ವಚನ ಸಾಹಿತ್ಯವನ್ನು ನಿತ್ಯ ಓದಿ ಜೀವನದಲ್ಲಿ ಅಳವಡಿಸಿಕೊಳ್ಳಿ. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ವೈಯಕ್ತಿಕ ಜೀವನದಲ್ಲಿ ಉತ್ತಮ ನಡೆ-ನುಡಿ ಮತ್ತು ಆಚಾರ-ವಿಚಾರಗಳನ್ನು ಅಳವಡಿಸಿಕೊಳ್ಳಲು ವಚನ ಸಾಹಿತ್ಯದ ಅಧ್ಯಯನ ಅತ್ಯಂತ ಅವಶ್ಯಕವಾಗಿದೆ ಎಂದು ಪ್ರೊ.ರಾಜೇಶ್ವರಿ ಲೋಕಾಪುರೆ ಹೇಳಿದರು.

ಕನ್ನಡಪ್ರಭ ವಾರ್ತೆ ಕಮಲಾಪುರ

ವಚನ ಸಾಹಿತ್ಯವನ್ನು ನಿತ್ಯ ಓದಿ ಜೀವನದಲ್ಲಿ ಅಳವಡಿಸಿಕೊಳ್ಳಿ. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ವೈಯಕ್ತಿಕ ಜೀವನದಲ್ಲಿ ಉತ್ತಮ ನಡೆ-ನುಡಿ ಮತ್ತು ಆಚಾರ-ವಿಚಾರಗಳನ್ನು ಅಳವಡಿಸಿಕೊಳ್ಳಲು ವಚನ ಸಾಹಿತ್ಯದ ಅಧ್ಯಯನ ಅತ್ಯಂತ ಅವಶ್ಯಕವಾಗಿದೆ ಎಂದು ಪ್ರೊ.ರಾಜೇಶ್ವರಿ ಲೋಕಾಪುರೆ ಹೇಳಿದರು.ಮಹಾಗಾಂವ ಕ್ರಾಸ್‌ನ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಕಲಬುರಗಿ ಜಿಲ್ಲಾ ಘಟಕದ ಸಹಯೋಗದಲ್ಲಿ ಬುದುವಾರ ಆಯೋಜಿಸಿದ್ದ ಒಂದು ದಿನದ ವಿಚಾರ ಸಂಕಿರಣದ ಕಾರ್ಯಕ್ರಮದಲ್ಲಿ ವಚನ ಸಾಹಿತ್ಯ ತತ್ವ ರಾಚನಿಕತೆ ಕುರಿತು ಸಾಹಿತಿ ಶರಣಬಸಪ್ಪ ವಡ್ಡಕ್ಕೆರಿ ಅವರು ರಚಿಸಿದ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

ವಿದ್ಯಾರ್ಥಿಗಳು ಪ್ರತಿನಿತ್ಯ ವಚನ ಸಾಹಿತ್ಯ ಓದುವ ಹವ್ಯಾಸ ಬೆಳೆಸಿಕೊಂಡು, ಅದರಲ್ಲಿರುವ ಮೌಲ್ಯಯುತ ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಚನ ಸಾಹಿತ್ಯವು ಕೇವಲ ಓದುವುದಕ್ಕೆ ಸೀಮಿತವಾಗದೆ ಮನುಷ್ಯನ ಜೀವನಕ್ಕೆ ಮಾರ್ಗದರ್ಶನ ನೀಡುವ ಅಮೂಲ್ಯ ಜ್ಞಾನ ಭಂಡಾರವಾಗಿದೆ. ಬಸವಾದಿ ಶರಣರು ತಮ್ಮ ವಚನಗಳ ಮೂಲಕ ಸಮಾಜದಲ್ಲಿನ ಅಸಮಾನತೆ, ಮೂಢನಂಬಿಕೆ, ಜಾತಿಭೇದ ಹಾಗೂ ಕಂದಾಚಾರಗಳ ವಿರುದ್ಧ ಧ್ವನಿ ಎತ್ತಿ ಸಮಾನತೆ, ಕಾಯಕ, ದಾಸೋಹ ಮತ್ತು ಮಾನವೀಯ ಮೌಲ್ಯಗಳನ್ನು ಸಾರಿದ್ದಾರೆ. ಇಂದಿನ ವಿದ್ಯಾರ್ಥಿಗಳು ಶರಣರ ವಿಚಾರಧಾರೆಗಳನ್ನು ಅರಿತುಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣದ ಜತೆಗೆ ಸಂಸ್ಕಾರ, ಶಿಸ್ತು, ಸಾಮಾಜಿಕ ಜವಾಬ್ದಾರಿ ಹಾಗೂ ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳುವುದು ಮುಖ್ಯ. ವಚನಕಾರರ ಆದರ್ಶಗಳನ್ನು ಜೀವನದಲ್ಲಿ ಪಾಲಿಸಿದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಪ್ರೊ.ರಾಜೇಶ್ವರಿ ಲೋಕಾಪುರೆ ಅಭಿಪ್ರಾಯಪಟ್ಟರು.ಶಾಸಕ ಬಸವರಾಜ ಮತ್ತಿಮಡು ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ಮಾಡಿದ ಸಾಮಾಜಿಕ ಕ್ರಾಂತಿಯ ಸಾಮಾಜಿಕ ಸಂದೇಶ ಮಾನವೀಯ ಮೌಲ್ಯ ಪ್ರತಿಪಾದನೆ ಹಾಗೂ ಶೋಷಣೆ ಮುಕ್ತ ಸಮಾಜದ ಶರಣರು ನೀಡಿರುವ ಕೊಡುಗೆ ನಾವೆಲ್ಲರೂ ಅನುಸರಿಸಬೇಕು. ಗ್ರಾಮೀಣ ಭಾರತದ ಬಹಳಷ್ಟು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಸತಿನಿಲಯ ನಿರ್ಮಾಣಕ್ಕಾಗಿ 14 ಕೋಟಿ ರು. ವೆಚ್ಚದ ವಸತಿ ನಿಲಯ ಕಟ್ಟಡಕ್ಕೆ ಅನುದಾನ ಒದಗಿಸಲಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದರು.ಪ್ರೊ.ಲಿಂಗಪ್ಪ ಗೋನಾಲ್, ಪ್ರೊ.ಶರಣಪ್ಪ ಮಾಳಗೆ, ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ವಡನಕೆರಿ, ಪ್ರೊ.ಚಿದಾನಂದ ಚಿಕ್ಕಮಠ, ಶಿವಕುಮಾರ ಪ್ರಸಾರ, ಮಲ್ಲಿಕಾರ್ಜುನ ಮರತುರ, ಶ್ರೀಕಾಂತ ಪಾಟೀಲ, ಅಂಬರಾಯ ಮಡ್ಡೆ, ತೀರ್ಥಕುಮಾರ ಬೆಳಕೋಟಾ, ಉಮೇಶ್ ಸಾಗರ, ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.