ಪಹಣಿ ದೋಷ ಮುಕ್ತ ಪಾಂಡವಪುರ ತಾಲೂಕು ಮಾಡಿ: ಎಡಿಸಿ

| Published : Feb 05 2024, 01:45 AM IST

ಪಹಣಿ ದೋಷ ಮುಕ್ತ ಪಾಂಡವಪುರ ತಾಲೂಕು ಮಾಡಿ: ಎಡಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಫೆ.7ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1.30ರ ವರೆಗೆ ಪಾಂಡವಪುರ ಪಟ್ಟಣ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಬೃಹತ್ ಪೌತಿ ಖಾತೆ ಆಂದೋಲನ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಆಂದೋಲನದಲ್ಲಿ ರೈತರು ಮರಣ ಪ್ರಮಾಣ ಪತ್ರ, ವಂಶವೃಕ್ಷ, ಪಹಣಿ ನೀಡಿ ಖಾತೆ ಮಾಡಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರತಾಲೂಕಿನಲ್ಲಿ ಪಹಣಿ ದೋಷ ಮುಕ್ತ ತಾಲೂಕಿನ್ನಾಗಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಸೂಚಿಸಿದರು.

ತಾಲೂಕಿನ ದೊಡ್ಡೆಗೌಡನಕೊಪ್ಪಲಿನ ಶಕ್ತಿಧಾಮದಲ್ಲಿ ಕರ್ನಾಟಕ ಸರ್ಕಾರ, ಕಂದಾಯ ಇಲಾಖೆ, ಗ್ರಾಮ ಆಡಳಿತ ಅಧಿಕಾರಿಗಳ ಸಂಘದಿಂದ ನಡೆದ ಹುಜೂರು ಜಮಾಬಂದಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಫೆ.7ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1.30ರ ವರೆಗೆ ಪಟ್ಟಣ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಬೃಹತ್ ಪೌತಿ ಖಾತೆ ಆಂದೋಲನ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಆಂದೋಲನದಲ್ಲಿ ರೈತರು ಮರಣ ಪ್ರಮಾಣ ಪತ್ರ, ವಂಶವೃಕ್ಷ, ಪಹಣಿ ನೀಡಿ ಖಾತೆ ಮಾಡಿಸಿಕೊಳ್ಳಬೇಕು ಎಂದರು.

ವಿವಾದಗಳಿರುವುದನ್ನು ಬಿಟ್ಟು ಇತರೆ ಪ್ರಕರಣಗಳಿಗೆ ಖಾತೆ ಮಾಡಬೇಕು. ಗಂಡ ಮರಣ ಹೊಂದಿದರೆ ಆತನ ಹೆಂಡತಿ‌ ಹೆಸರಿಗೆ ಖಾತೆ ಮಾಡಬೇಕಿದೆ. ಅದನ್ನು ಬಿಟ್ಟು ಗಂಡು ಅಥವಾ ಹೆಣ್ಣು ಮಕ್ಕಳಿಗೆ ಮಾಡಬಾರದು. ಹೆಂಡತಿ ಬದುಕಿಲ್ಲದಿದ್ದರೆ ಮಕ್ಕಳಿಗೆ ಖಾತೆ ಮಾಡಬಹುದು. ಆದರೆ, ತಾಯಿ ಬದುಕಿದ್ದಾಗಲೇ ಮಕ್ಕಳಿಗೆ ಖಾತೆ ಮಾಡಿಕೊಡಬಾರದು. ಇದು ಗೊಂದಲಗಳಿಗೆ ಅವಕಾಶ ಮಾಡಿಕೊಡಲಿದೆ ಎಂದರು.

ಪಾಂಡವಪುರ ಉಪವಿಭಾಗದ ಕೇಂದ್ರವಾಗಿದೆ. ಕಂದಾಯ ಇಲಾಖೆ ಕೆಲಸ ಕಾರ್ಯಗಳಿಗೆ ದೊಡ್ಡ ಕಟ್ಟಡ ಅವಶ್ಯಕತೆ ಇದೆ. ಜತೆಗೆ ಇಲ್ಲಿ ಸುಸಜ್ಜಿತ ಆಸ್ಪತ್ರೆ, ಕಂದಾಯ ಭವನ, ಕಲಾಮಂದಿರದ ಅವಶ್ಯಕತೆ ಇದೆ. ಕಲಾ ಮಂದಿರಕ್ಕೆ 85 ಲಕ್ಷ ರು. ಹಣ ಇದೆ. ಶಾಸಕರ ಅನುದಾನ ಬಳಕೆ ಮಾಡಿಕೊಂಡು ಪಟ್ಟಣದಲ್ಲಿ ಕಲಾಮಂದಿರ ನಿರ್ಮಿಸಬೇಕಿದೆ ಎಂದರು.

ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೊಸಬರಾಗಿದ್ದು, ಬಹಳ ಉತ್ಸುಕತೆ ಉಳ್ಳವರಾಗಿದ್ದಾರೆ. ಅವರನ್ನು ಬಳಕೆ ಮಾಡಿಕೊಂಡು ಹೆಚ್ಚಿನ‌ ಕೆಲಸ ಮಾಡೋಣ ಎಂದರು.

ಇದೇ ವೇಳೆ ಎಡಿಸಿ ಡಾ.ಎಚ್.ಎಲ್.ನಾಗರಾಜು ಅವರು ಕಂದಾಯ ಇಲಾಖೆ ಕಡತಗಳನ್ನು ಪರಿಶೀಲಿಸಿದರು. ಉಪವಿಭಾಗಾಧಿಕಾರಿ ಎಲ್.ಎಂ.ನಂದೀಶ್, ತಹಸೀಲ್ದಾರ್ ಶ್ರೇಯಸ್, ಗ್ರೇಡ್ 2 ತಹಸೀಲ್ದಾರ್ ಎಸ್.ಸಂತೋಷ್ ಸೇರಿದಂತೆ ಕಂದಾಯ ಇಲಾಖಾಧಿಕಾರಿಗಳು ಇದ್ದರು. ಹಿರಿಯ ಪತ್ರಕರ್ತ ಎನ್.ಕೃಷ್ಣೇಗೌಡ ಹಾಗೂ ತಾಲೂಕು ಮಕ್ಕಳ ಪರಿಷತ್ ಅಧ್ಯಕ್ಷ ಹಾರೋಹಳ್ಳಿ‌ ಧನ್ಯಕುಮಾರ್ ಅವರನ್ನು ಸನ್ಮಾನಿಸಲಾಯಿತು.