಚ್ಚರಿಕೆ ವಹಿಸಿ ಯೋಜನೆ ಸದುಪಯೋಗ ಮಾಡಿಕೊಳ್ಳಿ

ಜಿಲ್ಲಾ ಅಭಿವೃದ್ಧಿ ಸಮನ್ವಯ ಸಮಿತಿ ಸಭೆ । ವಿವಿಧ ಇಲಾಖೆಗಳ ಮಾಹಿತಿ

ಕನ್ನಡಪ್ರಭ ವಾರ್ತೆ ದಾವಣಗೆರೆ

ಸರ್ಕಾರಗಳ ವಿವಿಧ ವಸತಿ ಯೋಜನೆಯಡಿ ನೀಡುತ್ತಿರುವ ಅನುದಾನ ಸಾಕಾಗಾದ ಹಿನ್ನೆಲೆಯಲ್ಲಿ ಫಲಾನುಭವಿಗಳು ಮನೆ ಕಟ್ಟಿಸಿಕೊಳ್ಳಲು ಮುಂದೆ ಬರುತ್ತಿಲ್ಲ. ಇದು ಸಹಜವಾಗಿಯೇ ವಸತಿ ಯೋಜನೆಯ ಅನುಷ್ಠಾನಕ್ಕೆ ಹಿನ್ನೆಡೆಯಾಗಿದೆ. ಈ ಹಿನ್ನೆಲೆಯಲ್ಲಿ ಪರ್ಯಾಯ ಮಾರ್ಗಗಳ ಬಗ್ಗೆ ಚಿಂತಿಸಿ ಯೋಜನೆಯ ಹಣ ಸರ್ಕಾರಕ್ಕೆ ವಾಪಾಸಾಗದಂತೆ ಮುನ್ನೆಚ್ಚರಿಕೆ ವಹಿಸಿ ಯೋಜನೆ ಸದುಪಯೋಗ ಮಾಡಿಕೊಳ್ಳಿ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಸಲಹೆ ನೀಡಿದರು.

ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಫಲಾನುಭವಿಗಳ ಆಯ್ಕೆಯನ್ನು ಪಾರದರ್ಶಕವಾಗಿ ಮಾಡುವುದು, ಯಾವ ವ್ಯಕ್ತಿಯನ್ನು ಯಾವ ವಸತಿ ಯೋಜನೆಗೆ ಆಯ್ಕೆ ಮಾಡಿದರೆ ಆತ ತನ್ನ ಪಾಲಿನ ಬಂಡವಾಳ ಹಾಕಿ ಮನೆ ಕಟ್ಟಿಸಿಕೊಳ್ಳಬಹುದು ಎನ್ನುವ ದೂರದೃಷ್ಟಿಯೊಂದಿಗೆ ಮುಂದುವರಿದರೆ ಜಿಲ್ಲೆಯಲ್ಲಿ ಯೋಜನೆ ಯಶಸ್ವಿಯಾಗಬಹುದು. ಆದ್ದರಿಂದ ಆಶ್ರಯ ಸಮಿತಿ ಸಭೆಯಲ್ಲಿಯೇ ಈ ರೀತಿಯ ಆಯ್ಕೆ ನಡೆದರೆ ಸೂಕ್ತ. ಇದೀಗ ಇರುವ ಫಲಾನುಭವಿಗಳ ಪಟ್ಟಿಯಲ್ಲಿ ಮನೆ ಕಟ್ಟಲು ಆರಂಭಿಸಿರುವ ಅರ್ಹರನ್ನು ಹೊರತುಪಡಿಸಿ ಉಳಿದವರನ್ನು ಪಟ್ಟಿಯಿಂದ ಕೈಬಿಡುವಂತೆ ತಾಕೀತು ಮಾಡಿದರು.

ಜಿಪಂ ಸಿಇಒ ಸುರೇಶ್ ಬಿ.ಇಟ್ನಾಳ್ ಮಾತನಾಡಿ, ಅನುದಾನ ನೀಡಿ 2 ವರ್ಷವಾದರೂ ಮನೆ ಕಟ್ಟಿಕೊಂಡಿಲ್ಲ. ಈಗಾಗಲೇ ಇಂತಹ 17 ಸಾವಿರ ಜನರನ್ನು ಆಯ್ಕೆ ಪಟ್ಟಿಯಿಂದ ಕೈಬಿಡಲಾಗಿದೆ. ಫಲಾನುಭವಿಗಳಿಗೆ ಮೊದಲ ಕಂತಾಗಿ ನೀಡಿರುವ ಡಿಡಿಯನ್ನು ವಾಪಾಸು ಪಡೆಯಲಾಗುವುದು. 4-5 ಬಾರಿ ನೋಟಿಸ್ ನೀಡಿದರೂ ಫಲಾನುಭವಿಗಳು ಸ್ಪಂದಿಸಿದ ಹಿನ್ನೆಲೆಯಲ್ಲಿ ಅನುದಾನ ವಾಪಾಸು ಪಡೆದು ಆಯ್ಕೆ ಪಟ್ಟಿ ರದ್ದುಪಡಿಸಲಾಗುವುದು ಎಂದು ಸಭೆಯ ಗಮನಕ್ಕೆ ತಂದರು.

3 ತಿಂಗಳಿಂದ ತಾಯಿ ಮರಣ ಇಲ್ಲ:

ಕಳೆದ ವರ್ಷ ಹೆಚ್ಚಿದ್ದ ಹೆರಿಗೆ ಸಮಯದಲ್ಲಿ ತಾಯಂದಿರ ಮರಣ ಪ್ರಮಾಣದಲ್ಲಿ ಇದೀಗ ಸಾಕಷ್ಟು ಸುಧಾರಣೆಯಾಗಿದೆ. ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡ ಹಿನ್ನೆಲೆ ಕಳೆದ 3 ತಿಂಗಳಿಂದ ತಾಯಂದಿರ ಮರಣವಾಗಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಗಂಗಾಧರ ಸ್ವಾಮಿ ಸಂಸದರ ಗಮನಕ್ಕೆ ತಂದರು.

ಪ್ರಾಥಮಿಕ ಆರೋಗ್ಯ ಕೇಂದ್ರವಾರು ಹೈರಿಸ್ಕ್ ಗರ್ಭಿಣಿಯರ ಸರ್ವೆ ಮಾಡಿ ಹೆರಿಗೆ ಸಮಯದಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ತಾಯಂದಿರ ಮರಣ ಪ್ರಮಾಣವನ್ನು ಶೂನ್ಯಕ್ಕೆ ತರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಎಂಆರ್‌ಐ ಸ್ಕ್ಯಾನ್ ಅಳವಡಿಸುವ ಕುರಿತು ಪ್ರಸ್ತಾಪಿಸಿದ ಸಂಸದರು, ಅಲ್ಲಿಯವರೆಗೂ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ನಿರ್ದಿಷ್ಟ ದರ ನಿಗದಿಪಡಿಸಿ ರೋಗಿಗಳನ್ನು ಬಾಪೂಜಿ ಸೇರಿದಂತೆ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸುವ ವ್ಯವಸ್ಥೆ ಮಾಡುವುದು ಉತ್ತಮ ಎಂದರು.

ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ, ಶೀಘ್ರವೇ ಖಾಸಗಿ ಆಸ್ಪತ್ರೆಗಳ ಸಭೆ ಕರೆದು ಏಕರೂಪ ದರ ನಿಗದಿಪಡಿಸಲು ಸೂಚಿಸಲಾಗುವುದು. ಒಂದು ವೇಳೆ ಹೆಚ್ಚು ಶುಲ್ಕ ವಿಧಿಸಿದರೆ ಕೆಪಿಎಂ ಪರವಾನಿಗೆ ರದ್ದುಪಡಿಸಿ ಆಸ್ಪತ್ರೆ ಮುಚ್ಚಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೂನ್ಯ ಫಲಿತಾಂಶ ಪಡೆದಿರುವ ಮತ್ತು ಕಳಪೆ ಸಾಧನೆ ಮಾಡಿರುವ ಅನುದಾನಿತ ಶಾಲೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಡಿಡಿಪಿಐಗೆ ಸಂಸದರು ಸೂಚಿಸಿದರು. ಜಲ್‌ಜೀವನ್ ಮಿಷನ್, ಶಿಕ್ಷಣ ಇಲಾಖೆ, ಶೈಕ್ಷಣಿಕ ಸಾಲ ಯೋಜನೆ, ಸ್ವಚ್ಛ ಭಾರತ್ ಮಿಷನ್, ಅರಣ್ಯ ಇಲಾಖೆ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸೇರಿ ವಿವಿಧ ಇಲಾಖೆಗಳ ಕುರಿತು ಮಾಹಿತಿ ಪಡೆದುಕೊಂಡರು.

ಸಮಿತಿಯ ನಾಮನಿರ್ದೇಶನ ಸದಸ್ಯರಾದ ಡಿ.ಪಿ.ಪುಷ್ಪ, ಉಮೇಶ್, ಎಸ್.ಮೂರ್ತೆಪ್ಪ, ಜಬ್ಬಾರ್ ಅಲಿಖಾನ್, ಎಲ್.ಸುವರ್ಣ, ರೇವಣಸಿದ್ದಪ್ಪ, ಚಂದ್ರಶೇಖರ್ ಇತರರು ಇದ್ದರು.