ಕ್ರೀಡಾಕೂಟ ಅಚ್ಚುಕಟ್ಟಾಗಿ ನಡೆಸಿ ಕನಕಗಿರಿ ಹಿರಿಮೆ ಹೆಚ್ಚಿಸಿ: ವಿಠ್ಠಲ ಜಾಬಗೌಡ

| Published : Feb 23 2024, 01:48 AM IST

ಕ್ರೀಡಾಕೂಟ ಅಚ್ಚುಕಟ್ಟಾಗಿ ನಡೆಸಿ ಕನಕಗಿರಿ ಹಿರಿಮೆ ಹೆಚ್ಚಿಸಿ: ವಿಠ್ಠಲ ಜಾಬಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಲೆಗ್ ಕ್ರಿಕೆಟ್ ಹಮ್ಮಿಕೊಂಡಿದ್ದು, ಜಿಲ್ಲಾ ಎಸ್ಪಿ, ಎಡಿಸಿ ನೇತೃತ್ವದ ತಂಡಗಳು ಲೆಗ್ ಕ್ರಿಕೆಟ್ ಸೆಣಸಾಡಲಿವೆ.

ಕನಕಗಿರಿ: ಇಲ್ಲಿನ ಕನಕಗಿರಿ ಉತ್ಸವ ನಿಮಿತ್ತ ಫೆ.೨೭, ೨೮, ೨೯ರಂದು ನಡೆಯುವ ಕ್ರೀಡಾಕೂಟವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟು, ಕನಕಗಿರಿಯ ಹಿರಿಮೆ ಹೆಚ್ಚಿಸಬೇಕು ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡ ಹೇಳಿದರು.ಅವರು ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲಾ ಕಟ್ಟಡದಲ್ಲಿ ಹಮ್ಮಿಕೊಂಡಿದ್ದ ಕನಕಗಿರಿ ಉತ್ಸವ ನಿಮಿತ್ತ ದೈಹಿಕ ಶಿಕ್ಷಕರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಗುರುವಾರ ಮಾತನಾಡಿದರು.ಉತ್ಸವದ ಪೂರ್ವದಲ್ಲಿ ಮೂರು ದಿನಗಳ ಕಾಲ ವಿವಿಧ ಕ್ರೀಡೆಗಳು ನಡೆಯಲಿವೆ. ಜಿಲ್ಲಾ ಮಟ್ಟಕ್ಕೆ ಮಾತ್ರ ಸೀಮಿತಗೊಳಿಸಿದ್ದು, ಪುರುಷರಿಗಾಗಿ ಕುಸ್ತಿ, ಕಬ್ಬಡ್ಡಿ, ವಾಲಿಬಾಲ್, ಮಲ್ಲಗಂಬ, ಹಗ್ಗ ಜಗ್ಗಾಟ, ಕ್ರಿಕೆಟ್, ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ ಸೇರಿದಂತೆ ನಾನಾ ಗ್ರಾಮೀಣ ಕ್ರೀಡೆಗಳು ನಡೆಯಲಿವೆ. ಇನ್ನು ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಲೆಗ್ ಕ್ರಿಕೆಟ್ ಹಮ್ಮಿಕೊಂಡಿದ್ದು, ಜಿಲ್ಲಾ ಎಸ್ಪಿ, ಎಡಿಸಿ ನೇತೃತ್ವದ ತಂಡಗಳು ಲೆಗ್ ಕ್ರಿಕೆಟ್ ಸೆಣಸಾಡಲಿವೆ. ಫೆ.೨೯ರಂದು ಪತ್ರಕರ್ತರ ಹಾಗೂ ಚುನಾಯಿತ ಪ್ರತಿನಿಧಿಗಳ ತಂಡ ಕ್ರಿಕೆಟ್ ಪಂದ್ಯಾಟದಲ್ಲಿ ಮುಖಾಮುಖಿಯಾಗಲಿವೆ ಎಂದರು.ಕೆಲ ಮುಖ್ಯ ಕ್ರೀಡೆಗಳ ವ್ಯವಸ್ಥಿತವಾಗಿ ನಡೆಸುವ ಉದ್ದೇಶದಿಂದ ಬೇರೆ ಜಿಲ್ಲೆಯಿಂದ ನುರಿತ ನಿರ್ಣಾಯಕರನ್ನು ಕರೆಯಿಸಲಾಗುವುದು. ಉತ್ಸವದಲ್ಲಿ ನಿರ್ಣಾಯಕರಾಗಿ ಸೇವೆಸಲ್ಲಿಸುವ ಎಲ್ಲ ದೈಹಿಕ ಶಿಕ್ಷಕರಿಗೆ, ನಿರ್ಣಾಯಕರಿಗೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ಕನಕಗಿರಿ ಉತ್ಸವ ಲೋಗೋವುಳ್ಳ ಸಮವಸ್ತ್ರ ನೀಡಲಾಗುವುದು. ಕ್ರೀಡಾಕೂಟವನ್ನು ಅಚ್ಚುಕಟ್ಟಾಗಿ ನಡೆಸಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದರು.ಇದಕ್ಕೂ ಮೊದಲು ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಬಸವರಾಜ ಮಾತನಾಡಿ, ಕನಕಗಿರಿ ಉತ್ಸವದ ಕ್ರೀಡಾಕೂಟವನ್ನು ಯಶಸ್ವಿಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ನಾವು ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದರು.ತಾಲೂಕು ದೈಹಿಕ ಪರಿವೀಕ್ಷಕ ರಂಗಸ್ವಾಮಿ, ಸಹಾಯಕ ಕ್ರೀಡಾಧಿಕಾರಿಗಳಾದ ತಿಪ್ಪಣ್ಣ, ಈಶಪ್ಪ ಗಾಜಿ, ವಿಠ್ಠಪ್ಪ ನುಗ್ಗಲಿ ಸೇರಿದಂತೆ ಕನಕಗಿರಿ, ಕಾರಟಗಿ ಹಾಗೂ ಗಂಗಾವತಿ ತಾಲೂಕಿನ ದೈಹಿಕ ಶಿಕ್ಷಕರು ಇದ್ದರು.