20 ನಿಮಿಷಕ್ಕೊಮ್ಮೆ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ: ಡಿಎಚ್‌ಒ ಡಾ. ಶಂಕರ್‌ ನಾಯ್ಕ

| Published : Mar 19 2025, 12:34 AM IST

20 ನಿಮಿಷಕ್ಕೊಮ್ಮೆ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ: ಡಿಎಚ್‌ಒ ಡಾ. ಶಂಕರ್‌ ನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ಮಾರ್ಚ್, ಏಪ್ರಿಲ್, ಮೇ ತಿಂಗಳ ಅಂತ್ಯದವರೆಗೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿರುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ 20 ನಿಮಿಷಕ್ಕೊಮ್ಮೆ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಮಾರ್ಚ್, ಏಪ್ರಿಲ್, ಮೇ ತಿಂಗಳ ಅಂತ್ಯದವರೆಗೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿರುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ 20 ನಿಮಿಷಕ್ಕೊಮ್ಮೆ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಲ್.ಆರ್. ಶಂಕರ ನಾಯ್ಕ ಸಲಹೆ ನೀಡಿದರು.

ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆವರಣದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಸ್ನೇಹ ಬಳಗದಿಂದ ನೂತನವಾಗಿ ಆರಂಭಿಸಿರುವ ಶುದ್ಧ ಕುಡಿಯುವ ನೀರಿನ ಅರವಟಿಗೆಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ಅಧಿಕ ಬಿಸಿಲಿನ ತಾಪಮಾನಕ್ಕೆ ಪ್ರತಿಯೊಬ್ಬರೂ ನಿರ್ಜಲೀಕರಣ ಸಮಸ್ಯೆ ಎದುರಿಸಲಿದ್ದಾರೆ. ಸಾರ್ವಜನಿಕರು ಬೇಸಿಗೆಯಲ್ಲಿ ಬಾಯಾರಿಕೆ ಆಗದಿದ್ದರೂ ಪದೇ ಪದೇ ನೀರು ಅಥವಾ ಹಣ್ಣಿನ ರಸಗಳನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕಿದೆ. ಬೇಸಿಗೆಯಲ್ಲಿ ಮೈ ಬೆವರಿದಷ್ಟು ಒಳ್ಳೆಯದು. ಆದಷ್ಟು ನೈಸರ್ಗಿಕ ಜ್ಯೂಸ್‌ಗಳನ್ನು ಹೆಚ್ಚಾಗಿ ಸೇವಿಸಿ. ಕಲ್ಲಂಗಡಿ, ಕರಬೂಜ, ಕಿತ್ತಳೆ, ದ್ರಾಕ್ಷಿ, ಅನಾನಾಸ್, ಸೌತೆಕಾಯಿ, ಎಳನೀರು ಸವಿಯುವುದು, ಮನೆಯಲ್ಲಿಯೇ ಸಿದ್ದಪಡಿಸಿದ ನಿಂಬೆಹಣ್ಣಿನ ಶರಬತ್ತು, ಮಜ್ಜಿಗೆ ಸೇರಿದಂತೆ ಹಣ್ಣಿನ ಪಾನೀಯಗಳಿಗೆ ಚಿಟಿಕೆ ಉಪ್ಪಿನೊಂದಿಗೆ ಸೇವಿಸುವುದು ಉತ್ತಮ ಎಂದರು.

ಬಿಸಿಲಿನಿಂದ ನಿರ್ಜಲೀಕರಣವಾದ ರೋಗಿಗಳಿಗೆ ಸಾರ್ವಜನಿಕ ಉಪ ವಿಭಾಗದ ಆಸ್ಪತ್ರೆಯಲ್ಲಿ ಹವಾ ನಿಯಂತ್ರಿತ ಐದು ವಿಶೇಷ ಹಾಸಿಗೆಗಳನ್ನು ಮೀಸಲಿರಿಸಲಾಗಿದೆ. ಸಮುದಾಯ ಆರೋಗ್ಯ ಕೇಂದ್ರದಲ್ಲೂ ಈ ವ್ಯವಸ್ಥೆ ಇರಲಿದೆ. ಹೀಟ್‌ ಸ್ಟ್ರೋಕ್‌ಗೆ ಒಳಗಾದವರೆ 108ಕ್ಕೆ ಕರೆ ಮಾಡಬೇಕು ಎಂದರು.

ಈ ವೇಳೆ ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಜಂಬಯ್ಯ ನಾಯಕ, ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಸತೀಶ ಚಂದ್ರ, ಜಿಲ್ಲಾ ಕುಷ್ಠ ರೋಗ ನಿಯಂತ್ರಣಾಧಿಕಾರಿ ಡಾ. ರಾಧಿಕಾ, ಹೊಸಪೇಟೆ ತಾಲೂಕು ಆರೋಗ್ಯಾಧಿಕಾರಿ ಡಾ. ಬಸವರಾಜ, ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಯೋಗಲಕ್ಷ್ಮೀ, ವೆಂಕಟೇಶ್, ಗುಂಡಿ ರಾಘವೇಂದ್ರ, ಹನುಮಂತರೆಡ್ಡಿ, ಫಾತೀಮಾಬೀ, ಜಿಲ್ಲಾ ಆರೋಗ್ಯ ಶಿಕ್ಷಾಣಧಿಕಾರಿ ಎಂ.ಪಿ. ದೊಡ್ಡಮನಿ ಮತ್ತಿತರರಿದ್ದರು.