ಬೆಳಗಾವಿ ಅಧಿವೇಶನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಿ: ಮೊಹಮ್ಮದ್ ರೋಷನ್

| Published : Nov 21 2024, 01:03 AM IST

ಬೆಳಗಾವಿ ಅಧಿವೇಶನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಿ: ಮೊಹಮ್ಮದ್ ರೋಷನ್
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸಕ್ತ ಸಾಲಿನ ವಿಧಾನಮಂಡಳ ಚಳಿಗಾಲ ಅಧಿವೇಶನ ಡಿ.9ರಿಂದ ನಡೆಯಲಿದೆ. ಅಧಿವೇಶನ ಸಂದರ್ಭದಲ್ಲಿ ಸಮರ್ಪಕ ವಸತಿ, ಸಾರಿಗೆ, ಊಟೋಪಹಾರ ವ್ಯವಸ್ಘೆ ಕಲ್ಪಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಪ್ರಸಕ್ತ ಸಾಲಿನ ವಿಧಾನಮಂಡಳ ಚಳಿಗಾಲ ಅಧಿವೇಶನ ಡಿ.9ರಿಂದ ನಡೆಯಲಿದೆ. ಅಧಿವೇಶನ ಸಂದರ್ಭದಲ್ಲಿ ಸಮರ್ಪಕ ವಸತಿ, ಸಾರಿಗೆ, ಊಟೋಪಹಾರ ವ್ಯವಸ್ಘೆ ಕಲ್ಪಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜರುಗಿದ ವಿಧಾನಮಂಡಳ ಚಳಿಗಾಲ ಅಧಿವೇಶನದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ಬಾರಿಯ ಚಳಿಗಾಲ ಅಧಿವೇಶನ ಸಿದ್ಧತೆಗೆ ಕಡಿಮೆ ಸಮಯಾವಕಾಶವಿದ್ದು, ಅಧಿವೇಶನ ಯಶಸ್ವಿಗಾಗಿ ಅಧಿಕಾರಿಗಳು, ತಮ್ಮ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದರು.

ಅಧಿವೇಶನ ಯಶಸ್ವಿಗಾಗಿ ಈಗಾಗಲೇ ವಸತಿ, ಆಹಾರ, ಸಾರಿಗೆ, ಆರೋಗ್ಯ, ದೂರು ನಿರ್ವಹಣೆ ಸೇರಿದಂತೆ ವಿವಿಧ ಸಮಿತಿ ರಚಿಸಲಾಗಿದೆ. ಸಮಿತಿಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಯಾವುದೇ ಲೋಪದೋಷ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ಅಧಿವೇಶನಕ್ಕೆ ಆಗಮಿಸುವ ಸಚಿವರು, ಹಿರಿಯ ಅಧಿಕಾರಿಗಳು, ಭದ್ರತಾ ಸಿಬ್ಬಂದಿ, ವಾಹನ ಚಾಲಕರಿಗೆ ಸೂಕ್ತ ವಸತಿ, ಊಟ ಹಾಗೂ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಅಧಿವೇಶನಕ್ಕಾಗಿ ಆಗಮಿಸುವ ಸಿಎಂ, ಡಿಸಿಎಂ, ಸಚಿವರಿಗೆ ಶಿಷ್ಟಾಚಾರದಲ್ಲಿ ಯಾವುದೇ ಲೋಪವಾಗದಂತೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ನಿಗಾವಹಿಸಬೇಕು. ಅಧಿವೇಶನಕ್ಕೆ ಆಗಮಿಸುವ ಗಣ್ಯರಿಗೆ ಸೂಕ್ತ ವಸತಿ ವ್ಯವಸ್ಥೆ ಒದಗಿಸಬೇಕು.‌ ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ವಸತಿಗಾಗಿ ಗುರುತಿಸಲಾದ ಹೊಟೇಲ್ ಗಳನ್ನು ಪರಿಶೀಲಿಸಿ, ಮಾಲೀಕರೊಂದಿಗೆ ಚರ್ಚಿಸಿ ಕೊಠಡಿ ಕಾಯ್ದಿರಿಸಬೇಕು. ಅಧಿವೇಶನ ಸಂದರ್ಭದಲ್ಲಿ ಸುವರ್ಣಸೌಧದಲ್ಲಿ ಅಂತರ್ಜಾಲ ಸಂಪರ್ಕದಲ್ಲಿ ಯಾವುದೇ ಅಡೆತಡೆ ಆಗದಂತೆ ಅಗತ್ಯ ಕ್ರಮಗಳನ್ನು ಮುಂಚಿತವಾಗಿಯೇ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.

ವೈದ್ಯಕೀಯ ತಂಡಗಳ ನಿಯೋಜನೆ:

ಜನಪ್ರತಿನಿಧಿಗಳು, ಗಣ್ಯರು, ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಅಧಿವೇಶನಕ್ಕೆ ಆಗಮಿಸಿದ ಎಲ್ಲರ ಆರೋಗ್ಯ ರಕ್ಷಣೆ ಹಾಗೂ ತುರ್ತು ವೈದ್ಯಕೀಯ ಸೌಲಭ್ಯ ಕಲ್ಪಿಸಲು ಅನುಕೂಲವಾಗುವಂತೆ ಎಲ್ಲ ವಸತಿ‌ ಸ್ಥಳ ಮತ್ತು ಸುವರ್ಣ ವಿಧಾನಸೌಧದಲ್ಲಿ ತುರ್ತು ವೈದ್ಯಕೀಯ ತಂಡ ಮತ್ತು ಅಂಬ್ಯುಲೆನ್ಸ್ ನಿಯೋಜಿಸಬೇಕು ಎಂದು ಸೂಚನೆ ನೀಡಿದರು.

ಒಟ್ಟಾರೆಯಾಗಿ ಪ್ರಸಕ್ತ ಸಾಲಿನ‌ ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ಯಾವುದೇ ಲೋಪದೋಷಗಳಿಗೆ ಆಸ್ಪದ‌ ನೀಡಬಾರದು. ಎಲ್ಲ ಇಲಾಖೆಯ ಅಧಿಕಾರಿ, ಸಿಬ್ಬಂದಿ ತಮ್ಮ‌ ಜವಾಬ್ದಾರಿ ಅರಿತು ಅಧಿವೇಶನ ಯಶಸ್ವಿಗೊಳಿಸವೇಕು. ಎಲ್ಲ ಇಲಾಖೆಗಳು, ಸಮಿತಿಗಳು ಮತ್ತು ಅಧಿಕಾರಿಗಳು ಪರಸ್ಪರ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಅಪರ‌ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ವಿಶೇಷ ಜಿಲ್ಲಾಧಿಕಾರಿ ಹರ್ಷ ಶೆಟ್ಟಿ, ಪಾಲಿಕೆ ಆಯುಕ್ತೆ ಶುಭ, ಜಿಪಂ ಮುಖ್ಯ ಯೋಜನಾ ನಿರ್ದೇಶಕ ಗಂಗಾಧರ ದಿವಟರ, ಕಾಡಾ ಆಡಳಿತಾಧಿಕಾರಿ ಸತೀಶಕುಮಾರ್, ಲೊಕೋಪಯೋಗಿ ಇಲಾಖೆ ಅಭಿಯಂತರ ಸೊಬರದ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ ಕಲಾದಗಿ, ಆಹಾರ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ನಾಯಕ, ಡಿಡಿಪಿಐ ಲೀಲಾವತಿ ಹಿರೇಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ‌ ಭಜಂತ್ರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.