ಮತಗಟ್ಟೆಗಳಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಿ

| Published : Mar 21 2024, 01:07 AM IST

ಮತಗಟ್ಟೆಗಳಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಮತಗಟ್ಟೆ ಕೇಂದ್ರಗಳಲ್ಲಿ ಮತದಾರರು ಯಾವುದೇ ಸಮಸ್ಯೆಗಳಿಲ್ಲದೆ ನಿರ್ಭೀತರಾಗಿ ತಮ್ಮ ಮತ ಚಲಾಯಿಸಲು ಸಕಲ ವ್ಯವಸ್ಥೆ ಕಲ್ಪಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು

ನರಗುಂದ: ಲೋಕಸಭಾ ಚುನಾವಣೆ ಹಿನ್ನೆಲೆ ವಿವಿಧ ಮತ ಕೇಂದ್ರಗಳಿಗೆ ಭೇಟಿ ನೀಡಿ ಮತಗಟ್ಟೆ ಕೇಂದ್ರಗಳನ್ನು ಪರಿಶೀಲಿಸಿ ಸಿದ್ಧತೆ ಮಾಡಿಕೊಳ್ಳಬೇಕು ಎಂದು ನರಗುಂದ ವಿಧಾನಸಭಾ ಕ್ಷೇತ್ರದ ಮಾದರಿ ನೀತಿ ಸಂಹಿತೆಯ ನೋಡಲ್ ಅಧಿಕಾರಿ ಸೋಮಶೇಖರ್ ಬಿರಾದಾರ ಹೇಳಿದರು.

ಅವರು ಬುಧವಾರ ತಾಲೂಕಿನ ಹುಣಶಿಕಟ್ಟಿ, ಕನಕಿಕೊಪ್ಪ ಹಾಗೂ ಚಿಕ್ಕನರಗುಂದ ಗ್ರಾಪಂ ವ್ಯಾಪ್ತಿಯ ಮತಗಟ್ಟೆ ಕೇಂದ್ರಗಳಿಗೆ ಭೇಟಿ ನೀಡಿ,ಮತಗಟ್ಟೆ ಕೇಂದ್ರಗಳಲ್ಲಿ ಸರಿಯಾದ ಗಾಳಿ ಬೆಳಕಿನ ವ್ಯವಸ್ಥೆ ಹೊಂದಿರುವುದರ ಬಗ್ಗೆ ಪರಿಶೀಲಿಸಿದರು. ಹುಣಶಿಕಟ್ಟೆ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ೧೪೫ ಮತ್ತು ೧೪೬ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಮತಗಟ್ಟೆ ಕೇಂದ್ರಗಳಲ್ಲಿ ಮತದಾರರು ಯಾವುದೇ ಸಮಸ್ಯೆಗಳಿಲ್ಲದೆ ನಿರ್ಭೀತರಾಗಿ ತಮ್ಮ ಮತ ಚಲಾಯಿಸಲು ಸಕಲ ವ್ಯವಸ್ಥೆ ಕಲ್ಪಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಮತಗಟ್ಟೆ ಕೇಂದ್ರದ ಮುಂದೆ ರ‍್ಯಾಂಪ್ ವ್ಯವಸ್ಥೆ, ಕೇಂದ್ರದ ಒಳಗಡೆ ಪ್ಯಾನ್ ಮತ್ತು ವಿದ್ಯುತ್ ಸಂಪರ್ಕದ ವ್ಯವಸ್ಥೆ, ಚುನಾವಣೆ ಕರ್ತವ್ಯಕ್ಕೆ ಬರುವ ಅಧಿಕಾರಿಗಳು ಉಳಿದುಕೊಳ್ಳಲು ಕೊಠಡಿ ವ್ಯವಸ್ಥೆ, ಮತಗಟ್ಟೆ ಕೇಂದ್ರದಲ್ಲಿ ಶೌಚಾಲಯ ವ್ಯವಸ್ಥೆ, ಶೌಚಾಲಯದಲ್ಲಿ ನೀರಿನ ಸಂಪರ್ಕ, ಕುಡಿಯುವ ನೀರಿನ ವ್ಯವಸ್ಥೆ ಬಗ್ಗೆ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಚುನಾವಣೆ ಕರ್ತವ್ಯದ ಜತೆಗೆ ಶಾಲಾ ಮಕ್ಕಳಿಗೆ ನೀಡುವ ಆಹಾರದ ಗುಣಮಟ್ಟ ಪರೀಕ್ಷಿಸಲು ಸ್ವತಃ ಶಾಲೆಯಲ್ಲಿ ಬಿಸಿಯೂಟ ಸವಿದರು.

ಈ ವೇಳೆ ಅಡುಗೆ ಕೋಣೆಗೆ ತೆರಳಿ ಅಡುಗೆ ಸಾಮಗ್ರಿಗಳನ್ನು ಪರಿಶೀಲಿಸಿ ಅಡುಗೆಗೆ ಬಳಸುವ ತರಕಾರಿ, ಬೇಳೆ ಕಾಳುಗಳ ಗುಣಮಟ್ಟ ಪರಿಶೀಲಿಸಿದರು. ಮಕ್ಕಳಿಗೆ ನೀಡುವ ಅಡುಗೆಯಲ್ಲಿ ತರಕಾರಿಗಳನ್ನು ಹೆಚ್ಚಾಗಿ ಬಳಸಿಕೊಳ್ಳುವಂತೆ ಸಲಹೆ ನೀಡಿದರು. ಅಲ್ಲದೆ ಸರ್ಕಾರ ಮಕ್ಕಳ ಕಲಿಕೆಗೆ ಸಾಕಷ್ಟು ಸೌಲಭ್ಯ ಕಲ್ಪಿಸಿದೆ. ಸರ್ಕಾರದ ಈ ಸೌಲಭ್ಯ ಶಾಲಾ ಮಕ್ಕಳ ಸದುಪಯೋಗಪಡಿಸಿಕೊಂಡು ಕಲಿಕೆಯಲ್ಲಿ ಮೇಲುಗೈ ಸಾಧಿಸಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಸೆಕ್ಟರ್ ಅಧಿಕಾರಿಗಳು ಇದ್ದರು.