ಶಾಲೆಗಳು ಮಕ್ಕಳ ಸುರಕ್ಷಿತ ತಾಣವಾಗಲಿ

| Published : Sep 19 2024, 01:52 AM IST

ಸಾರಾಂಶ

ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌಜನ್ಯವನ್ನು ತಡೆಗಟ್ಟುವ ಹಾಗೂ ಶಾಲೆಯನ್ನು ಮಕ್ಕಳ ಸುರಕ್ಷಿತ ತಾಣವನ್ನಾಗಿ ಪರಿವರ್ತಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಶಾಲೆಗಳಲ್ಲಿ ಕಡ್ಡಾಯವಾಗಿ ಮಕ್ಕಳ ಸುರಕ್ಷತಾ ಸಮಿತಿ ರಚಿಸಬೇಕು ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಾ. ಕೆಟಿ ತಿಪ್ಪೇಸ್ವಾಮಿ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌಜನ್ಯವನ್ನು ತಡೆಗಟ್ಟುವ ಹಾಗೂ ಶಾಲೆಯನ್ನು ಮಕ್ಕಳ ಸುರಕ್ಷಿತ ತಾಣವನ್ನಾಗಿ ಪರಿವರ್ತಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಶಾಲೆಗಳಲ್ಲಿ ಕಡ್ಡಾಯವಾಗಿ ಮಕ್ಕಳ ಸುರಕ್ಷತಾ ಸಮಿತಿ ರಚಿಸಬೇಕು ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಾ. ಕೆಟಿ ತಿಪ್ಪೇಸ್ವಾಮಿ ಹೇಳಿದರು.ಅವರು ನಗರದ ಕನ್ನಡ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ಪ್ರಾಥಮಿಕ ಶಾಲೆಯ ಪ್ರಧಾನ ಶಿಕ್ಷಕರಿಂದ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಕ್ಕಳ ರಕ್ಷಣೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವಾರು ಕಾಯ್ದೆಗಳನ್ನು ಜಾರಿಗೆ ತಂದಿದೆ. ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ, ಕಿರುಕುಳವನ್ನು ತಪ್ಪಿಸಲು ಪೋಕ್ಸೋ ಕಾಯ್ದೆ ಜಾರಿಗೆ ತಂದಿದೆ. ಈ ಕಾಯ್ದೆಯನ್ನು 2016ರಲ್ಲಿಯೇ ಜಾರಿಗೆ ಬಂದಿದ್ದರೂ ಸಹ ನಿರೀಕ್ಷಿತ ಮಟ್ಟದಲ್ಲಿ ಅನುಷ್ಠಾನ ಆಗಿಲ್ಲ. ಮುಂದಿನ ಆರು ತಿಂಗಳ ಒಳಗಾಗಿ ಕರ್ನಾಟಕದ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಲ್ಲೂ ಕೂಡ ಮಕ್ಕಳ ರಕ್ಷಣಾ ನೀತಿ 2016ರನ್ನು ಕಡ್ಡಾಯವಾಗಿ ಅನುಷ್ಠಾನ ಆಗಬೇಕೆಂದು ಹೈಕೋರ್ಟ್ ನಿರ್ದೇಶನ ನೀಡಿದೆ. ಮುಖ್ಯವಾಗಿ ಶಾಲೆಗಳಲ್ಲಿ ನಮ್ಮ ಶಾಲೆಯ ಮಕ್ಕಳ ರಕ್ಷಣ ನೀತಿ ಅಳವಡಿಸಿಕೊಳ್ಳಬೇಕು. ಸಮಿತಿಯ ಅಧ್ಯಕ್ಷರು ಶಾಲೆಯ ಮುಖ್ಯ ಶಿಕ್ಷಕರು, ಇಬ್ಬರು ಶಿಕ್ಷಕರು ಸದಸ್ಯರಾಗಬೇಕು. ಇದರಲ್ಲಿ ಒಬ್ಬರು ಮಹಿಳೆಯರಾಗಬೇಕು. ಮೂವರು ಪೋಷಕರನ್ನು, ಎಸ್.ಡಿ.ಎಂ.ಸಿ, ಅಧ್ಯಕ್ಷರು, ವೈದ್ಯರು, ಹಾಗೂ ವಿದ್ಯಾರ್ಥಿಗಳನ್ನು ಒಳಗೊಂಡು ಸಮಿತಿ ರಚಿಸಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ನಡಾವಳಿ ನಡೆಸಿ ದಾಖಲು ಮಾಡಬೇಕು. ಶಾಲೆಯಲ್ಲಿ ಸಲಹಾ ಪೆಟ್ಟಿಗೆ ಇಡಬೇಕು. ಇದರಲ್ಲಿ ಬಂದ ವಿಷಯಗಳನ್ನು ಈ ಸಮಿತಿಯಲ್ಲಿ ಚರ್ಚಿಸಬೇಕು ಎಂದರು.ನಿವೃತ್ತ ಪ್ರಾಂಶುಪಾಲ ಡಾ. ಪಿ.ಎಚ್ ಮಹೇಂದ್ರಪ್ಪ ಮಾತನಾಡಿ ಸಮಾಜದಲ್ಲಿ ಮೌಲ್ಯಗಳು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿವೆ. ಸಾಮಾಜಿಕ ಮೌಲ್ಯಗಳು ಇಲ್ಲದಂತಾಗಿದೆ. ಅವಿಭಕ್ತ ಕುಟುಂಬಗಳ ನಾಶವೇ ಮೌಲ್ಯಗಳ ನಾಶಕ್ಕೆ ಕಾರಣ. ಇದರಿಂದ ಅನೇಕ ಸಮಸ್ಯೆಗಳು ತಲೆದೋರುತ್ತಿವೆ. ಆದುದರಿಂದ ಮೌಲ್ಯ ಶಿಕ್ಷಣ ಮನುಷ್ಯನ ಆಂತರಿಕ ಆವೇಗಗಳನ್ನು ನಿಯಂತ್ರಿಸಲು ಸಹಕಾರಿ. ಶಿಕ್ಷಕರಿಗೆ ನೈತಿಕ ಆಧ್ಯಾತ್ಮಿಕ ಯೋಗ ಶಿಕ್ಷಣ ನೀಡಬೇಕೆಂದು ಕರೆ ನೀಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ಕೃಷ್ಣಪ್ಪ ಮಾತನಾಡಿ ಶಿಕ್ಷಕರು ಶಾಲೆಗಳಲ್ಲಿ ಮಕ್ಕಳ ಮೇಲೆ ದೌರ್ಜನ್ಯ ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲೆದೆ. ಮಕ್ಕಳು ದೇವರಿದ್ದಂತೆ ಅವರ ಸಂರಕ್ಷಣೆಯ ಜವಾಬ್ದಾರಿ ಮತ್ತು ಅವರ ಭವಿಷ್ಯದ ಮಾರ್ಗದರ್ಶಕರು ನೀವಾಗಿದ್ದೀರಿ. ನೈತಿಕವಾಗಿ ಮಕ್ಕಳ ಬದುಕನ್ನು ರೂಪಿಸಿ ಎಂದು ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಬಿಪಿ ಪಾಂಡುರಂಗಯ್ಯ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಆ ಜೀವ ಸದಸ್ಯರಾಗಬೇಕೆಂದು ಕನ್ನಡವನ್ನು ಉಳಿಸಿ ಬೆಳೆಸಬೇಕು ಎಂದು ಕರೆದರು. ಕಾರ್ಯಕ್ರಮದಲ್ಲಿ ಬಿಅರ್ಸಿ ಮಂಜಪ್ಪ, ಕರಿಯಣ್ಣ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಹನುಮಂತರಾಜು, ಎಲ್ಲಾ ಶಾಲೆಯ ಮುಖ್ಯ ಶಿಕ್ಷಕರು ಭಾಗವಹಿಸಿದ್ದರು.

17ಶಿರಾ1: ಶಿರಾ ನಗರದ ಕನ್ನಡ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ಪ್ರಾಥಮಿಕ ಶಾಲೆಯ ಪ್ರಧಾನ ಶಿಕ್ಷಕರಿಂದ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮವನ್ನು ಡಾ.ಪಿ.ಎಚ್.ಮಹೇಂದ್ರಪ್ಪ ಉದ್ಘಾಟಿಸಿದರು.