ಸಾರಾಂಶ
ಕನ್ನಡಪ್ರಭ ವಾರ್ತೆ ಶಿಕಾರಿಪುರ
ಸರ್ಕಾರಿ ಅಧಿಕಾರಿಗಳ ವರ್ತನೆ ಜನಪ್ರತಿನಿಧಿಗಳ ಗೌರವ ಹೆಚ್ಚಿಸುವಂತಿರಬೇಕು ಹೊರತು ಮರ್ಯಾದೆ ಹರಾಜು ಹಾಕುವಂತಾಗಬಾರದು ಎಂದು ಸಂಸದ ಬಿ.ವೈ.ರಾಘವೇಂದ್ರ ಎಚ್ಚರಿಸಿದರು.ಪಟ್ಟಣದ ತಾ.ಪಂ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಸರ್ಕಾರಿ ಅಧಿಕಾರಿಗಳ ತ್ರೈ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ಅಧಿಕಾರಿಗಳು ಸಾರ್ವಜನಿಕರ ಜತೆ ಸಂಯಮದಿಂದ ವರ್ತಿಸಬೇಕು ಕಡತ ಶೀಘ್ರ ವಿಲೇವಾರಿ ಪ್ರತಿಯೊಬ್ಬ ಅಧಿಕಾರಿಯ ಕರ್ತವ್ಯವಾಗಬೇಕು,ಪಟ್ಟಣದ ನಿವಾಸಿಗಳು ಇ-ಸತ್ತು ಪಡೆಯಲು ಪುರಸಭೆಗೆ ಅಲೆದಾಡುತ್ತಿದ್ದು, ಈ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪ್ರತಿಭಟನೆ ಧರಣಿ ಮತ್ತಿತರ ಘಟನೆಯಿಂದ ಜನಪ್ರತಿನಿಧಿಗಳು ತೀವ್ರ ಮುಜುಗರ ಎದುರಿಸಬೇಕಾಗಲಿದೆ ಎಂಬುದನ್ನು ಅರ್ಥೈಸಿಕೊಂಡು ಅಧಿಕಾರಿಗಳು ಜಾಗ್ರತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಅಸಮಾಧಾನ ವ್ಯಕ್ತ ಪಡಿಸಿದ ಅವರು ಇ ಸ್ವತ್ತು ಪಡೆಯಲು ನಾಗರೀಕರು ಪ್ರತಿಭಟನೆಯ ಹಂತಕ್ಕೆ ತಲುಪಿರುವುದು ದುರಾದೃಷ್ಟಕರ ಈ ಬಗ್ಗೆ ಅಧಿಕಾರಿಗಳು ಇ ಸ್ವತ್ತು ನೀಡಲು ಉಂಟಾಗಿರುವ ಸಮಸ್ಯೆಯನ್ನು ಅರ್ಥವಾಗುವ ರೀತಿಯಲ್ಲಿ ಮನದಟ್ಟು ಮಾಡುವಂತೆ ಮುಖ್ಯಾಧಿಕಾರಿ ಭರತ್ ರಿಗೆ ಸೂಚಿಸಿದರು.ಸರ್ಕಾರಿ ಕಚೇರಿಗೆ ಆಗಮಿಸುವ ಜನಸಾಮಾನ್ಯರ ಕಷ್ಟ ಅರಿತು ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಸಾರ್ವಜನಿಕರ ಜತೆಗಿನ ಅಧಿಕಾರಿಗಳ ವರ್ತನೆ ಜನಪ್ರತಿನಿಧಿಗಳ ಗೌರವ ಹೆಚ್ಚಿಸುವ ರೀತಿಯಲ್ಲಿರಬೇಕು, ಮಾಜಿ ಮುಖ್ಯಮಂತ್ರಿರವರ ಸ್ವಕ್ಷೇತ್ರಕ್ಕೆ ಕೆಟ್ಟ ಹೆಸರು ತರದ ರೀತಿ ಕರ್ತವ್ಯ ನಿರ್ವಹಿಸುವಂತೆ ತಿಳಿಸಿದ ಅವರು ಈಗಾಗಲೇ ಮುಂಗಾರು ಮಳೆ ಆರಂಭದ ಲಕ್ಷಣವಿದ್ದು, ರೈತರಿಗೆ ಅಗತ್ಯವಾದ ಭಿತ್ತನೆ ಬೀಜ, ರಸಗೊಬ್ಬರದ ಸಮರ್ಪಕ ವಿತರಣೆಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಹೆಚ್ಚಿನ ನಿಗಾವಹಿಸಬೇಕು. ಬೀಜ ಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯವಾದಲ್ಲಿ ಗಮನಕ್ಕೆ ತರುವಂತೆ ತಿಳಿಸಿ ಎಂತಹ ಸಂದರ್ಭದಲ್ಲಿಯೂ ಕೃಷಿಕರು ತೊಂದರೆ ಅನುಭವಿಸದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲು ತಿಳಿಸಿದರು.
ಇನ್ನು, ರೈತರಿಗೆ ಸಕಾಲಕ್ಕೆ ಟಿ.ಸಿ ವಿತರಿಸುವಂತೆ ಹಾಗೂ ಏತ ನೀರಾವರಿ ಯೋಜನೆಯಡಿ ತಾಲೂಕಿನ ಎಲ್ಲ ಕೆರೆಗಳಿಗೆ ನೀರು ಹರಿಸಿ ತುಂಬಿಸಲು ಅಧಿಕಾರಿಗಳು ಗಮನ ಹರಿಸುವಂತೆ ತಿಳಿಸಿದರು.ಶಾಸಕ ಬಿ.ವೈ.ವಿಜಯೇಂದ್ರ ಮಾತನಾಡಿ, ಡೆಂಘಿ ಜ್ವರದಿಂದ ಜನತೆ ವಿವಿದೆಡೆ ಬಳಲುತ್ತಿದ್ದು, ತಾಲೂಕಿನಲ್ಲಿ ಹರಡದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ ಅವರು ತಾಲೂಕಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ನೀಡಬೇಕು ವೈದ್ಯ ಸಿಬ್ಬಂದಿ ಕೊರತೆಯಿದ್ದಲ್ಲಿ ಗಮನಕ್ಕೆ ತನ್ನಿ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ದೂರು ಹೆಚ್ಚಾದಲ್ಲಿ ಜನಪ್ರತಿನಿಧಿಗಳ ಗೌರವಕ್ಕೆ ಚ್ಯುತಿ ಯಾಗಲಿದೆ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಮಲ್ಲೇಶಪ್ಪ ಪೂಜಾರ್,ಇಒ ಪರಮೇಶ್,ಸಹಾಯಕ ಕೃಷಿ ನಿರ್ದೇಶಕ ಕಿರಣಕುಮಾರ್,ತಾ.ವೈದ್ಯಾಧಿಕಾರಿ ಡಾ.ನವೀದ್ ಖಾನ್,ಮೆಸ್ಕಾಂ ಎಇಇ ಶ್ರೀಧರ್, ಪ್ರವೀಣ್, ಕೇಶವ, ಕ್ಷೇತ್ರ ಶಿಕ್ಷಣಾಧಿಕಾರಿ ಮಹಮ್ಮದ್ ರಫೀಕ್ ಖಾನ್, ರಾಜಕುಮಾರ್ ಸಹಿತ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.