ಹೊರ ಜಿಲ್ಲೆ, ರಾಜ್ಯದ ಕಾರ್ಮಿಕರ ಸ್ಕ್ರೀನಿಂಗ್ ಕಡ್ಡಾಯ ಮಾಡಿ: ಡಾ.ಪ್ರಶಾಂತ್

| Published : Jun 28 2024, 12:48 AM IST

ಹೊರ ಜಿಲ್ಲೆ, ರಾಜ್ಯದ ಕಾರ್ಮಿಕರ ಸ್ಕ್ರೀನಿಂಗ್ ಕಡ್ಡಾಯ ಮಾಡಿ: ಡಾ.ಪ್ರಶಾಂತ್
Share this Article
  • FB
  • TW
  • Linkdin
  • Email

ಸಾರಾಂಶ

ಕೆಲಸಗಳಿಗೆ ಹೊರ ಜಿಲ್ಲೆ ಹಾಗೂ ಇತರ ಕಡೆಗಳಿಂದ ಬರುವ ಕಾರ್ಮಿಕರಿಗೆ ಕಡ್ಡಾಯವಾಗಿ ಸ್ಕ್ರೀನಿಂಗ್ ಹಾಗೂ ರಕ್ತ ಪರೀಕ್ಷೆ ಮಾಡಿಸಿ ಅವರ ಮಾಹಿತಿಯನ್ನು ಜಿಲ್ಲಾಸ್ಪತ್ರೆಗೆ ನೀಡಬೇಕು ಎಂದು ಡಾ.ಪ್ರಶಾಂತ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ನಗರಸಭಾ ವ್ಯಾಪ್ತಿಯ ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಮಳೆಗಾಲದಲ್ಲಿ ಹರಡಬಹುದಾದ ಮಲೇರಿಯಾ, ಫೈಲೇರಿಯಾ, ಡೆಂಘೀ, ಚಿಕೂನ್ ಗುನ್ಯ ಹಾಗೂ ಸಾಂಕ್ರಮಿಕ ರೋಗಗಳ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಕುರಿತು ಬಿಲ್ಡರ್ಸ್ ಅಸೋಸಿಯೇಷನ್ ಮತ್ತು ನಗರಸಭೆಯು ಆರೋಗ್ಯ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಯೊಂದಿಗೆ ಸಭೆಯು ಇತ್ತೀಚಿಗೆ ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ್ ಮಾತನಾಡಿ, ಮಳೆಗಾಲದ ಸಂದರ್ಭದಲ್ಲಿ ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ನೀರು ನಿಂತು ಸಾಂಕ್ರಮಿಕ ರೋಗಗಳು ಹರಡುವ ಸಂಭವವಿದ್ದು, ಈ ಕುರಿತು ಮುಂಜಾಗೃತಾ ಕ್ರಮ ಕೈಗೊಳ್ಳುವ ಉದ್ದೇಶದಿಂದ ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಸುತ್ತ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು ಎಂದರು.

ಕೆಲಸಗಳಿಗೆ ಹೊರ ಜಿಲ್ಲೆ ಹಾಗೂ ಇತರ ಕಡೆಗಳಿಂದ ಬರುವ ಕಾರ್ಮಿಕರಿಗೆ ಕಡ್ಡಾಯವಾಗಿ ಸ್ಕ್ರೀನಿಂಗ್ ಹಾಗೂ ರಕ್ತ ಪರೀಕ್ಷೆ ಮಾಡಿಸಿ ಅವರ ಮಾಹಿತಿಯನ್ನು ಜಿಲ್ಲಾಸ್ಪತ್ರೆಗೆ ನೀಡಬೇಕು. ಕಟ್ಟಡ ನಿರ್ಮಾಣ ಸ್ಥಳದಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಿ ರೋಗ ಹರಡುವಿಕೆಗೆ ಕಾರಣವಾಗುವ ಅಂಶಗಳ ಬಗ್ಗೆ ಮುಂಜಾಗ್ರತೆ ವಹಿಸಬೇಕು. ಯಾವುದೇ ಜ್ವರ ಅಥವಾ ಆರೋಗ್ಯ ಸಮಸ್ಯೆ ಕಂಡು ಬಂದಲ್ಲಿ ತಕ್ಷಣ ಹತ್ತಿರದ ವೈದ್ಯರನ್ನು ಸಂಪರ್ಕಿಸಬೇಕು ಎಂದರು.

ಸಭೆಯಲ್ಲಿ ಪೌರಾಯುಕ್ತ ರಾಯಪ್ಪ ಮಾತನಾಡಿ, ಯಾವುದೇ ಪ್ರದೇಶದಲ್ಲಿ ಮಲೇರಿಯಾ, ಫೈಲೇರಿಯಾ, ಡೆಂಘೀ, ಚಿಕೂನ್ ಗುನ್ಯ ಪ್ರಕರಣಗಳು ಹರಡುವುದಕ್ಕೆ ಕಾರಣವಾದ ಬಿಲ್ಡರ್ಸ್ ಗಳ ಪರವಾನಿಗೆಯನ್ನು ರದ್ದುಗೊಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ನಗರಸಭೆಯ ಪರಿಸರ ಅಭಿಯಂತರ ಸ್ನೇಹ ಕೆ.ಎಸ್, ಜಿಲ್ಲಾ ರೋಗಾಣು ಶಾಸ್ತ್ರಜ್ಞೆ ಮುಕ್ತ, ಪ್ರಭಾರ ಆರೋಗ್ಯ ನಿರೀಕ್ಷಕರಾದ ಮನೋಹರ್, ಸುರೇಂದ್ರ ಹೋಬಳಿದಾರ್, ಹರೀಶ್ ಬಿಲ್ಲವ, ಸೂಪರ್ ವೈಸರ್‌ಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.