ಸರ್ಕಾರಿ ಕಾಲೇಜಿಗೆ ಸೇರುವ ವಿದ್ಯಾರ್ಥಿಯ ಭವಿಷ್ಯವನ್ನು ಉಜ್ವಲಗೊಳಿಸಲು ನೀಟ್. ಸಿಇಟಿ ಮತ್ತು ಸ್ಪರ್ಧಾತ್ಮಕ ಪರಿಕ್ಷೆಗಳಿಗೆ ತರಬೇತಿ ನೀಡಲು ಕ್ರಮವಹಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ದ್ವಿತೀಯ ಪಿಯು ಫಲಿತಾಂಶದಲ್ಲಿ ಗಣನೀಯ ಹೆಚ್ಚಳವಾಗಿದೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪೋಷಕರು ತಮ್ಮ ಮಕ್ಕಳನ್ನು ದಾಖಲಿಸಿ ಸರ್ಕಾರಿ ಪಿಯು ಕಾಲೇಜುಗಳನ್ನು ಮುಚ್ಚದಂತೆ ನೋಡಿಕೊಳ್ಳಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಸಿ.ಚಲುವಯ್ಯ ಹೇಳಿದರು.ಪಟ್ಟಣದಲ್ಲಿ ತಾಲೂಕು ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಸರ್ಕಾರಿ ಶಾಲೆ ಕಾಲೇಜುಗಳನ್ನು ಉಳಿಸಿ ಬೆಳೆಸಲು ಸರ್ಕಾರ ಹತ್ತು ಹಲವು ಕ್ರಮಗಳನ್ನು ಕೈಗೊಂಡಿದೆ ಎಂದರು.
ಈ ವರ್ಷದಿಂದ ಪಿಯು ಮಕ್ಕಳಿಗೂ ಉಚಿತ ಪುಸ್ತಕ, ನೋಟ್ ಬುಕ್, ಉಪಾಹಾರ ಯೋಜನೆಗಳನ್ನು ಜಾರಿ ಮಾಡಲು ನಿರ್ಧರಿಸಿದೆ. ಖಾಲಿ ಇರುವ ಹುದ್ದೆಗಳಿಗೆ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಆದೇಶ ನೀಡಿದೆ ಎಂದರು.ಸರ್ಕಾರಿ ಕಾಲೇಜಿಗೆ ಸೇರುವ ವಿದ್ಯಾರ್ಥಿಯ ಭವಿಷ್ಯವನ್ನು ಉಜ್ವಲಗೊಳಿಸಲು ನೀಟ್. ಸಿಇಟಿ ಮತ್ತು ಸ್ಪರ್ಧಾತ್ಮಕ ಪರಿಕ್ಷೆಗಳಿಗೆ ತರಬೇತಿ ನೀಡಲು ಕ್ರಮವಹಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ದ್ವಿತೀಯ ಪಿಯು ಫಲಿತಾಂಶದಲ್ಲಿ ಗಣನೀಯ ಹೆಚ್ಚಳವಾಗಿದೆ ಎಂದರು.
ಕಡಿಮೆ ಶುಲ್ಕ, ಗುಣಮಟ್ಟದ ಶಿಕ್ಷಣ ನೀಡುತ್ತಿರುವದರಿಂದ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಪಿಯು ಕಾಲೇಜಿಗೆ ದಾಖಲಾತಿ ಮಾಡುವ ಮೂಲಕ ಇಲಾಖೆಗೆ ಸಹಕಾರ ನೀಡಬೇಕು ಎಂದು ಕೋರಿದರು.ಮೈಸೂರು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ನಾಗಮ್ಮ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಚೆಲುವಯ್ಯ ಅವರು ಮಂಡ್ಯ ಜಿಲ್ಲೆಯ ಡಿಡಿಪಿಯು ಆಗಿ ಉತ್ತಮ ಕೆಲಸ ಮಾಡಿದ್ದಾರೆ. ದ್ವಿತೀಯ ಪಿಯು ಫಲಿತಾಂಶ ಹೆಚ್ಚಳ ಮತ್ತು ಶೈಕ್ಷಣೀಕ ಸುಧಾರಣೆಗೆ ಶ್ರಮಿಸಿದ್ದಾರೆಯ ಮಂಡ್ಯ ಜಿಲ್ಲೆಯಲ್ಲಿ ಉತ್ತಮ ಹೆಸರು ಗಳಿಸಿದ್ದಾರೆ ಎಂದರು.
ಅವರು ಆಡಳಿತಾತ್ಮಕವಾಗಿ ಮತ್ತು ಶೈಕ್ಷಣಿಕವಾಗಿ ಅವರು ಕೈಗೊಂಡ ಕ್ರಮಗಳು ಬೇರೆ ಜಿಲ್ಲೆಗೂ ಮಾದರಿಯಾಗಿವೆ. ಈ ಕಾರ್ಯ ವೈಖರಿ ಮೆಚ್ಚಿ ಅರ್ಜಿ ಹಾಕದಿದ್ದರೂ ಸರ್ಕಾರ ಸರ್ವೋತ್ತಮ ಪ್ರಶಸ್ತಿಗೆ ಆಯ್ಕೆ ಮಾಡಿ ಗೌರವಿಸಿದೆ. ಈ ತಿಂಗಳ ಅಂತ್ಯಕ್ಕೆ ನಿವೃತ್ತಿಯಾಗುತ್ತಿದ್ದು, ತಾಲೂಕುಕಿನ ಪಿಯು ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಗೌರವ ಸಮರ್ಪಣೆ ನಡೆಸಿರುವದು ಸಂತಸದ ವಿಚಾರ ಎಂದರು.ಕಾರ್ಯಕ್ರಮದಲ್ಲಿ ಪ್ರಾಂಶುಪಾಲರ ಸಂಘದ ತಾಲೂಕು ಅಧ್ಯಕ್ಷ ಬೂಕನಕೆರೆ ಕಾಲೇಜಿನ ಪ್ರಾಂಶುಪಾಲ ಕೆಂಪರಾಜು ಅಧ್ಯಕ್ಷತೆ ವಹಿಸಿದ್ದರು. ಪಟ್ಟಣದ ನೋಡಲ್ ಕಾಲೇಜಿನ ಪ್ರಾಂಶುಪಾಲ ಕೆ.ಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಬಾಲಕೃಷ್ಣ, ಸಹದೇವ್, ಕೃಷ್ಣಪ್ಪ, ಪುಲಿಗೆರಯ್ಯ, ಶಫಿ, ಮಲ್ಲಿಕಾರ್ಜುನ್, ಮಂಜುನಾಥ್, ಕುಮಾರಸ್ವಾಮಿ ರಾಜೇಗೌಡ, ವೆಂಕಟರಾಮು, ಬಿ.ಮಂಜುನಾಥ್, ಕತ್ತರಘಟ್ಟ ವಾಸು, ವೆಂಕಟೇಗೌಡ, ಆಂಟೋನಿ, ರಘುಪತಿ, ಕದಂಬ ಮಂಜುನಾಥ್, ಪ್ರಮುಖರಾದ ತಾಲೂಕು ಉಪನ್ಯಾಸಕರ ಸಂಘದ ಅಧ್ಯಕ್ಷ ಬಿ.ಎಲ್.ಮಂಜುನಾಥ್, ಸರ್ಕಾರಿ ನೌಕರ ಸಂಘದ ಜಂಟಿ ಕಾರ್ಯದರ್ಶಿ ಎಚ್.ಟಿ.ಗಿರೀಶ್, ಬಡ್ತಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಡಿ.ಆರ್.ರಮೇಶ್, ಶಾಂತಮ್ಮ ಚಲುವಯ್ಯ ಸೇರಿದಂತೆ ಹಲವರು ಇದ್ದರು ಭಾಗವಹಿಸಿದ್ದರು.