ಸಾರಾಂಶ
ಮನುಷ್ಯನ ಜೀವಕ್ಕೆ ಮತ್ತು ಮನುಷ್ಯತ್ವಕ್ಕೆ ಬೆಲೆಯೇ ಹೊರತು ಅವರಲ್ಲಿನ ಅಂಗವೈಕಲ್ಯಕ್ಕಲ್ಲ. ವಿಕಲಚೇತನರಿಗೆ ರಾಜಕೀಯ ಮೀಸಲಾತಿ ನೀಡಬೇಕೆಂದು ಹಲವು ದಿನಗಳಿಂದ ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಆ ಮಹತ್ವದ ಅವಕಾಶಗಳು ಲಭಿಸಲಿ.
ಕನ್ನಡಪ್ರಭ ವಾರ್ತೆ ಹಲಗೂರು
ವಿಕಲಚೇತನರ ಬಗ್ಗೆ ಸಹಾನುಭೂತಿ ಬೇಡ. ಸಹಕಾರ ನೀಡಿ ಅವರನ್ನು ನಮ್ಮೊಂದಿಗೆ ಬೆರೆಯಲು ಅವಕಾಶ ಕಲ್ಪಿಸಬೇಕು ಎಂದು ಗ್ರಾಪಂ ಅಧ್ಯಕ್ಷೆ ಆರ್. ಶಶಿಕಲಾ ತಿಳಿಸಿದರು.ಹಲಗೂರಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಳವಳ್ಳಿ ಆಶ್ರಯದಲ್ಲಿ ಆಯೋಜಿಸಿದ್ದ ವಿಕಲಚೇತನರ ಸಪ್ತಾಹದಲ್ಲಿ ಅವರು ಮಾತನಾಡಿದರು.
ಗ್ರಾಪಂನಲ್ಲಿ ವಿಕಲಚೇತನರಿಗೆ ಶೇ.5ರಷ್ಟು ಅನುದಾನ ಮೀಸಲಿರಿಸಲಾಗಿದೆ. ಸಾಧನ ಸಲಕರಣೆ ಮತ್ತು ಔಷಧೋಪಚಾರ ಪಡೆಯಬಹುದು. ಯುಡಿಐಡಿ ಕಾರ್ಡ್ ಉಳ್ಳವರು ಸದ್ಬಳಕೆ ಮಾಡಿಕೊಳ್ಳಿ ಎಂದರು.ಮನುಷ್ಯನ ಜೀವಕ್ಕೆ ಮತ್ತು ಮನುಷ್ಯತ್ವಕ್ಕೆ ಬೆಲೆಯೇ ಹೊರತು ಅವರಲ್ಲಿನ ಅಂಗವೈಕಲ್ಯಕ್ಕಲ್ಲ. ವಿಕಲಚೇತನರಿಗೆ ರಾಜಕೀಯ ಮೀಸಲಾತಿ ನೀಡಬೇಕೆಂದು ಹಲವು ದಿನಗಳಿಂದ ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಆ ಮಹತ್ವದ ಅವಕಾಶಗಳು ಲಭಿಸಲಿ ಎಂದು ಅಶಯ ವ್ಯಕ್ತಪಡಿಸಿದರು.
ಎಂ.ಆರ್.ಡಬ್ಲೂ ಸಂಯೋಜಕ ಆರ್.ಎಸ್. ಮಹದೇವಪ್ಪ ಮಾತನಾಡಿ, ವಿಕಲಚೇತನರಿಗೆ ವಿವಾಹ ಪ್ರೋತ್ಸಾಹ ಧನ, ಆಧಾರ್ ಸಾಲ, ತ್ರಿಚಕ್ರ ವಾಹನ, ಪ್ರತಿಭಾ ಪುರಸ್ಕಾರ, ಶುಲ್ಕ ಮರುಪಾವತಿ, ಔಷಧಿ ಕೊಳ್ಳಲು ನಿರಮಯ ಯೋಜನೆ, ಆರೈಕೆದಾರರಿಗೆ ಪ್ರೊತ್ಸಾಹ ಧನ ಪಡೆಯಲು ಅವಕಾಶಗಳಿವೆ ಎಂದು ಹೇಳಿದರು.2016 ರ ನಂತರ 21 ರೀತಿಯ ವಿಕಲತೆಯನ್ನು ಗುರುತಿಸಲಾಗಿದೆ. ಸರ್ಕಾರದ ಯೋಜನೆಗಳನ್ನು ನೀವು ತಿಳಿಯುವ ಜೊತೆಗೆ ನೆರೆಹೊರೆಯವರಿಗೂ ತಿಳಿಸಿ ವಿಕಲಚೇತನರ ಶ್ರೆಯೋಭಿವೃದ್ಧಿಗೆ ಸಹಕರಿಸಿ ಎಂದು ಕೋರಿದರು.
ಪ್ರಾಂಶುಪಾಲರಾದ ಆಲಂಗೂರು ಮಂಜುನಾಥ್ ಮಾತನಾಡಿ, ವಿವಿಧ ಇಲಾಖೆಗಳಲ್ಲಿ ವಿಕಲಚೇತನರಿಗೆ ಇರುವ ಸರ್ಕಾರಿ ಯೋಜನೆಗಳ ಬಗ್ಗೆ ಸಮಾಜದ ಸುತ್ತಮುತ್ತಲಿನ ಅರ್ಹರಿಗೆ ತಲುಪಿಸಿ ದೇಶದ ಅಭಿವೃದ್ಧಿಗೆ ವೇಗ ತರಬಹುದಾಗಿದೆ ಎಂದು ತಿಳಿಸಿದರು.ಪ್ರೊ. ಎನ್.ಎಸ್. ಶಂಕರೇಗೌಡ, ಮಹೇಶ್ ಬಾಬು, ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಕೆ.ಬಿ. ಜಯಶಂಕರ್ ಸೇರಿದಂತೆ ಹಲವರು ಭಾಗವಹಿಸಿದ್ದರು.