ಸಾರಾಂಶ
ಕನ್ನಡಪ್ರಭ ವಾರ್ತೆ ರಾಮದುರ್ಗ
ಸ್ವಹಾಯ ಸಂಘಗಳು ಬ್ಯಾಂಕಿನಿಂದ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿ ವಿಶ್ವಾಸ ಗಳಿಸಿದರೆ ಇನ್ನೂ ಹೆಚ್ಚಿನ ಸಾಲ ಸೌಲಭ್ಯ ನೀಡಲು ಮುಂದೆ ಬರುತ್ತವೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣಕುಮಾರ ಸಾಲಿ ಹೇಳಿದರು.ಸ್ಥಳೀಯ ತಾಪಂ ಸಭಾಭವನದಲ್ಲಿ ಸ್ವಸಹಾಯ ಸಂಘಗಳಿಗೆ ಸಂಜೀವಿನಿ ಯೋಜನೆ ಅಡಿಯಲ್ಲಿ ಬ್ಯಾಂಕ್ ಸಾಲ ಸಂಪರ್ಕ ಮೇಳದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ವಸಹಾಯ ಸಂಘಗಳಿಗೆ ಸರ್ಕಾರ ಅನೇಕ ಅರ್ಥಿಕ ಸೌಲಭ್ಯ ಒದಗಿಸುತ್ತಿದ್ದು, ಸಂಜೀವಿನಿ ಯೋಜನೆಯಲ್ಲಿ ತರಬೇತಿ ಸೇರಿದಂತೆ ಹಲವು ಯೋಜನೆಗಳಿದ್ದು, ಅವುಗಳ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಬೇಕೆಂದು ತಿಳಿಸಿದರು.
ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯಿಂದ ಸ್ವ ಉದ್ಯೋಗ ಹಾಗೂ ಗುಂಪು ಉದ್ಯೋಗ ಮಾಡಲು ಬ್ಯಾಂಕ್‌ಗಳ ಮೂಲಕ ಆರ್ಥಿಕ ಸೌಲಭ್ಯಗಳಿವೆ. ತಾಲೂಕಿನಲ್ಲಿ 37 ಗ್ರಾಪಂ ಮಟ್ಟದಲ್ಲಿ ಸಂಜೀವಿನ ಮಹಿಳಾ ಒಕ್ಕೂಟ, 149 ವಾರ್ಡ್ ಒಕ್ಕೂಟಗಳಲ್ಲಿ 1728 ಸ್ವಸಹಾಯ ಸಂಘಗಳಿದ್ದು, 19864 ಸದಸ್ಯರಿದ್ದಾರೆ. ₹7.54 ಕೋಟಿ ಸಮುದಾಯ ಬಂಡವಾಳ ನಿಧಿಯಲ್ಲಿ ₹4 ಕೋಟಿ ಒಕ್ಕೂಟದಿಂದ 417 ಸ್ವ ಸಹಾಯ ಸಂಘಗಳಿಗೆ ಸಿ.ಐ.ಎಫ್ ಬಿಡುಗಡೆ ಮಾಡಲಾಗಿದೆ. ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳಿಂದ 351 ಸ್ವಸಹಾಯ ಸಂಘಗಳಿಗೆ ₹9.35 ಕೋಟಿ ಸಾಲ ನೀಡಲಾಗಿದೆ ಎಂದವರು ತಿಳಿಸಿದರು.ಬ್ಯಾಂಕಿನಿಂದ ಸಾಲ ಪಡೆದ ಅನೇಕ ಸ್ವಸಹಾಯ ಸಂಘಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿ ಮುಂಚೂಣಿಯಲ್ಲಿವೆ. ಪ್ರಸಕ್ತ ವರ್ಷದಲ್ಲಿ ಬ್ಯಾಂಕುಗಳು ಅಂತಹ ಸ್ವಸಹಾಯ ಸಂಘಗಳಿಗೆ ಅಗತ್ಯವಾಗಿ ಸಾಲ ಸೌಲಭ್ಯ ನೀಡಬೇಕು. ಸಾಲಕ್ಕಾಗಿ ಬರುವ ಸಂಘದ ಸದಸ್ಯರನ್ನು ವಿನಾಕಾರಣ ಅಲೆದಾಡಿಸಬಾರದು ಎಂದು ಸ್ಥಳದಲ್ಲಿದ್ದ ಬ್ಯಾಂಕುಗಳ ವ್ಯವಸ್ಥಾಪಕರಲ್ಲಿ ಇಒ ಮನವಿ ಮಾಡಿದರು.
ಕೇಂದ್ರ ಸರ್ಕಾರದ ಜನ ಸುರಕ್ಷಾ ವಿಮಾ ಯೋಜನೆಗಳ ಬಗ್ಗೆ ಅಮೂಲ್ಯ ಅರ್ಥಿಕ ಸಾಕ್ಷರತೆ ಕೇಂದ್ರ ಸಮಾಲೋಚಕ ಮಲ್ಲಿಕಾರ್ಜುನರಡ್ಡಿ ಗೊಂದಿ ಮಾಹಿತಿ ನೀಡಿದರು.ಬ್ಯಾಂಕ ವ್ಯವಸ್ಥಾಪಕ ಕಾಶೀನಾಥ ಭೂತಾಲಿ, ಕವಿತಾ ಭೋಯೆ, ವೀರೇಶ ಚುಳಕಿಮಠ, ಮಂಜುನಾಥ ವಾಟಕರ್. ಆರ್.ಎಸ್. ವಾಲಿ ಉಪಸ್ಥಿತರಿದ್ದರು. ರೂಪಾಶ್ರೀ ಪಾಟೀಲ ಸ್ವಾಗತಿಸಿದರು. ಪೂರ್ಣಿಮಾ ಭಾವಿಕಟ್ಟಿ ನಿರೂಪಿಸಿದರು. ಪವನ ಪೋಳ ವಂದಿಸಿದರು.