ಮಹನಿಯರ ಜಯಂತಿಗೆ ಅಗತ್ಯ ಸಿದ್ಧತೆ ಕೈಗೊಳ್ಳಿ

| Published : Apr 23 2025, 12:40 AM IST

ಸಾರಾಂಶ

ಶಿಷ್ಟಾಚಾರದಂತೆ ಕಾರ್ಯಕ್ರಮ ನಡೆಸುವ ಜತೆಗೆ ಎಲ್ಲ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು.

ಕೊಪ್ಪಳ:

ಜಿಲ್ಲಾಡಳಿತ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಜಿಲ್ಲಾ ಕೇಂದ್ರದಲ್ಲಿ ಮೇ 2ರಂದು ಶಂಕರಾಚಾರ್ಯ ಜಯಂತಿ ಮತ್ತು 4ರಂದು ಭಗೀರಥ ಜಯಂತಿ ಹಾಗೂ ಮೇ 10ರಂದು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಹಮ್ಮಿಕೊಳ್ಳಲಾಗಿದ್ದು, ಈ ಎಲ್ಲ ಮಹನಿಯರ ಜಯಂತಿ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಸಹಾಯಕ ಆಯುಕ್ತರ ಕಚೇರಿಯ ತಹಸೀಲ್ದಾರ್‌ ರಜನಿಕಾಂತ್ ಹೇಳಿದರು.

ಮಂಗಳವಾರ ಸಹಾಯಕ ಆಯುಕ್ತರ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿ, ತಾಲೂಕು ಕೇಂದ್ರ, ಗ್ರಾಮ ಪಂಚಾಯಿತಿ, ಶಾಲಾ-ಕಾಲೇಜು, ವಸತಿ ನಿಲಯಗಳಲ್ಲಿ ಕಡ್ಡಾಯವಾಗಿ ಜಯಂತಿ ಆಚರಿಸಬೇಕು ಎಂದರು.

ಜಿಲ್ಲಾ ಕೇಂದ್ರದಲ್ಲಿ ಮೇ 2ರಂದು ನಡೆಯುವ ಶಂಕರಾಚಾರ್ಯರ ಜಯಂತಿಗೆ ಸಕಲ ಸಿದ್ಧತೆ ಮಾಡಿಕೊಳ್ಳಬೇಕು. ಅಂದು ಬೆಳಗ್ಗೆ 11ಕ್ಕೆ ಶಂಕರ ಸಾಂಸ್ಕೃತಿಕ ಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಸಂಜೆ 5ಕ್ಕೆ ಶಂಕರ ಸಾಂಸ್ಕೃತಿಕ ಭವನದಿಂದ ಗಡಿಯಾರ ಕಂಬ ಮುಖಾಂತರ ಜವಾಹರ ರಸ್ತೆ ಮಾರ್ಗವಾಗಿ ಮರಳಿ ಮೂಲಸ್ಥಳದ ವರೆಗೆ ಶಂಕರಾಚಾರ್ಯ ಭಾವಚಿತ್ರದ ಮೆರವಣಿಗೆ ನಡೆಯಲಿದೆ. ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಮೇ 10ರಂದು ಬೆಳಗ್ಗೆ 11ಕ್ಕೆ ನಗರದ ಕಿನ್ನಾಳ ರಸ್ತೆಯ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಕಾರ್ಯಕ್ರಮ ನಡೆಯಲಿದ್ದು ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳಬೇಕು. ಆಯಾ ಇಲಾಖೆಗಳು ತಮಗೆ ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಸೂಚಿಸಿದರು.

ಶಿಷ್ಟಾಚಾರದಂತೆ ಕಾರ್ಯಕ್ರಮ ನಡೆಸುವ ಜತೆಗೆ ಎಲ್ಲ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕೆಂದು ಸೂಚಿಸಿದ ಅವರು, ಮೇ 4ರಂದು ಭಗೀರಥ ಜಯಂತಿಗೆ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಹೇಳಿದರು.

ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸುರೇಶ ಜಿ., ಆರೋಗ್ಯ ಇಲಾಖೆಯ ಶಿವಾನಂದ ವ್ಹಿ.ಪಿ, ಶಂಕರಾಚಾರ್ಯ ಸಮಾಜದ ಜಿಲ್ಲಾಧ್ಯಕ್ಷ ಡಿ.ವಿ. ಜೋಶಿ, ರವಿ ಪುರೋಹಿತ, ರಮೇಶ, ಕೆ., ಅಶೋಕ, ವಿ ಮತ್ತು ಹನುಮ ರೆಡ್ಡಿ, ಶಂಕರಗೌಡ, ಕಾಶೀನಾಥ್ ರೆಡ್ಡಿ, ವಿರೂಪಾಕ್ಷಪ್ಪ, ನಾಗರಾಜ, ಹಾಗೂ ಭಗೀರಥ ಸಮಾಜದ ಜಿಲ್ಲಾಧ್ಯಕ್ಷ ಯಲ್ಲಪ್ಪ ಗದ್ದಿ, ವೆಂಕಟೇಶ ಬ್ಯಾಡಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.