ಸಾರಾಂಶ
ಬಸವಕಲ್ಯಾಣದ ಖೇರ್ಡಾ(ಬಿ) ಗ್ರಾಮದಲ್ಲಿ ವಲಸೆ ಯಾಕ್ರಿ ನಿಮ್ಮೂರಲ್ಲೆ ಉದ್ಯೋಗ ಖಾತ್ರಿ, ದುಡಿಮೆ ಖಾತ್ರಿ ಅಭಿಯಾನಕ್ಕೆ ಚಾಲನೆ ನೀಡಿ ತಾಪಂ ಸಹಾಯಕ ನಿರ್ದೇಶಕ (ನರೇಗಾ) ಸಂತೋಷ ಚವ್ಹಾಣ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕೂಲಿ ಕಾರ್ಮಿಕರು ಸಮರ್ಪಕಾಗಿ ಸದ್ಬಳಕೆ ಮಾಡಿಕೊಳ್ಳಬೇಕೆಂದು ತಾಪಂ ಸಹಾಯಕ ನಿರ್ದೇಶಕ (ನರೇಗಾ) ಸಂತೋಷ ಚವ್ಹಾಣ ಹೇಳಿದರು.ತಾಲೂಕಿನ ಖೇರ್ಡಾ(ಬಿ) ಗ್ರಾಮದಲ್ಲಿ ವಲಸೆ ಯಾಕ್ರಿ ನಿಮ್ಮೂರಲ್ಲೆ ಉದ್ಯೋಗ ಖಾತ್ರಿ, ದುಡಿಮೆ ಖಾತ್ರಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನರೇಗಾ ಯೋಜನೆಯಡಿ ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ನಿರಂತರ ಕೆಲಸ ಒದಗಿಸಿ ವಲಸೆ ತಡೆಯುವ ಉದ್ದೇಶದಿಂದ ತಾಲೂಕಿನಾದ್ಯಂತ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗ್ರಾಮೀಣ ಜನರಿಗೆ ನಿರಂತರ ಕೆಲಸ, ಕೂಲಿ ಆಧಾರಿತ ಕಾಮಗಾರಿ ಸೃಷ್ಟಿಸಿ ಹೆಚ್ಚಿನ ಜನರಿಗೆ ಸ್ಥಳೀಯವಾಗಿ ಉದ್ಯೋಗ ಕಲ್ಪಿಸುವುದಾಗಿದೆ. ವಿಶೇಷಚೇತನರು, ಮಹಿಳೆಯರು, ಹಿರಿಯ ನಾಗರಿಕರು, ಅಲ್ಪಸಂಖ್ಯಾತರ ವರ್ಗಗಳಿಗೆ ಆದ್ಯತೆ ಮೇರೆಗೆ ಉದ್ಯೋಗ ಚೀಟಿ ಮತ್ತು ಕೆಲಸ ಒದಗಿಸುವುದು, ಗ್ರಾಮೀಣ ಪ್ರದೇಶದಲ್ಲಿ ವಲಸೆ ಪ್ರಮಾಣ ತಗ್ಗಿಸುವುದು ಈ ಅಭಿಯಾನದ ಮೂಲ ಉದ್ದೇಶವಾಗಿದೆ ಎಂದರು.ಮಾ.15ರಿಂದ 25ರವರೆಗೆ ಕೂಲಿ ಬೇಡಿಕೆ ಪಡೆದು ಗ್ರಾಪಂಗೆ ಆಯಾ ದಿನದಂತೆ ಸಲ್ಲಿಸಿ ಮಾಹಿತಿಯನ್ನು ಗೂಗಲ್ ಸ್ಪ್ರೆಡ್ ಶೀಟ್‌ನಲ್ಲಿ ಅಪ್‌ಡೆಟ್ ಮಾಡುವುದು, ಮಾ.25ರಿಂದ 31ವರೆಗೆ ಕೂಲಿಕಾರರಿಗೆ ನಮೂನೆ-8ರಲ್ಲಿ ಕೆಲಸಕ್ಕೆ ಹಾಜರಾಗಲು ನೋಟಿಸ್ ಮತ್ತು ನಮೂನೆ 9ರಲ್ಲಿ ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗುವುದು ಎಂದರು.
ಏ.1ರಿಂದ ಕಾಮಗಾರಿ ಪ್ರಾರಂಭಿಸುವುದು, ಎನ್‌ಎಂಆರ್‌ಗಳನ್ನು ಸೃಜನೆ ಮಾಡುವುದು ಮತ್ತು ಮೇ ಅಂತ್ಯದ ವರೆಗೆ ಕೆಲಸ ಒದಗಿಸುವುದು, ಕೂಲಿ ನಿರ್ವಹಿಸಿದ ಕೂಲಿಕಾರರಿಗೆ ಕೂಲಿ ಹಣ ಪಾವತಿಗಾಗಿ ಸಕಾಲದಲ್ಲಿ ಎಫ್‌ಟಿಓಗಳನ್ನು ಸೃಜಿಸಲಾಗುವುದು. ಆದ್ದರಿಂದ ಪ್ರತಿಯೊಬ್ಬರು ಇದರ ಲಾಭ ಪಡೆದುಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಪಿಡಿಒ ರತ್ನಪ್ಪಾ, ಐಇಸಿ ಸಂಯೋಜಕ ವೀರಾರೆಡ್ಡಿ, ಟಿಎಗಳಾದ ಸುರೇಶ ಜಾನ್, ಅವಿನಾಶ, ಡಿಇಒ ರುಕ್ಮಿಣಿ, ಜೆಕೆಎಂ ನಿರ್ಮಲಾ ಸೇರಿದಂತೆ ಕಾರ್ಮಿಕರು ಇದ್ದರು.