ಸಾರಾಂಶ
ಮಾನವನು ತನ್ನ ಜೀವಿತಾವಧಿಯಲ್ಲಿ ಧರ್ಮದ ಕಾರ್ಯಗಳನ್ನು ಮಾಡವ ಮೂಲಕ ಜೀವನವನ್ನು ಸಾರ್ಥಕತೆ ಮಾಡಿಕೊಳ್ಳಬೇಕು ಎಂದು ನುಗ್ಗೇಹಳ್ಳಿಯ ಪುರವರ್ಗದ ಹಿರೇಮಠದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಸೋಮವಾರ ಹೇಳಿದರು.
ಕನ್ನಡಪ್ರಭವಾರ್ತೆ ಚನ್ನರಾಯಪಟ್ಟಣ
ಮಾನವನು ತನ್ನ ಜೀವಿತಾವಧಿಯಲ್ಲಿ ಧರ್ಮದ ಕಾರ್ಯಗಳನ್ನು ಮಾಡವ ಮೂಲಕ ಜೀವನವನ್ನು ಸಾರ್ಥಕತೆ ಮಾಡಿಕೊಳ್ಳಬೇಕು ಎಂದು ನುಗ್ಗೇಹಳ್ಳಿಯ ಪುರವರ್ಗದ ಹಿರೇಮಠದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಸೋಮವಾರ ಹೇಳಿದರು.ತಾಲೂಕಿನ ತೋಟಿ ಗ್ರಾಮದಲ್ಲಿ ಮಲ್ಲೇಶ್ವರ ಸ್ವಾಮಿ, ವಿಘ್ನೇಶ್ವರ ಸ್ವಾಮಿ, ನಂದೀಶ್ವರ ಸ್ವಾಮಿ, ಪಾರ್ವತಿದೇವಿಯ ನೂತನ ವಿಗ್ರಹಗಳ ಪ್ರಾಣಪ್ರತಿಷ್ಠಾಪನೆ ಮತ್ತು ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಬದುಕಿದ್ದಾಗ ಮಾಡಿದ ಪುಣ್ಯದ ಕೆಲಸಗಳು ಸಾವಿನ ನಂತರವು ಹೆಸರು ಹೇಳುತ್ತವೆ. ನಮ್ಮ ಪೂರ್ವಿಕರು ಅಂದಿನ ಕಾಲದಲ್ಲಿ ವಾಸ್ತು ಪ್ರಕಾರ ದೇವಸ್ಥಾನ, ಕೆರೆ, ರಸ್ತೆಗಳನ್ನು ನಿರ್ಮಾಣ ಮಾಡಿದ್ದಾರೆ. ಗ್ರಾಮದಲ್ಲಿನ ದೇವಸ್ಥಾನದ ಆವರಣ ಸ್ವಚ್ಛತೆಯಿಂದ ಇದ್ದರೆ, ಆ ಹಳ್ಳಿಯೂ ಸ್ವಚ್ಛವಾಗಿರುತ್ತದೆ ಎಂದರು. ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ತೋಟಿ ಕೆರೆ ಏತ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಲಾಗುವುದು. ಈ ಗ್ರಾಮಕ್ಕೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿದ್ದೇನೆ ಎಂದರು. ವಿಧಾನ ಪರಿಷತ್ ಮಾಜಿ ಸದಸ್ಯ ಗೋಪಾಲಸ್ವಾಮಿ ಮಾತನಾಡಿ, ಚುನಾವಣೆ ನಂತರ ಗ್ರಾಮಸ್ಥರು ಸಹಬಾಳ್ವೆಯಿಂದ ಬದುಕಬೇಕು, ಗ್ರಾಮದ ಅಭಿವೃದ್ಧಿಗೆ ಎಲ್ಲರ ಸಹಕಾರ ಪಡೆಯಬೇಕು ಎಂದರು.
ಜಿಪಂ ಮಾಜಿ ಅಧ್ಯಕ್ಷೆ ಅಂಬಿಕಾರಾಮಕೃಷ್ಣ, ಮಾಜಿ ಸದಸ್ಯ ಕುಸುಮಾಬಾಲಕೃಷ್ಣ, ನುಗ್ಗೇಹಳ್ಳಿ ಕಾಸಪ ಅಧ್ಯಕ್ಷ ದೋರೆಸ್ವಾಮಿ, ತೋಟಿ ಜಯರಾಮ್, ನಾಗಣ್ಣ ಮಾತನಾಡಿದರು. ಪ್ರಥಮ ದರ್ಜೆ ಗುತ್ತಿಗೆದಾರ ರಂಗೇಗೌಡ, ಟಿ.ಪಿ. ಮಂಜುನಾಥ್ ಎಪಿಎಂಸಿ ನಿರ್ದೇಶಕ ಬಿ.ಎನ್. ಮಂಜುನಾಥ್. ಮುಖಂಡರಾದ ಪುಟ್ಟಸ್ವಾಮಿ, ಗ್ರಾಪಂ ಸದಸ್ಯರಾದ ಮಂಜುನಾಥ್, ಪಂಕಜರೇವಣ್ಣ, ಗ್ರಾಮದ ರಾಮಲಿಂಗೇಗೌಡರು, ರಂಗೇಗೌಡ, ಮಧು, ಡಾ. ಶಂಕರಲಿಂಗೇಗೌಡ, ದೇವಸ್ಥಾನದ ಅರ್ಚಕ ಮಲ್ಲಿಕಾರ್ಜುನಯ್ಯ ವೇದಿಕೆಯಲ್ಲಿ ಇದ್ದರು. ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ದೇವರಗಳಿಗೆ ಪ್ರಾಣಪ್ರತಿಷ್ಠೆ, ರುದ್ರಾಭಿಷೇಕ, ವಿಶೇಷ ಹೋಮ, ಪೂಜೆಗಳು, ಗೋಪುರಕ್ಕೆ ಕಳಸಾರೋಹಣ ಮತ್ತು ಕುಂಭಾಭಿಷೇಕ ನಡೆಯಿತು. ಭಾನುವಾರ ಸಂಜೆ ಗಂಗಾ, ಗೋ ಪೂಜೆ, ಗಣಪತಿ, ನವಗ್ರಹ, ರುದ್ರ, ರಕ್ಷಾ ಹೋಮಗಳು ನಡೆದವು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ತೋಟಿ, ತೋಟಿಕೊಪ್ಪಲು, ಆಮ್ಮನಹಳ್ಳಿ ಬಾರೆ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿದ್ದರು.