ಕನ್ನಡಪ್ರಭ ವಾರ್ತೆ ಹೊಸದುರ್ಗ
ಚುನಾವಣ ಆಯೋಗ ನಡೆಸುತ್ತಿರುವ ಮತ ಪರಿಷ್ಕರಣೆಯ ಬಗ್ಗೆ ಜನರಿಗೆ ಗೊತ್ತಿಲ್ಲ. ಈ ಬಗ್ಗೆ ಬೂತ್ ಮಟ್ಟದ ಏಜೆಂಟರ್‌ಗಳು ಗ್ರಾಮಗಳಿಗೆ ತೆರಳಿ ಜನರಿಗೆ ಅರಿವು ಮೂಡಿಸಬೇಕು ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.ಪಟ್ಟಣದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಮತಪಟ್ಟಿ ಪರಿಷ್ಕರಣೆ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರ್ ಮತದಾನದ ಹಕ್ಕು ನೀಡಿದ್ದಾರೆ ಅದನ್ನು ಬಿಜೆಪಿಯವರು ಕಿತ್ತುಕೊಳ್ಳಲು ಮುಂದಾಗಿದ್ದಾರೆ. ಮತ ಪಟ್ಟಿಯಿಂದ ನಿಮ್ಮ ಹೆಸರು ಕಾಣೆಯಾದರೆ ಇನ್ನು ಮುಂದೆ ಸರ್ಕಾರದ ಯಾವುದೇ ಸೌಲಭ್ಯ ಪಡೆಯಲು ಸಾದ್ಯವಿಲ್ಲ ಎಂದರು.
ಚುನಾವಣಾ ಆಯೋಗದ ಪ್ರಕಾರ ಪ್ರತಿಯೊಬ್ಬ ಪ್ರಜೆಯೂ ಅಧಿಕೃತ ದಾಖಲೆ ನೀಡಿ ಹೊಸದಾಗಿ ಮತಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬೇಕು. ದಾಖಲೆ ನೀಡದ ಮತದಾರರ ಹೆಸರನ್ನು ಮತಪಟ್ಟಿಯಿಂದ ತೆಗೆದು ಹಾಕಲಾಗುವುದು ಇದರಿಂದ ಮತದಾರರ ಹಕ್ಕನ್ನು ಕಿತ್ತುಕೊಂಡಂತಾಗುತ್ತದೆ ಹಾಗಾಗಿ ಕಾಂಗ್ರೆಸ್ ಮುಖಂಡರು, ಬೂತ್‌ಮಟ್ಟದ ಏಜೆಂಟರು ಹಳ್ಳಿಕಟ್ಟೆ, ಹೊಟೆಲ್ ಅಂಗಡಿ ಸಾಲುಗಳಲ್ಲಿ ಕುಳಿತು ಅನಗತ್ಯ ಚರ್ಚೆ ಮಾಡುವ ಬದಲು ತಮ್ಮ ಗ್ರಾಮಗಳಲ್ಲಿ ತಮ್ಮ ಮತದಾರರ ಹೆಸರನ್ನು ಸೇರಿಸುವ ಕೆಲಸ ಮಾಡಬೇಕು ಎಂದರು.ಬಿಜೆಪಿ ಮತ ಪರಿಷ್ಕರಣೆಯ ನೆಪದಲ್ಲಿ ಆಯೋಗವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಮತದಾರರನ್ನು ಮತಪಟ್ಟಿಯಿಂದ ಕೈ ಬಿಡುವ ಹುನ್ನಾರ ನಡೆಸುತ್ತಿದೆ. ಮತಪಟ್ಟಿ ಪರಿಷ್ಕರಣೆಯಾದ ನಂತರ ಗ್ರಾಪಂ, ತಾಪಂ, ಜಿಪಂ, ಪುರಸಭೆ ಚುನಾವಣೆಗಳು ಬರಲಿವೆ.
ಈ ಎಲ್ಲಾ ಸ್ಥರಗಳಲ್ಲಿಯೂ ನಮ್ಮ ಕಾರ್ಯಕರ್ತರು ಗೆಲವು ಸಾಧಿಸಬೇಕಾದರೆ ನಮ್ಮ ಪಕ್ಷದ ಮತದಾರರ ಹೆಸರುಗಳನ್ನು ಮತಪಟ್ಟಿಯಲ್ಲಿ ಉಳಿದುಕೊಳ್ಳುವಂತೆ ನೋಡಿಕೊಳ್ಳಬೇಕಿದೆ ಎಂದರು.
ಆಗ್ನೇಯ ಪದವೀಧರ ಕ್ಷೇತ್ರದ ನಿಯೋಜಿತ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಠೆ ಮಾತನಾಡಿ, ಈ ಬಾಗದಲ್ಲಿ ಆಗ್ನೇಯ ಪದವೀಧರ ಕ್ಷೇತ್ರದಿಂದ ಇಲ್ಲಿಯವರೆಗೂ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿಲ್ಲ ಆದರೆ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು ಜಿಲ್ಲೆಯಲ್ಲಿಯೂ ಕಾಂಗ್ರೆಸ್ ಪಕ್ಷದ ಶಾಸಕರೇ ಇದ್ದಾರೆ ತಾಲೂಕಿನಲ್ಲಿ 5,818 ಜನ ಪಧವೀಧರ ಮತದಾರರಿದ್ದು ಎಲ್ಲಾ ಕಾರ್ಯಕರ್ತರು ಈ ಮತದಾರರನ್ನು ಕಾಂಗ್ರೇಸ್ ಪಕ್ಷಕ್ಕೆ ಮತ ಹಾಕಿಸುವ ಮೂಲಕ ಈ ಬಾರಿ ನಮ್ಮನ್ನು ಗಲ್ಲಿಸಬೇಕು ಎಂದು ಮನವಿ ಮಾಡಿದರು.
ಎಐಸಿಸಿಯಿಂದ ಆಗಮಿಸಿದ್ದ ಚುನಾವಣಾ ವಿಭಾಗದ ಆದಂಖಾನ್ ಮಾತನಾಡಿ, ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಬೇಟೆ ನಾಯಿಯಂತೆ ಕೆಲಸ ಮಾಡುತ್ತಿದೆ. ಮುಂದಿನ 2 ತಿಂಗಳು ಪಕ್ಷದ ಬಿಎಲ್‌ಎಗಳು ಸರಿಯಾಗಿ ಕೆಲಸ ಮಾಡದಿದ್ದರೆ ಕಾಂಗ್ರೆಸ್ ಮುಕ್ತ ಕರ್ನಾಟಕ ಆಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ರಘು, ಗ್ಯಾರಂಟಿ ಯೋಜನೆಯ ಜಿಲ್ಲಾಧ್ಯಕ್ಷ ಶಿವಣ್ಣ, ಗೋತಿಪ್ಪೇಶ್, ಕಾರೇಹಳ್ಳಿ ಬಸವರಾಜ್, ಡಾ ಕೆ ಅನಂತ್, ಆಲ್ತಪ್ ಪಾಷ, ಪದ್ಮನಾಭ, ಲೋಕೇಶಪ್ಪ, ಅರುಣ್ ಗೋವಿಂದಪ್ಪ, ಆರ್ ರಾಜಣ್ಣ, ಎಂಪಿ ಶಂಕರ್ ಮತ್ತಿತರರು ಹಾಜರಿದ್ದರು.