ಮಕ್ಕಳು ಶಾಲೆಗೆ ಗೈರಾಗದಂತೆ ನೋಡಿಕೊಳ್ಳಿ

| Published : Jul 08 2024, 12:31 AM IST

ಮಕ್ಕಳು ಶಾಲೆಗೆ ಗೈರಾಗದಂತೆ ನೋಡಿಕೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಕಮಲನಗರ ತಾಲೂಕಿನ ತೋರಣಾ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಅಯೋಗದ ಸದಸ್ಯ ಶಶಿಧರ ಕೊಸಂಬೆ ಭೇಟಿ ನೀಡಿದರು.

ಕನ್ನಡಪ್ರಭ ವಾರ್ತೆ ಕಮಲನಗರ

ತರಗತಿಗಳಿಗೆ ಸತತ ಗೈರು ಹಾಜರಿರುವ ಮಕ್ಕಳ ಬಗ್ಗೆ ಶಿಕ್ಷಕರು, ಸಂಬಂಧಿಸಿದ ಪಾಲಕರಿಗೆ ಸೂಚನೆ ನೀಡಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೊಸಂಬೆ ತಿಳಿಸಿದರು.

ಶನಿವಾರ ತಾಲೂಕಿನ ತೋರಣಾ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ, ಶಾಲೆಯ ತರಗತಿ ಕೋಣೆಗಳನ್ನು ಪರಿಶೀಲಿಸಿ ಮಕ್ಕಳೊಂದಿಗೆ ಪಾಠಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ ಚರ್ಚಿಸಿದರು.

ಒಂದು ವೇಳೆ ಗೈರಿಗೆ ಸಕಾರಣ ನೀಡದೆ ಇದ್ದಲ್ಲಿ ಎಸ್‌ಡಿಎಂಸಿ ಸದಸ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಸ್ಥಳೀಯರೊಂದಿಗೆ ಸೇರಿ ಸಭೆ ಕರೆದು ಚರ್ಚಿಸಬೇಕು. ಈ ಬಗ್ಗೆ ವಿವರಣೆ ಪಡೆದು ಮುಂದಿನ ಶಿಸ್ತು ಕ್ರಮ ಜರುಗಿಸುವ ಬಗ್ಗೆ ಶಿಕ್ಷಣಾಧಿಕಾರಿಗಳಿಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ಪ್ರತಿ ಶಾಲೆಯಲ್ಲಿ ಮುಖ್ಯಗುರು, ಪಾಲಕ, ಮಕ್ಕಳ ರಕ್ಷಣಾಧಿಕಾರಿ ಮತ್ತು ಮಕ್ಕಳನ್ನು ಒಳಗೊಂಡ ಸಲಹಾ ಸಮಿತಿ ರಚಿಸಬೇಕು ಹಾಗೂ ಶಾಲೆಗಳಲ್ಲಿ ವಿದ್ಯಾರ್ಥಿ ಕ್ಲಬ್‌ ಸ್ಥಾಪಿಸಬೇಕು. ಶಾಲೆಯ ಗೋಡೆಗಳ ಮೇಲೆ ತಾಲೂಕು ಸಹಾಯವಾಣಿ, ಪೊಲೀಸ್ ಸಹಾಯವಾಣಿಯ ನಂಬರ್‌ಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ, ವಲಯ ಸಂಪನ್ಮೂಲ ವ್ಯಕ್ತಿಗಳ ಹೆಸರು ಮತ್ತು ಮೊಬೈಲ್ ಸಂಖ್ಯೆ ಬರೆಸಲು ಸೂಚಿಸಿದರು.

ಪೊಲೀಸ್ ಇಲಾಖೆ ಮಕ್ಕಳ ಹಕ್ಕುಗಳ ಪ್ರತೇಕ ಘಟಕ ಸ್ಥಾಪಿಸಿ ಜನಜಾಗೃತಿ ಮೂಡಿಸುವ ಮತ್ತು ಮಕ್ಕಳನ್ನು ಠಾಣೆಗೆ ಆಹ್ವಾನಿಸಿ ಲೈಂಗಿಕ ಮತ್ತು ಮಾನಸಿಕ ಕಿರುಕುಳದ ಬಗ್ಗೆ ಮುಕ್ತ ಚರ್ಚೆ ನಡೆಸಬೇಕು. ಸಮಸ್ಯೆಗಳು ಇದ್ದಲ್ಲಿ ವೈಯಕ್ತಿಕ ಸಮಾಲೋಚನೆ ಮೂಲಕ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.

ಈ ವೇಳೆ ಔರಾದ್‌ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಟಿಆರ್‌ ದೊಡ್ಡೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಇಮಲಪ್ಪ, ಪಿಎಲ್‌ಐ ಚಂದ್ರಶೇಖರ್‌, ಮಕ್ಕಳ ರಕ್ಷಣಾಧಿಕಾರಿ ಗೌರಿಶಂಕರ ಪರ್ತಾಪುರೆ, ವಲಯ ಸಂಪನ್ಮೂಲ ವ್ಯಕ್ತಿ ರಮಾಕಾಂತ ಕಾಳೆ, ನಾಗೇಶ ಸಂಗಮೆ, ಮುಖ್ಯಗುರು ಬಾಪುರಾವ್‌ ಬಿರಾದಾರ, ಗ್ರಾಮದ ತುಳಸೀರಾಮ ಜಕಾತೆ, ಚಂದ್ರಕಾಂತ, ಮಕ್ಕಳು ಮತ್ತು ಸಿಬ್ಬಂದಿ ಇದ್ದರು.