ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಪ್ರಜಾಪ್ರಭುತ್ವದಲ್ಲಿ ಅತಿ ದೊಡ್ಡ ಹಬ್ಬವೆನಿಸಿರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಅರ್ಹ ಮತದಾರರೂ ತಪ್ಪದೇ ಯೋಗ್ಯ ಅಭ್ಯಥಿಗೆ ತಮ್ಮ ಮತ ಚಲಾಯಿಸಿ ಆಯ್ಕೆ ಮಾಡುವುದರ ಮೂಲಕ ಹಬ್ಬವನ್ನು ಯಶಸ್ವಿಗೊಳಿಸಬೇಕು ಎಂದು ಶಿವಮೊಗ್ಗ ಸ್ವೀಪ್ ಸಮಿತಿ ಸಂಯೋಜಕ ನವೀದ್ ಅಹಮ್ಮದ್ ಕರೆ ನೀಡಿದರು.ಇಲ್ಲಿನ ಕಣಾದ ಯೋಗ ಹಾಗೂ ಸಂಶೋಧನಾ ಪ್ರತಿಷ್ಠಾನವು ಜಿಲ್ಲಾ ಸ್ವೀಪ್ ಸಮಿತಿ ಮತ್ತು ಸಮಾನ ಮನಸ್ಕರ ವಿವಿಧ ಸಂಘಟನೆಗಳ ಸಹಯೋಗದಲ್ಲಿ ವಿಶ್ವ ಆರೋಗ್ಯ ದಿನದ ಅಂಗವಾಗಿ ಎಂ.ಆರ್.ಎಸ್.ವೃತ್ತದಿಂದ ಮಂಡೇನ್ಕೊಪ್ಪ ಸುರಭಿ ಗೋ ಶಾಲೆಯ ವರೆಗೆ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಮತ್ತು ಆರೋಗ್ಯಕ್ಕಾಗಿ ಯೋಗ ನಡಿಗೆ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಮತದಾನವೆನ್ನುವುದು ಪ್ರಜಾಪ್ರಭುತ್ವದಲ್ಲಿ ನಡೆಯುವ ಒಂದು ಪವಿತ್ರ ಕಾರ್ಯ ಮತ್ತು ಸಂಭ್ರಮದ ಹಬ್ಬ. ಇದನ್ನು ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸುವ ಮೂಲಕ ಸಡಗರದಿಂದ ಆಚರಿಸಬೇಕು ಎಂದ ಅವರು ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೇ ನಿರ್ಭೀತಿ ಮತ್ತು ನಿರ್ಭಿಡೆಯಿಂದ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.ಭಾರತ ಚುನಾವಣಾ ಆಯೋಗವು ಚುನಾವಣೆಯುಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆ, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದವರಿಗೆ ಶಿಕ್ಷೆಗೆ ಗುರಿಪಡಿಸುವ ಎಲ್ಲಾ ಕ್ರಮಗಳನ್ನೂ ಕೈಗೊಂಡಿದೆ. ಯಾರಿಗಾದರೂ ಚುನಾವಣೆಯಲ್ಲಿ ಅಕ್ರಮ ಎಸಗಿದ್ದು ಕಂಡುಬಂದಲ್ಲಿ ಸಿ-ವಿಜಿಲ್ ಆ್ಯಪ್ ಮೂಲಕ ಚುನಾವಣಾ ಆಯೋಗಕ್ಕೆ ದೂರು ನೀಡಿ ಸಹಕರಿಸಬೇಕು ಎಂದು ಕಿವಿ ಮಾತು ಹೇಳಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ಮತದಾನ ನಡೆಯಲಿದ್ದು ಮತದಾರರು ಈಗಲೇ ಮತ ಪಟ್ಟಿಯಲ್ಲಿ ತಮ್ಮ ಹೆಸರಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಅಲ್ಲದೆ ತಮ್ಮ ಮತ ಗಟ್ಟೆ ಯಾವುದು ಎಂಬುದರ ಬಗ್ಗೆಯೂ ಖಾತ್ರಿ ಪಡಿಸಿಕೊಳ್ಳಬೇಕು ಎಂದ ಅವರು ಒಂದು ವೇಳೆ ಮತ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದೇ ಹೋದಲ್ಲಿ ಹೆಸರು ನೋಂದಾಯಿಸಲು ಏಪ್ರಿಲ್ 9ರ ವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.ಹೊರ ಊರಿನಲ್ಲಿ ನೆಲೆಸಿರುವವರಿಗೆ ಮತ ಮತ ಚಲಾಯಿಸಲು ವೇತನ ಸಹಿತ ರಜೆ ನೀಡಲಾಗಿದೆ. ಅದರ ಸದುಪಯೋಗವನ್ನು ಅವರು ಪಡೆದುಕೊಳ್ಳಬೇಕು ಎಂದ ಅವರು ಈ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ನೂರಕ್ಕೆ ನೂರೂ ಮತದಾನವಾಗಬೇಕು ಎಂಬುದು ಸ್ವೀಪ್ ನ ಆಶಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಅರ್ಹ ಮತದಾರರೂ ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದು ಅವರು ಹೇಳಿದರು.
ಕಣಾದ ಯೋಗ ಕೇಂದ್ರದ ಯೋಗಗುರು ಅನಿಲಕುಮಾರ ಶೆಟ್ಟರ್ ಮಾತನಾಡಿ, ಇಂದು ವಿಶ್ವ ಆರೋಗ್ಯ ದಿನವಾಗಿದ್ದು, ಚುನಾವಣಾ ಸಮಯವೂ ಆಗಿದ್ದರಿಂದ ಮತದಾನ ಜಾಗೃತಿ ಜತೆಗೆ ಆರೋಗ್ಯಕ್ಕಾಗಿ ಯೋಗ ನಡಿಗೆ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ನಗರದ ಎಂ.ಆರ್.ಎಸ್.ವೃತ್ತದಿಂದ 7 ಕಿ.ಮೀ.ದೂರದಲ್ಲಿರುವ ಮಂಡೇನಕೊಪ್ಪದಲ್ಲಿರುವ ಸುರಭಿ ಗೋ ಶಾಲೆಯವರೆಗೆ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ಪ್ರತಿಯೊಬ್ಬರೂ ಪ್ರತಿ ನಿತ್ಯ ಯೋಗಾಭ್ಯಾಸವನ್ನು ಮಾಡುವುದರ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರಲ್ಲದೆ ಸಾರ್ವಜನಿಕರಲ್ಲಿ ಆರೋಗ್ಯದ ಜತೆಗೆ ಮತದಾನದ ಮಹತ್ವ ತಿಳಿಸುವ ಮಹೋನ್ನತ ಉದ್ಧೇಶ ಈ ಜಾಥಾದ್ದಾಗಿದೆ. ಸುಮಾರು ನೂರು ಜನ ಇದರಲ್ಲಿ ಪಾಲ್ಗೊಳ್ಳುತ್ತಿರುವುದಾಗಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಡಾ.ಬಾಲಕೃಷ್ಣ ಹೆಗಡೆ, ತ್ಯಾಗರಾಜ ಮಿತ್ಯಾಂತ, ಬೆಲಗೂರು ಮಂಜುನಾಥ, ಬಾಲಾಜಿ ದೇಶಪಾಂಡೆ, ಜಯಂತಿ, ರೂಪಾ, ಅಕ್ಷತಾ ಮತ್ತಿತರರು ಇದ್ದರು.