ಗಣರಾಜ್ಯೋತ್ಸವ ದಿನಾಚರಣೆಗೆ ಅಗತ್ಯ ಸಿದ್ಧತೆ ಕೈಗೊಳ್ಳಿ: ಅಪರ ಜಿಲ್ಲಾಧಿಕಾರಿ ಶಿವನಾಂದ ಭಜಂತ್ರಿ

| Published : Jan 17 2025, 12:47 AM IST

ಗಣರಾಜ್ಯೋತ್ಸವ ದಿನಾಚರಣೆಗೆ ಅಗತ್ಯ ಸಿದ್ಧತೆ ಕೈಗೊಳ್ಳಿ: ಅಪರ ಜಿಲ್ಲಾಧಿಕಾರಿ ಶಿವನಾಂದ ಭಜಂತ್ರಿ
Share this Article
  • FB
  • TW
  • Linkdin
  • Email

ಸಾರಾಂಶ

ಇದೇ ಜ.26ರಂದು ಶಿಷ್ಟಾಚಾರದಂತೆ ಗಣರಾಜ್ಯೋತ್ಸವ ಆಚರಣೆಗೆ ಅಗತ್ಯ ಸಿದ್ದತೆ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ರಾಯಚೂರಿನಲ್ಲಿ ಗಣರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಪೂರ್ವಸಿದ್ಧತೆ ಸಭೆ । ಅಧಿಕಾರಿಗಳಿಗೆ ಸೂಚನೆ । ಪೊಲೀಸ್ ಇಲಾಖೆ, ಅಬಕಾರಿ ಇಲಾಖೆ, ಅಗ್ನಿಶಾಮಕ ದಳದ ಪಥಸಂಚಲನಕ್ಕೆ ನಿರ್ದೇಶನ

ಕನ್ನಡಪ್ರಭ ವಾರ್ತೆ ರಾಯಚೂರು

ಇದೇ ಜ.26ರಂದು ಶಿಷ್ಟಾಚಾರದಂತೆ ಗಣರಾಜ್ಯೋತ್ಸವ ಆಚರಣೆಗೆ ಅಗತ್ಯ ಸಿದ್ದತೆ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸ್ಥಳೀಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಗುರುವಾರ ಮಾತನಾಡಿದರು. ಗಣರಾಜ್ಯೋತ್ಸವದ ಮುಖ್ಯ ಕಾರ್ಯಕ್ರಮವು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದು, ಬೆಳಿಗ್ಗೆ 9 ಗಂಟೆಗೆ ಜಿಲ್ಲಾಡಳಿತದಿಂದ ನಡೆಯುವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ಕಡ್ಡಾಯ ಭಾಗವಹಿಸಬೇಕು ಎಂದು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾ ಮಹಾತ್ಮ ಗಾಂಧೀಜಿ ಕ್ರೀಡಾಂಗಣದ ಪಕ್ಕದ ಮಹಾತ್ಮ ಗಾಂಧೀಜಿ ಪುತ್ಥಳಿ ಬಳಿಯ ಪ್ರಾಂಗಣದಲ್ಲಿ ಶಾಮಿಯಾನ್ ಅಳವಡಿಸಿ ಸಿದ್ದತೆ ಮಾಡಬೇಕು. ಕ್ರೀಡಾಂಗಣದಲ್ಲಿ ಸ್ವಚ್ಛತೆ ಇರುವಂತೆ, ನೀರನ್ನು ಸಿಂಪಡಿಸಿ ಧೂಳು ಆಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಅಂದು ಜಿಲ್ಲಾದ್ಯಂತ ಎಲ್ಲಾ ಶಾಲಾ-ಕಾಲೇಜುಗಳು ಮತ್ತು ಕಚೇರಿಗಳಲ್ಲಿ ಹಬ್ಬದ ಸಂಭ್ರಮ ಕಾಣಬೇಕು. ಸರ್ಕಾರಿ ಕಚೇರಿಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಬೇಕು ಎಂದರು.

ರಾಯಚೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ನಗರದಲ್ಲಿ ಶುಚಿತ್ವ ಕಾಣುವಂತೆ ಎಲ್ಲಾ ಪ್ರಮುಖ ರಸ್ತೆಗಳು ಮತ್ತು ವೃತ್ತಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಬೇಕು. ಜನವರಿ 25 ಹಾಗೂ 26ರಂದು ನಗರದ ಪ್ರಮುಖ ವೃತ್ತಗಳಲ್ಲಿ ದೀಪಾಲಂಕಾರ ಮಾಡಬೇಕು ಎಂದರು.

ಆಹ್ವಾನ ಪತ್ರಿಕೆ ಮುದ್ರಣ ಮತ್ತು ವಿತರಣೆ ಆಗಬೇಕು. ಕಾರ್ಯಕ್ರಮವು ಅಚ್ಚುಕಟ್ಟಾಗಿ ಶಿಷ್ಟಾಚಾರದಂತೆ ನಡೆಯುವಂತಾಗಬೇಕು. ಶಿಸ್ತುಬದ್ಧವಾಗಿ ವೇದಿಕೆ ನಿರ್ಮಾಣವಾಗಬೇಕು. ಹೂಕುಂಡಗಳಿಂದ ವೇದಿಕೆಯನ್ನು ಅಲಂಕರಿಸಬೇಕು ಎಂದು ಸೂಚನೆ ನೀಡಿದರು.

ಧ್ವಜಾರೋಹಣ ಪ್ರಯುಕ್ತ ಪಥ ಸಂಚಲನವು ಅಚ್ಚುಕಟ್ಟಾಗಿ ನಡೆಯಬೇಕು. ಪೊಲೀಸ್ ಇಲಾಖೆ, ಅಬಕಾರಿ ಇಲಾಖೆ, ಅಗ್ನಿಶಾಮಕ ದಳ ಸೇರಿದಂತೆ ಕವಾಯತು ತಂಡಗಳನ್ನು ರಚಿಸಬೇಕು. ನುರಿತ ವೈದ್ಯರನ್ನು ಒಳಗೊಂಡ ಚಿಕಿತ್ಸಾ ಆ್ಯಂಬುಲೆನ್ಸ್, ಅಗ್ನಿಶಾಮಕ ವಾಹನ, ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.

ಶಿಷ್ಟಾಚಾರದಂತೆ ಅತಿಥಿ ಗಣ್ಯರನ್ನು ಆಹ್ವಾನಿಸುವುದು ಸೇರಿದಂತೆ ಎಲ್ಲ ರೀತಿಯ ಅಗತ್ಯ ಸಿದ್ಧತೆಗೆ ಕ್ರಮವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿಗಳು, ಬೇರೆ ಬೇರೆ ಇಲಾಖೆಯ ಅಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಿದರು.

ಈ ಸಂದರ್ಭದಲ್ಲಿ ಸಭೆಯಲ್ಲಿ ಡಿವೈಎಸ್ಪಿ ಪ್ರಮಾನಂದ ಎಸ್.ಘೋಡಕೆ, ಹೋರಾಟಗಾರಾರು,ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿ ವರ್ಗದವರು, ಸಂಘಟಕರು ಇದ್ದರು.