ಸಾರಾಂಶ
ಚನ್ನಪಟ್ಟಣ: ಬಮೂಲ್ ಚುನಾವಣೆಯಲ್ಲಿ ಜೆಡಿಎಸ್‌ನ ಜಯಮುತ್ತು ಮೇಲೆ ಇಡೀ ರಾಜ್ಯ ಸರ್ಕಾರವೇ ಮುಗಿಬಿದ್ದಿದೆ. ಅವರನ್ನು ಸೋಲಿಸಲು ತೊಡೆ ತಟ್ಟಿ ನಿಂತಿದೆ. ಇದನ್ನು ಮೆಟ್ಟಿ ನಿಂತು ನಾವೆಲ್ಲ ಸೇರಿ ಜಯಮುತ್ತು ಅವರನ್ನು ಗೆಲ್ಲಿಸಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕರೆ ನೀಡಿದರು.
ತಾಲೂಕಿನ ಸುಣ್ಣಘಟ್ಟ ಗ್ರಾಮದ ಬಳಿ ಮೇ. ೨೫ ರಂದು ನಡೆಯುವ ಬಮೂಲ್ ಚುನಾವಣೆಗೆ ಸಂಬಂಧಿಸಿದಂತೆ ಆಯೋಜಿಸಿದ್ದ ಚನ್ನಪಟ್ಟಣ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ನಿರ್ದೇಶಕರು, ಮುಖ್ಯ ಕಾರ್ಯನಿರ್ವಾಹಕರು ಹಾಗೂ ಸಿಬ್ಬಂದಿ ವರ್ಗದವರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.ರಾಮನಗರ ಜಿಲ್ಲೆಯಲ್ಲಿ ನ್ಯಾಯಬದ್ದವಾಗಿ ನಡೆಯಬೇಕಾದ ಬಮೂಲ್ ಚುನಾವಣೆ ಯಾವ ರೀತಿ ನಡೆಯುತ್ತಿದೆ , ಕಾಂಗ್ರೆಸ್ ಆಡಳಿತ ಯಾವ ರೀತಿ ನಡೆದುಕೊಳ್ಳುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಜಿಲ್ಲೆಯ ನಾಲ್ಕು ಕಾಂಗ್ರೆಸ್ ಶಾಸಕರು ಎಲ್ಲ ವಿಚಾರಗಳಲ್ಲೂ ಹಸ್ತಕ್ಷೇಪ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ನ್ಯಾಯಸಮ್ಮತ ಚುನಾವಣೆ ನಡೆಯದ ಹಿನ್ನೆಲೆಯಲ್ಲಿ ಇಂದು ಬೀದಿಗಿಳಿದು ಹೋರಾಟ ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದರು.
ಡಿಸಿ ವಿರುದ್ಧ ಕಿಡಿ:ಜಿಲ್ಲಾಡಳಿತ, ಜಿಲ್ಲಾಧಿಕಾರಿ ರಾಜಕೀಯ ಪಕ್ಷಗಳ ಒತ್ತಡಕ್ಕೆ ಮಣಿಯಬಾರದು. ಎ.ಆರ್. ಹಾಗೂ ಡಿ.ಆರ್.ನ್ಯಾಯಸಮ್ಮತ ಚುನಾವಣೆ ನಡೆಸಬೇಕು. ಆದರೆ, ಇಲ್ಲಿ ಅದು ಆಗುತ್ತಿಲ್ಲ. ಬಮೂಲ್ ಚುನಾವಣೆ ವಿಚಾರದಲ್ಲಿ ಆಗುತ್ತಿರುವ ಅಕ್ರಮದ ಕುರಿತು ಹೋರಾಟ ನಡೆಸಿ ಜಿಲ್ಲಾಧಿಕಾರಿಗೆ ಎಲ್ಲ ಮನವರಿಕೆ ಮಾಡಿಕೊಟ್ಟರೂ ಸಹ ಅವರು ಕಾಯಿದೆಗಳ ಹೆಸರೇಳಿ ನುಣುಚಿಕೊಳ್ಳುತ್ತಿದ್ದಾರೆ. ಕಾನೂನು ಹೋರಾಟ ಮಾಡಿ ಎಂದು ಸಲಹೆ ನೀಡುತ್ತಾರೆ. ಇದನ್ನು ಹೇಳಲು ಇವರೇ ಬೇಕಾ ಎಂದು ಕಿಡಿಕಾರಿದರು.
ಜೆಡಿಎಸ್ ತೆಕ್ಕೆಯಲ್ಲಿರು ಸುಮಾರು ೨೦ಕ್ಕೂ ಹೆಚ್ಚು ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ನೋಟಿಸ್ ನೀಡಲಾಗಿದೆ. ನಿವೃತ್ತಿ ಹಂಚಿನಲ್ಲಿರುವ ಸಹಕಾರ ಸಂಘಗಳ ಸಹಾಯಕ ನಿಬಂಧಕರನ್ನು ಇಟ್ಟುಕೊಂಡು ನೋಟಿಸ್ ನೀಡಲಾಗುತ್ತಿದೆ. ಇವರ ಮೇಲೆ ಈ ಹಿಂದೆ ಲೋಕಾಯುಕ್ತ ದಾಳಿ ಸಹ ನಡೆದಿತ್ತು ಎಂದರು.ಪಕ್ಷ ಇಂದು ಕಷ್ಟಕಾಲದಲ್ಲಿದೆ. ಜಿಲ್ಲೆಯಲ್ಲಿ ನಾಲ್ಕು ಕಡೆ ನಾವು ಸೋತಿದ್ದೇವೆ. ಉಪಚುನಾಣೆಯ ಸೋಲಿನ ಕುರಿತು ನಾನು ಮಾತನಾಡುವುದಿಲ್ಲ. ಪಕ್ಷದ ಕಾರ್ಯಕರ್ತರಿಗೆ ಟಿಕೆಟ್ ನೀಡಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಹೇಳಿದ್ದೇ. ಅವರು ಸಹ ಒಪ್ಪಿಗೆ ಸೂಚಿಸಿದ್ದರು. ಆದರೆ ನಂತರ ಬೆಳೆದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸ್ಪರ್ಧಿಸುವಂತೆ ಆಯಿತು ಎಂದರು.
ರಾಜ್ಯದಲ್ಲಿ ಪಕ್ಷ ಬಲಗೊಳಿಸಬೇಕಿದ್ದು. ಈ ನಿಟ್ಟಿನಲ್ಲಿ ಮುಂದಿನ ದಿನಗಳಲಿ ರಾಜ್ಯ ಪ್ರವಾಸ ಕೈಗೊಳ್ಳಲಿದ್ದೇನೆ. ನಮಗೆ ಶಕ್ತಿ ನೀಡಿದ ರಾಮನಗರ ಜಿಲ್ಲೆಯನ್ನು ಮರೆಯುವ ಪ್ರಶ್ನೆಯೇ ಇಲ್ಲ. ಇದೇ ಮೊದಲ ಬಾರಿ ಜಯಮುತ್ತು ಇಷ್ಟು ದೊಡ್ಡ ಪರೀಕ್ಷೆ ಎದುರಿಸುತ್ತಿದ್ದಾರೆ. ಇದು ಪಕ್ಷದ ಪ್ರತಿಷ್ಠೆಯ ಪ್ರಶ್ನೆ. ಸರ್ಕಾರ ಏನೇ ಮಾಡಿದರೂ ಎಲ್ಲ ಒಂದಾಗಿ ಬಮೂಲ್ ಚುನಾವಣೆಯಲ್ಲಿ ಜಯಮುತ್ತು ಅವರನ್ನು ಗೆಲ್ಲಿಸೋಣ ಎಂದರು.ಬಮೂಲ್ ನಿರ್ದೇಶಕ ಎಚ್.ಸಿ.ಜಯಮುತ್ತು ಮಾತನಾಡಿ, ಬಮೂಲ್ ಚುನಾವಣೆಯಲ್ಲಿ ನನ್ನನ್ನು ಸೋಲಿಸಲೇಬೇಕು ಎಂದು ಹುನ್ನಾರ ನಡೆಸಲಾಗಿದೆ. ಈಗಾಗಲೇ ಐದು ಡೇರಿಗಳನ್ನು ಸೂಪರ್‌ಸೀಡ್ ಮಾಡಿದ್ದು, ೮ ಡೇರಿಗಳಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಇದೀಗ ಇಂದು ಮತ್ತೆ ಮೂರು ಡೇರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ನನ್ನನ್ನು ಚುನಾವಣೆಯಿಂದ ಅನರ್ಹಗೊಳಿಸಲು ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್‌ನವರು ನೇರವಾಗಿ ಚುನಾವಣೆ ಮಾಡದೇ ಭಯದ ವಾತಾವರಣ ಸೃಷ್ಡಿ ಮಾಡುತ್ತಿದ್ದಾರೆ. ಎ.ಆರ್ ಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ. ಏನಾದರೂ ಮಾಡಿ ಗೆಲ್ಲಲೇ ಬೇಕು ಎಂದು ಹುನ್ನಾರ ನಡೆಸಿದ್ದಾರೆ. ಜೆಡಿಎಸ್ ತೆಕ್ಕೆಯಲ್ಲಿರುವ ಸಂಘಗಳ ಆಡಳಿತ ಮಂಡಳಿಯಿಂದ ಹಳೇ ದಿನಾಂಕ ನಮೂದಿಸಿ ರಾಜೀನಾಮೆ ಪಡೆಯಲಾಗುತ್ತಿದೆ ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದೇ ಎಂದು ಆಮೀಷ ಒಡ್ಡಲಾಗುತ್ತಿದೆ. ಒತ್ತಡ ಹೇರಿ ರಾಜೀನಾಮೆ ಪಡೆಯಲಾಗುತ್ತಿದೆ ಎಂದು ಆಪಾದಿಸಿದರು.ಸಭೆಯಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹಾಪ್‌ಕಾಮ್ಸ ದೇವರಾಜು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಕ್ಕೂರುದೊಡ್ಡಿ ಜಯರಾಮು, ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಜೆಡಿಎಸ್ ಮಾಜಿ ತಾಲೂಕು ಅಧ್ಯಕ್ಷ ವಡ್ಡರಹಳ್ಳಿ ರಾಜಣ್ಣ. ಮುಖಂಡರಾದ ಇ.ತಿ.ಶ್ರೀನಿವಾಸ್, ಪವನ್, ಬೋರ್‌ವೆಲ್ ರಾಮಚಂದ್ರು, ರೇಖಾ ಉಮಾಶಂಕರ್, ಇತರರು ಇದ್ದರು.
ಬಾಕ್ಸ್...................ಪಾಕ್ ಯುದ್ಧಕ್ಕೆ ಬಂದಲ್ಲಿ ಕೈಕಟ್ಟಿಕೂರಲಾಗದು
ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನಕ್ಕೆ ಭಾರತೀಯ ಸೇನೆ ತಕ್ಕ ಉತ್ತರ ಕೊಟ್ಟಿದೆ. ಈ ಸಂದರ್ಭದಲ್ಲಿ ನಾವು ಪ್ರಧಾನಿ ನರೇಂದ್ರ ಮೋದಿಯವರಿಗೆ ಪಕ್ಷಾತೀತವಾಗಿ ಬೆಂಬಲ ಕೊಡಬೇಕು. ಆದರೆ ಕಾಂಗ್ರೆಸ್ ನವರು ಮಾತ್ರ ಶಾಂತಿ ಮಂತ್ರ ಜಪಿಸುತ್ತಾರೆ. ಇವರ ಮನೆಯ ಮಕ್ಕಳನ್ನು ಗನ್ ಪಾಯಿಂಟ್‌ನಲ್ಲಿ ಇಟ್ಟಿದ್ರೆ ಮೂಲೆಯಲ್ಲಿ ಕೂತುಕೊಳ್ಳುತ್ತಿದ್ದೀರಾ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದರು.ಪಾಕಿಸ್ತಾನ ಯುದ್ಧಕ್ಕೆ ಸನ್ನದ್ಧವಾಗಿದೆ ಎಂಬ ಸಂದೇಶ ನೀಡಿದೆ. ಇವತ್ತು ಪಾಕಿಸ್ತಾನ ನಮ್ಮ ದೇಶದೊಂದಿಗೆ ಯುದ್ಧಕ್ಕೆ ಬಂದಲ್ಲಿ ನಾವ್ಯಾರು ಕೈಕಟ್ಟಿಕೊಂಡು ಕೂರಲು ಆಗುವುದಿಲ್ಲ. ದೇಶವನ್ನು ರಕ್ಷಿಸಬೇಕಿದ್ದು, ಈ ಸಂದರ್ಭದಲ್ಲಿ ಏನೇ ಆದರೂ ಎಲ್ಲರೂ ಒಟ್ಟಾಗಿ ಸಹಕಾರ ನೀಡಬೇಕಿದೆ. ನಮ್ಮ ಸೇನೆಗೆ ನಾವು ಪ್ರೋತ್ಸಾಹಿಸಬೇಕು. ನಾವೆಲ್ಲ ಪ್ರಧಾನಿಯವರ ಜತೆ ನಿಲ್ಲಲಿದ್ದೇವೆ ಎಂದರು. ಪಹಲ್ಗಾಮ್ ದಾಳಿ ದಿನ ಆದ ದಿನವೇ ಮತ್ತೊಂದು ಕಡೆ ರಾಮನಗರದ ಶಾಸಕರು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾವೇಶ ಮಾಡುತ್ತಾರೆ. ಕಾರ್ಯಕ್ರಮದಲ್ಲಿ ಸೀರೆ ಹಂಚಿದರು. ಕಾರ್ಯಕ್ರಮಕ್ಕೆ ಸರಿಯಾದ ಅನುಕೂಲ ಕಲ್ಪಿಸದೇ ಮಹಿಳೆಯರಿಗೆ ಹಲವು ರೀತಿ ಸಮಸ್ಯೆ ಆಯಿತು. ಈಗ ಯೂತ್ ಕಾಂಗ್ರೆಸ್ ಸಮಾವೇಶ ಮಾಡುತಿದ್ದಾರೆ. ಯಾವ ಪುರುಷಾರ್ಥಕ್ಕಾಗಿ ಮಾಡುತ್ತಿದ್ದಾರೆ. ಎರಡು ವರ್ಷದಿಂದ ಏನು ಮಾಡಿದ್ದಾರೆ, ಇವರ ಸರ್ಕಾರದ ಸಾಧನೆ ಏನಿದೆ ಎಂದು ಯಾವ ಸಮಾವೇಶ ಮಾಡುತ್ತಿದ್ದಾರೆ. ಏನೇ ಮಾಡಿದರೂ ಇವರ ಕಥೆ ಅಷ್ಟೇ ಮುಂದಿನ ಚುನಾವಣೆಯಲ್ಲಿ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಪೋಟೊ೯ಸಿಪಿಟಿ೧:ಚನ್ನಪಟ್ಟಣ ತಾಲೂಕಿನ ಸುಣ್ಣಘಟ್ಟ ಆಯೋಜಿಸಿದ್ದ ತಾಲೂಕಿನ ಡೇರಿ ಅಧ್ಯಕ್ಷರು, ನಿರ್ದೇಶಕರು, ಮುಖ್ಯ ಕಾರ್ಯನಿರ್ವಾಹಕರು ಹಾಗೂ ಸಿಬ್ಬಂದಿ ವರ್ಗದ ಸಭೆಯಲ್ಲಿ ಭಾರತಾಂಭೆಯ ಭಾವಚಿತ್ರಕ್ಕೆ ಪುಷ್ಟನಮನ ಸಲ್ಲಿಸಲಾಯಿತು.