ಬಿಳಿಗಿರಿರಂಗನ ಬೆಟ್ಟದಲ್ಲಿ ಸಂಕ್ರಾಂತಿ ಹಬ್ಬದ ಮಾರನೇ ದಿನ ಬೆಟ್ಟದಲ್ಲಿ ಚಿಕ್ಕತೇರು ನಡೆಯುತ್ತದೆ. ಈ ಬಾರಿ ಜ. ೧೬ ರಂದು ತೇರು ನಡೆಯಲಿದೆ. ರಥರೋಹಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಇಲ್ಲಿ ಭಕ್ತರಿಗೆ ತೊಂದರೆಯಾಗದಂತೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಎಲ್ಲಾ ಇಲಾಖೆಯ ಅಧಿಕಾರಿಗಳಿಗೂ ಶಾಸಕ ಎ.ಆರ್‌. ಕೃಷ್ಣಮೂರ್ತಿ ಸೂಚನೆ ನೀಡಿದರು.

ಸಂಕ್ರಾಂತಿ ರಥೋತ್ಸವದ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕ ಎ.ಆರ್. ಕೃಷ್ಣಮೂರ್ತಿ ಸೂಚನೆ

ಕನ್ನಡಪ್ರಭ ವಾರ್ತೆ ಯಳಂದೂರು

ಬಿಳಿಗಿರಿರಂಗನ ಬೆಟ್ಟದಲ್ಲಿ ಸಂಕ್ರಾಂತಿ ಹಬ್ಬದ ಮಾರನೇ ದಿನ ಬೆಟ್ಟದಲ್ಲಿ ಚಿಕ್ಕತೇರು ನಡೆಯುತ್ತದೆ. ಈ ಬಾರಿ ಜ. ೧೬ ರಂದು ತೇರು ನಡೆಯಲಿದೆ. ರಥರೋಹಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಇಲ್ಲಿ ಭಕ್ತರಿಗೆ ತೊಂದರೆಯಾಗದಂತೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಎಲ್ಲಾ ಇಲಾಖೆಯ ಅಧಿಕಾರಿಗಳಿಗೂ ಶಾಸಕ ಎ.ಆರ್‌. ಕೃಷ್ಣಮೂರ್ತಿ ಸೂಚನೆ ನೀಡಿದರು.

ತಾಲೂಕಿನ ಬಿಳಿಗಿರಿರಂಗನಬೆಟ್ಟದ ಗಣ್ಯರ ವಸತಿ ಗೃಹದಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಬೆಟ್ಟದ ಜಾತ್ರೆಗೆ ಈ ಬಾರಿ ಕೆಎಸ್‌ಆರ್‌ಟಿಸಿಯಿಂದ ಒಟ್ಟು ೧೦೦ ಬಸ್‌ಗಳನ್ನು ಓಡಿಸಲಾಗುತ್ತಿದೆ. ಇದರಲ್ಲಿ ಯಳಂದೂರು ಪಟ್ಟಣದಿಂದ, ಕೊಳ್ಳೇಗಾಲ ಮಾರ್ಗವಾಗಿ ಹಾಗೂ ಚಾಮರಾಜನಗರದಿಂದ ಬಸ್‌ಗಳನ್ನು ಓಡಿಸಲಾಗುವುದು. ಮೈಸೂರು, ಗುಂಡ್ಲುಪೇಟೆಯಿಂದಲೂ ವಿಶೇಷ ಬಸ್‌ಗಳನ್ನು ಓಡಿಸಲಾಗುವುದು. ಇದರೊಂದಿಗೆ ನಾಲ್ಕು ಚಕ್ರದ ವಾಹನಗಳಲ್ಲಿ ಬರುವ ಭಕ್ತರು ಇವರಿಗೆ ನಿಗಧಿಯಾಗಿರು ಸ್ಥಳದಲ್ಲಿ ತಮ್ಮ ವಾಹನವನ್ನು ನಿಲ್ಲಿಸಿ ಇಲ್ಲಿಂದ ದೇಗುಲಕ್ಕೆ ತೆರಳಲು ವಿಶೇಷ ಬಸ್‌ಗಳನ್ನು ಬಿಡಲಾಗುವುದು ಎಂದು ಮಾಹಿತಿ ನೀಡಿದರು.

ಯಳಂದೂರುದಿಂದ ಬೆಟ್ಟಕ್ಕೆ ತೆರಳು ರಸ್ತೆ ಮಾರ್ಗ ಕಿರಿದಾಗಿದೆ. ರಸ್ತೆ ಬದಿ ಕೊರಕಲಾಗಿದೆ. ಇಲ್ಲಿಗೆ ಕಲ್ಲು ಹಾಗೂ ಮಣ್ಣನ್ನು ಹಾಕಿ ಪಿಚ್ಚಿಂಗ್ ಮಾಡಿಸಬೇಕು, ಈ ಕೆಲಸ ಸಮರೋಪಾದಿಯಲ್ಲಿ ನಡೆಯಬೇಕು. ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ ಮೊರಾರ್ಜಿ ವಸತಿ ಶಾಲೆಯ ರಸ್ತೆ ಮಾರ್ಗ ಕಾಮಗಾರಿ ಅಪೂರ್ಣಗೊಂಡಿದ್ದು ತಾತ್ಕಾಲಿಕವಾಗಿ ಶಾಸಕರ ಅನುದಾನದಲ್ಲಿ ೫ ಲಕ್ಷ ರೂ. ವೆಚ್ಚದಲ್ಲಿ ರಸ್ತೆಯನ್ನು ಮೆಟ್ಲಿಂಗ್ ಮಾಡಲು ಸೂಚನೆ ನೀಡಿದರು.

ಈ ಬಾರಿಯೂ ಬೆಟ್ಟಕ್ಕೆ ತೇರಿನ ದಿನ ವಾಹನದ ದಟ್ಟಣೆಯನ್ನು ತಡೆಗಟ್ಟಲು ದ್ವಿಚಕ್ರ, ತ್ರಿಚಕ್ರ ಹಾಗೂ ಗೂಡ್ಸ್ ವಾಹನಗಳನ್ನು ನಿಷೇಧಿಸಲಾಗಿದೆ. ಇದರಲ್ಲಿ ಬರುವ ಭಕ್ತರು ತಾಲೂಕಿನ ಅರಣ್ಯ ಇಲಾಖೆಯ ಗುಂಬಳ್ಳಿ ಚೆಕ್ ಪೋಸ್ಟ್‌ನ ಬಳಿ ತಮ್ಮ ವಾಹನ ನಿಲ್ಲಿಸಿ ಬಸ್‌ಗಳಲ್ಲೇ ತೆರಳಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು.

ತೇರಿನ ನಿಮಿತ್ತ ಬೆಟ್ಟದಲ್ಲಿ ಜ. ೧೪ ರಿಂದ ೧೭ ರವರೆಗೆ ತಾತ್ಕಾಲಿಕ ಆರೋಗ್ಯ ಕೇಂದ್ರ ತೆರೆಯಬೇಕು. ಅಗ್ನಿ ಶಾಮಕ ಸಿಬ್ಬಂದಿ ತಮ್ಮ ವಾಹನದೊಂದಿಗೆ ಸನ್ನದ್ಧರಾಗಿರಬೇಕು, ಬರುವ ಭಕ್ತರಿಗೆ ತತ್ಕಾಲಿಕ ಶೌಚಗೃಹಗಳನ್ನು ನಿರ್ಮಿಸಬೇಕು, ಭಕ್ತರಿಗೆ ಸೂಕ್ತ ಪೊಲೀಸ್ ಬಂದೋಬಸ್ತ್ ನೀಡಬೇಕು.

ಅಪರ ಜಿಲ್ಲಾಧಿಕಾರಿ ಜವರೇಗೌಡ, ಉಪವಿಭಾಗಾಧಿಕಾರಿ ದಿನೇಶ್‌ಕುಮಾರ್ ಮೀನಾ, ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ತಾಲೂಕು ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್, ತಹಸೀಲ್ದಾರ್ ಎಸ್.ಎಲ್. ನಯನ ,ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಡಿವೈಎಸ್‌ಪಿ ಎಂ. ಧರ್ಮೇಂದ್ರ, ಎಇಇ ಪುರುಷೋತ್ತಮ್, ಜೆಇ ಸುರೇಂದ್ರ ಆರೋಗ್ಯ ನಿರೀಕ್ಷಕ ರಾಘವೇಂದ್ರ, ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಎನ್. ಸುರೇಶ್, ಪಾರುಪತ್ತೇದಾರ ರಾಜು, ಶೇಷಾದ್ರಿ, ವ್ಯವಸ್ಥಪನಾ ಸಮಿತಿ ಅಧ್ಯಕ್ಷ ಜೆ. ಶ್ರೀನಿವಾಸ್, ಸದಸ್ಯರಾದ ಗುಂಬಳ್ಳಿ ರಾಜಣ್ಣ, ಕೇತಮ್ಮ, ಸ್ಪೂರ್ತಿ, ವೆಂಕಟರಾಮು, ಸಿದ್ದರಾಜು, ಎಂ. ಸುರೇಶ್, ವಿ. ನಾರಾಯಣಸ್ವಾಮಿ ಮುಖಂಡ ವೆಂಕಟೇಶ್, ಪಿಡಿಒ ಶಶಿಕಲಾ ಗ್ರಾಪಂ ಉಪಾದ್ಯಕ್ಷೆ ಸಾಕಮ್ಮ ಸದಸ್ಯರಾದ ಪ್ರತೀಪ್‌ಕುಮಾರ್ ಇದ್ದರು.

----

೦೩ವೈಎಲ್‌ಡಿ ಚಿತ್ರ೦೧ ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ಗಣ್ಯರ ವಸತಿ ಗೃಹದಲ್ಲಿ ನಡೆದ ಸಂಕ್ರಾಂತಿ ರಥೋತ್ಸವದ ಪೂರ್ವಭಾವಿ ಸಭೆಯಲ್ಲಿ ಶಾಸಕ ಎ.ಆರ್‌. ಕೃಷ್ಣಮೂರ್ತಿ ಮಾತನಾಡಿದರು.