ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಹೆಚ್ಚಿನ ಉದ್ಯೋಗಾವಕಾಶ ಮತ್ತು ಆರ್ಥಿಕತೆಗೆ ಉತ್ತಮ ಕೊಡುಗೆ ನೀಡುತ್ತಿರುವ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್‌ಎಂಇ) ಕಾರ್ಯಕ್ಷಮತೆ ಮತ್ತು ವೇಗ ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಆರ್.ಗಣೇಶ್ ಹೇಳಿದರು.ನಗರದ ಗೋಪಾಲ ಗೌಡ ಬಡಾವಣೆಯ ಜಿಲ್ಲಾ ಔಷಧ ಭವನದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ (ವಿಟಿಪಿಸಿ) ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಇವರ ಸಹಯೋಗದಲ್ಲಿ ‘ಎಂಎಸ್‌ಎಂಇಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವುದು’ (ಆರ್‌ಎಎಂಪಿ) ಯೋಜನೆಯಡಿಯಲ್ಲಿ ಲೀನ್ ಯೋಜನೆ ಮತ್ತು ಝಡ್.ಇ.ಡಿ. ಹಾಗೂ ರಫ್ತು ಕುರಿತು ಶನಿವಾರ ಏರ್ಪಡಿಸಿದ್ದ ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೃಷಿ ನಂತರ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸುತ್ತಿರುವುದು ಎಂಎಸ್‌ಎಂಇಗಳು. ಈ ಉದ್ಯಮಗಳ ಕಾರ್ಯಕ್ಷಮತೆ ಹೆಚ್ಚಿಸಲು ಮತ್ತು ವೇಗಗೊಳಿಸುವ ಉದ್ದೇಶದಿಂದ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿದ್ದು, ಕಾಸಿಯಾ ಎಂಎಸ್‌ಎಂಸಿ ಗಳಿಗೆ ಪೂರಕವಾಗಿ ಕೆಲಸ ಮಾಡುತ್ತಾ ಸಹಕರಿಸುತ್ತಿರುವುದು ಶ್ಲಾಘನೀಯ ಎಂದರು.ಸರ್ಕಾರ ಪ್ರತಿ 5 ವರ್ಷಕ್ಕೊಮ್ಮೆ ಕೈಗಾರಿಕಾ ನೀತಿ ತಂದು ಕೈಗಾರಿಕೆಗಳಿಗೆ ಹಲವಾರು ಉತ್ತೇಜನ, ಸೌಲಭ್ಯಗಳನ್ನು ನೀಡುತ್ತಿದ್ದು ಇದರ ಸದುಪಯೋಗವನ್ನು ಉದ್ಯಮಿಗಳು ಮಾಡಿಕೊಳ್ಳಬೇಕು. ಉದ್ಯಮಿಗಳು ಸರ್ಕಾರದ ವಿವಿಧ ಯೋಜನೆಗಳ ಉಪಯೋಗ ಪಡೆದು ಹೆಚ್ಚಿನ ಸಂಖ್ಯೆಯ ಕೈಗಾರಿಕೆಗಳ ಸ್ಥಾಪನೆ, ವಿಸ್ತರಣೆ, ಮಾರ್ಪಾಡು ಮಾಡಬಹುದು ಎಂದರು.
ಕೇಂದ್ರ ಸರ್ಕಾರ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಎಂಪ್ಲಾಯ್‌ಮೆಂಟ್ ಲಿಂಕ್ಡ್ ಇನ್ಸೆಂಟಿಸ್ ಸ್ಕೀಂ ಎಂಬ ಮಹಾತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯಡಿ ಎರಡು ವರ್ಷಗಳ ಕಾಲ ಉದ್ಯೋಗ ನೀಡಿದವರಿಗೆ ಮತ್ತು ಉದ್ಯೋಗ ಪಡೆದವರಿಬ್ಬರಿಗೂ ಪ್ರೋತ್ಸಾಹಧನ ನೀಡುತ್ತದೆ ಎಂದು ತಿಳಿಸಿದರು.ಸಿಡಿಬಿ ಡಿಜಿಎಂ ಗುಣಶೇಖರನ್ ಮಾತನಾಡಿ, ಇಂತಹ ಕಾರ್ಯಕ್ರಮಗಳು ಯುವ ಮತ್ತು ನವೋದ್ಯಮಿಗಳಿಗೆ ಕೈಗಾರಿಕೆಯಲ್ಲಿನ ವಿವಿಧ, ಹೊಸ ಹೊಸ ಅವಕಾಶಗಳ ಕುರಿತು ಮಾಹಿತಿ ಮತ್ತು ಅರಿವು ಮೂಡಿಸಲು ಸಹಕಾರಿಯಾಗಿದೆ ಎಂದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ಎಂಎಸ್‌ಎಂಇಗಳು ಸಾಕಷ್ಟು ಉದ್ಯೋಗ ಸೃಷ್ಟಿಸಿದ್ದು ದೇಶದ ಜಿಡಿಪಿಗೆ ಶೇ.29ರಷ್ಟು ಕೊಡುಗೆ ನಿಡಿದ್ದು, ಸರ್ಕಾರ ತನ್ನ ಬಜೆಟ್‌ನಲ್ಲಿ ಎಂಎಸ್‌ಎಂಇಗಳಿಗೆ ಪೂರಕವಾದ ಯೋಜನೆಗಳನ್ನು ನೀಡಿದೆ. ಕಳೆದ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಶೇ.7.8 ಗೆ ತಲುಪಿರುವುದು ಹೆಮ್ಮೆಯ ವಿಷಯವಾಗಿದ್ದು ಎಂಎಸ್‌ಎಂಇಗಳ ಕೊಡುಗೆಯೂ ಇದೆ. ಭಾರತಕ್ಕೆ ಉತ್ತಮ ಭವಿಷ್ಯವಿದೆ ಎಂದರು.ಮಾಚೇನಹಳ್ಳಿ ಕೈಗಾರಿಕಾ ಸಂಘದ ಅಧ್ಯಕ್ಷ ಬೆನಕಪ್ಪ, ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷ ಜೋಯಿಸ್ ರಾಮಾಚಾರ್, ವಿಟಿಪಿಸಿ ಧಾರವಾಡ ಶಾಖಾ ಕಛೇರಿಯ ಸಹಾಯಕ ನಿರ್ದೇಶಕ ಟಿ. ಎಸ್. ಮಲ್ಲಿಕಾರ್ಜುನ, ಸಿಡಿಬಿ ಪ್ರಾದೇಶಿಕ ಕಚೇರಿಯ ಪ್ರಧಾನ ವ್ಯವಸ್ಥಾಪಕ ಎಸ್.ಶ್ರೀಪತಿ, ಕಾಸಿಯಾ ಗೌರವ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಹುಸೇನ್, ಗ್ರಾಮೀಣ ಜಂಟಿ ಕಾರ್ಯದರ್ಶಿ ಕೇಶವ ಮೂರ್ತಿ ಆರ್. (ಕಿರಣ್), ನಗರ ಜಂಟಿ ಕಾರ್ಯದರ್ಶಿ ಎಸ್.ವಿಶ್ವೇಶ್ವರಯ್ಯ ಇತರೆ ಉದ್ಯಮಿಗಳು ಹಾಜರಿದ್ದರು. ಕಾಸಿಯಾ ಉಪಾಧ್ಯಕ್ಷರು ನಿಂಗಣ್ಣ ಎಸ್.ಬಿರಾದರ ಸ್ವಾಗತಿಸಿದರು.