ಸಾರಾಂಶ
ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮದಲ್ಲಿ ಕುಲಸಚಿವೆ ಸಲಹೆ
ಕನ್ನಡಪ್ರಭ ವಾರ್ತೆ ತುಮಕೂರುಸಾಧಕರು ಸಾವಿರಕ್ಕೆ ಒಬ್ಬರು, ವಿದ್ಯಾರ್ಥಿಗಳು ಸಾವಿರಕ್ಕೆ ಒಬ್ಬ ಸಾಧಕರಾಗಬೇಕಾದರೆ ಡಾ.ಬಿ.ಆರ್. ಅಂಬೇಡ್ಕರ್, ಬುದ್ಧ, ಬಸವ, ಕುವೆಂಪು ಮುಂತಾದ ದಾರ್ಶನಿಕರನ್ನು ಆದರ್ಶವಾಗಿಟ್ಟುಕೊಂಡು ಹೆಚ್ಚು ಹೆಚ್ಚು ಅಧ್ಯಯನ ಮಾಡಬೇಕೆಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವೆ ನಹೀದಾ ಜಮ್ ಜಮ್ ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತುಮಕೂರು ವಿಶ್ವವಿದ್ಯಾನಿಲಯ, ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ, ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆ, ಮಧುಗಿರಿ ಟೌನ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಹಿಳೆಯರಿಗೆ ಯಾವುದೇ ಹೋರಾಟ ಮಾಡದೆಯೇ ಮತದಾನ ಮತ್ತು ಎಲ್ಲಾ ರೀತಿಯ ಸ್ವಾತಂತ್ರ್ಯದ ಸಿಕ್ಕಿರುವುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಂದ. ಇದನ್ನು ಈ ನೆಲದ ಹೆಣ್ಣು ಮಕ್ಕಳು ಮರೆಯದೇ ಆದರ್ಶಯುತ ಜೀವನ ರೂಪಿಸಿಕೊಳ್ಳುವುದರ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದರು.
ತುಮಕೂರು ವಿಶ್ವವಿದ್ಯಾನಿಲಯ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಬಸವರಾಜು ಮಾತನಾಡಿ, ಭಾರತದ ಸಂವಿಧಾನ ಸರ್ವಶ್ರೇಷ್ಠ ಸಂವಿಧಾನವಾಗಿದ್ದು, ಈ ದೇಶದ ಸಮಸ್ತ ನಾಗರಿಕರಿಗೂ ಸ್ವಾತಂತ್ರ್ಯ, ಸಮಾನತೆ, ಬ್ರಾತೃತ್ವ, ಸಾಮಾಜಿಕ ನ್ಯಾಯ ಮುಂತಾದ ಅತ್ಯುನ್ನತ ಮೌಲ್ವಿಕ ಅಂಶಗಳನ್ನು ಮತ್ತು ಸುದೀರ್ಘ ಕಾನೂನುಗಳ ರೂಪುರೇಷೆಗಳನ್ನು ಈ ನೆಲದಲ್ಲಿ ಸದಾ ಚಿಗುರೊಡೆಯುವಂತೆ ಮಾಡಿ ಎಲ್ಲಾ ಜನರಿಗೂ ಸಮಾನತೆ ಆಶಯಗಳನ್ನು ರೂಪಿಸುವುದಾಗಿದೆ. ಸಿದ್ಧಾಂತ ಮತ್ತು ಆಶಯಗಳ ಕಾರಣದಿಂದ ಡಾ.ಬಿ.ಆರ್. ಅಂಬೇಡ್ಕರ್ ಅವರು ವಿಶ್ವ ನಾಯಕರಾಗಿದ್ದಾರೆ ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್ ಮಾತನಾಡಿ, ಸಂವಿಧಾನದ ಪ್ರಸ್ತಾವನೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸುವುದರ ಜೊತೆಗೆ ಕರ್ನಾಟಕ ಸರ್ಕಾರದ ಆಶಯದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಂಬೇಡ್ಕರ್ ಓದು ಕಾರ್ಯಕ್ರಮವನ್ನು ಕಳೆದ ನಾಲ್ಕು ವರ್ಷಗಳಿಂದ ವಿವಿಧ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತಲುಪಿಸುವ ಪ್ರಯತ್ನವನ್ನು ಮಾಡುತ್ತಿದ್ದು, ಪಠ್ಯೇತರ ಚಟುವಟಿಕೆಗಳಾದ ಪ್ರಬಂಧ, ಚರ್ಚಾಸ್ಪರ್ಧೆ, ರಸಪ್ರಶ್ನೆ, ಕವನ ವಾಚನ ಮುಂತಾದ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿ ಅವರಲ್ಲಿರುವ ಪ್ರತಿಭೆಗೆ ಪ್ರೋತ್ಸಾಹ ನೀಡಿ ಸಮಾಜದ ಸಮಸ್ಯೆಗಳನ್ನು ಅರ್ಥೈಸಿ ಅಂಬೇಡ್ಕರ್ ಅವರ ಆಶಯಗಳನ್ನು ತಿಳಿಸುವುದೇ ಆಗಿದೆ ಎಂದರು.
ಕಾರ್ಯಕ್ರಮದಲ್ಲಿ ಜನಪದ ಗಾಯಕರು ಹಾಗೂ ನಿವೃತ್ತ ಪ್ರಾಧ್ಯಾಪಕ ಶಶಿಕುಮಾರ್ ಎಸ್., ಡಾ. ಮಂಜುನಾಥ್ ಬುಡಸನಹಳ್ಳಿ, ಮಧುಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯುಎಸಿ ಸಂಚಾಲಕ ಡಾ. ಶ್ರೀನಿವಾಸಪ್ಪ, ತುಮಕೂರು ವಿಶ್ವವಿದ್ಯಾನಿಲಯದ ಸಂಶೋಧನಾ ಸಹಾಯಕ ಡಾ. ಲಕ್ಷ್ಮಿರಂಗಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿಗಳಾದ ಡಿ.ವಿ. ಸುರೇಶ್ ಕುಮಾರ್, ದರ್ಶನ್ ಎಸ್.ಎನ್. ಭಾಗವಹಿಸಿದ್ದರು.ಫೋಟೊಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮವನ್ನು ತುಮಕೂರು ವಿವಿ ಕುಲಸಚಿವೆ ನಹೀದಾ ಜಮ್ ಜಮ್ ಉದ್ಘಾಟಿಸಿ ಮಾತನಾಡಿದರು. ಜತೆಗೆ ಇನ್ನಿತರ ಉಪನ್ಯಾಸಕರು ಇದ್ದರು.