ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ, ವಿಸರ್ಜನಾ ಮೆರವಣಿಗೆ ಹಾಗೂ ಗಣೇಶೋತ್ಸವ ವೀಕ್ಷಣೆಗೆ ಆಗಮಿಸುವ ಜನರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲ ಇಲಾಖೆಗಳು ಅಗತ್ಯ ಮುನ್ನೆಚ್ಚರಿಕಾ ಕ್ರಮಕೈಗೊಳ್ಳಬೇಕು.

ಹುಬ್ಬಳ್ಳಿ:

ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ, ವಿಸರ್ಜನಾ ಮೆರವಣಿಗೆ ಹಾಗೂ ಗಣೇಶೋತ್ಸವ ವೀಕ್ಷಣೆಗೆ ಆಗಮಿಸುವ ಜನರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲ ಇಲಾಖೆಗಳು ಅಗತ್ಯ ಮುನ್ನೆಚ್ಚರಿಕಾ ಕ್ರಮಕೈಗೊಳ್ಳುವಂತೆ ಶಾಸಕ ಮಹೇಶ ಟೆಂಗಿನಕಾಯಿ ಸೂಚಿಸಿದರು.ಸಾರ್ವಜನಿಕ ಗಣೇಶೋತ್ಸವ ಹಿನ್ನೆಲೆ ಹಾಗೂ ವಿಸರ್ಜನಾ ಮೆರವಣಿಗೆಗೆ ಫ್ಲೈಒವರ್‌ನಿಂದಾಗಿ ಆಗುತ್ತಿರುವ ಸಮಸ್ಯೆಗಳ ಕುರಿತು ಸೋಮವಾರ ವಿವಿಧ ಇಲಾಖೆಗಳ ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಗಣೇಶ ಮೂರ್ತಿಗಳ ಮೆರವಣಿಗೆ ಸಾಗುವ ರಸ್ತೆಯಲ್ಲಿನ ತಗ್ಗು-ಗುಂಡಿ ಮುಚ್ಚಬೇಕು. ಉತ್ಸವದ 12 ದಿನ ವಿದ್ಯುತ್ ವ್ಯತ್ಯಯವಾಗದಂತೆ ಕ್ರಮ ವಹಿಸಬೇಕು. ವಿವಿಧ ಬಡಾವಣೆಯಲ್ಲಿನ ಗಣೇಶ ವಿಸರ್ಜನಾ ಬಾವಿ ಸ್ವಚ್ಛಗೊಳಿಸುವುದು, ಮೆರವಣಿಗೆ ಮಾರ್ಗದಲ್ಲಿನ ಗಿಡ-ಮರಗಳ ರೆಂಬೆ, ಕೊಂಬೆಯನ್ನು ವಾರದೊಳಗೆ ತೆರವುಗೊಳಿಸುವಂತೆ ಸೂಚಿಸಿದರು.

ಕುಡಿಯುವ ನೀರಿನ ಪೂರೈಕೆಗೆ ಅಡ್ಡಿಯಾಗದಂತೆ ಹಾಗೂ ಅನಗತ್ಯವಾಗಿ ರಸ್ತೆ ಅಗೆಯದಂತೆ ಎಲ್‌ ಆ್ಯಂಡ್‌ ಟಿ ಅಧಿಕಾರಿಗಳಿಗೆ ಸೂಚಿಸಿದ ಶಾಸಕರು, ಗಣೇಶ ಪೆಂಡಾಲ್‌ಗಳಲ್ಲಿ ಪ್ರಸಾದ ವಿತರಣೆಯಿಂದ ತ್ಯಾಜ್ಯ ಹೆಚ್ಚಾಗುವ ಸಾಧ್ಯತೆ ಇದ್ದು ಎಲ್ಲ ಗಣೇಶ ಮಂಡಳಿಗಳಿಗೆ ಪಾಲಿಕೆಯಿಂದ ಡಸ್ಟ್‌ಬಿನ್‌ ಒದಗಿಸುವ ಜತೆಗೆ ಸ್ವಚ್ಛತೆಗೆ ಕಾರ್ಮಿಕರನ್ನು ನಿಯೋಜಿಸುವಂತೆ ತಿಳಿಸಿದರು. ಸಾರ್ವಜನಿಕರ ಅನುಕೂಲಕ್ಕಾಗಿ ವಿವಿಧೆಡೆ ಮೊಬೈಲ್ ಶೌಚಾಲಯ ಕಲ್ಪಿಸಬೇಕೆಂದ ಅವರು, ರಾತ್ರಿ 10ರ ವರೆಗೆ ಮಾತ್ರ ಡಿಜೆಗೆ ಅನುಮತಿ ನೀಡಲಾಗಿದೆ ಎಂದರು.

ಮಣ್ಣಿನ ಗಣೇಶ ಮೂರ್ತಿ ತಯಾರಕರನ್ನು ಪ್ರೋತ್ಸಾಹಿಸಲು ಪಾಲಿಕೆಯಿಂದ ಪ್ರತಿ ತಯಾರಕರಿಗೆ ₹25 ಸಾವಿರ ಪ್ರೋತ್ಸಾಹಧನ ನೀಡಲು ಉದ್ದೇಶಿಸಲಾಗಿದೆ ಎಂದು ಪಾಲಿಕೆ ಸಭಾನಾಯಕ ಶಿವು ಮೆಣಸಿನಕಾಯಿ ಹೇಳಿದರು.

ಈ ವೇಳೆ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ವಿಪ ಸದಸ್ಯ ಲಿಂಗರಾಜ ಪಾಟೀಲ, ಮೇಯರ್ ದುರ್ಗಮ್ಮ ಬಿಜವಾಡ, ಉಪ ಮೇಯರ್ ರತ್ನಾಬಾಯಿ ನಾಝರೆ, ಡಿಸಿಪಿಗಳಾದ ರವೀಶ ಸಿ.ಆರ್, ಶ್ರುತಿ ಹಾಗೂ ಹೆಸ್ಕಾಂ, ಪಾಲಿಕೆ, ಎಲ್‌ ಆ್ಯಂಡ್‌ ಟಿ, ಅಗ್ನಿಶಾಮಕ, ಪಿಡಬ್ಲ್ಯೂಡಿ, ಅರಣ್ಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಜರಿದ್ದರು. ಕನ್ನಡಪ್ರಭ ವರದಿ ಫಲಶ್ರುತಿ:

ಗಣೇಶ ವಿಸರ್ಜನಾ ಮೆರವಣಿಗೆಗೆ ಫ್ಲೈಓವರ್ ಅಡ್ಡಿಯಾಗಿರುವ ಕುರಿತು "ಹುಬ್ಬಳ್ಳಿಯಲ್ಲಿ ಗಣೇಶನಿಗೆ ಫ್ಲೈಓವರ್ ವಿಘ್ನ " ಶೀರ್ಷಿಕೆಯಡಿ ಸೋಮವಾರ ಕನ್ನಡಪ್ರಭ ವಿಶೇಷ ವರದಿ ಪ್ರಕಟಿಸಿತ್ತು. ವರದಿ ಗಮನಿಸಿದ ಶಾಸಕರು, ಅಧಿಕಾರಿಗಳ ಸಭೆ ಕರೆದು ಪರ‍್ಯಾಯ ಮಾರ್ಗದ ಕುರಿತು ಚರ್ಚಿಸಿದರು. ದಾಜಿಬಾನ್‌ಪೇಟೆ, ಗಣೇಶಪೇಟೆ ಹಾಗೂ ಮೇದಾರ್ ಓಣಿಯ ಗಣೇಶ ಮೂರ್ತಿಗಳು 22ರಿಂದ 25 ಅಡಿ ಎತ್ತರದ ವರೆಗೆ ಇರುತ್ತವೆ. ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಫ್ಲೈಓವರ್ ನಿರ್ಮಿಸುತ್ತಿರುವುದರಿಂದ ಬೃಹತ್ ಮೂರ್ತಿಗಳ ಮೆರವಣಿಗೆಗೆ ತೊಂದರೆಯಾಗಲಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಗೂ ಗಣೇಶ ಮಹಾಮಂಡಳದ ಪ್ರಮುಖರೊಂದಿಗೆ ಸ್ಥಳ ಪರಿಶೀಲಿಸಿ ಪರ‍್ಯಾಯ ಮಾರ್ಗದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.